ಸೈಟು ವಾಪಸ್‌ ಕೊಟ್ಟಿರುವುದು ಸಿದ್ದುಗೆ ಮತ್ತಷ್ಟು ಸಂಕಷ್ಟ: ಬೊಮ್ಮಾಯಿ

KannadaprabhaNewsNetwork |  
Published : Oct 02, 2024, 01:03 AM IST
ಬೊಮ್ಮಯಿ | Kannada Prabha

ಸಾರಾಂಶ

ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ. ಈಗ ಸೈಟ್ ವಾಪಸ್ ಮಾಡಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದರು.

ಹುಬ್ಬಳ್ಳಿ: ಮುಡಾ ಸೈಟ್ ವಾಪಸ್ ಕೊಡುವ ಮೂಲಕ ಸಿಎಂ ಸಿದ್ದರಾಮಯ್ಯ ಮತ್ತಷ್ಟು ಸಂಕಷ್ಟವನ್ನು ಮೈಮೇಲೆ ಎಳೆದುಕೊಂಡಿದ್ದಾರೆ ಎಂದು ಸಂಸದ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಸಿದ್ದರಾಮಯ್ಯ ಪತ್ನಿ ಮುಡಾ ಸೈಟ್ ವಾಪಸ್ ಕೊಟ್ಟಿರುವ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಈ ಕೆಲಸವನ್ನು ಅವರು ಮೊದಲೇ ಮಾಡಬೇಕಿತ್ತು. ಆಗಲೇ ಹೈಕೋರ್ಟ್ ನ್ಯಾಯಮೂರ್ತಿಗಳ ಮೂಲಕ ತನಿಖೆ ಮಾಡಿಸಿದ್ದರೆ ಮುಗಿದು ಹೋಗುತ್ತಿತ್ತು. ಸಿದ್ದರಾಮಯ್ಯ ಅವರ ಪ್ರಾಮಾಣಿಕತೆ ಬಗ್ಗೆ ಪ್ರಶ್ನೆ ಬರುತ್ತಿರಲಿಲ್ಲ. ಆದರೆ, ಆಗ ಸಮರ್ಥನೆ ಮಾಡಿಕೊಂಡರು. ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟು, ಪ್ರಕರಣ ದಾಖಲಾಗಿ, ತನಿಖೆ ನಡೆದಿದೆ. ಈಗ ವಾಪಸ್ ಮಾಡಿರುವುದರಿಂದ ಹಲವಾರು ಪ್ರಶ್ನೆಗಳು ಉದ್ಭವಿಸಿವೆ. ಸೈಟ್ ವಾಪಸ್ ಮಾಡುವ ಮೂಲಕ ಮತ್ತಷ್ಟು ಜಟಿಲ ಮಾಡಿಕೊಂಡಿದ್ದಾರೆ ಎಂದು ಹೇಳಿದರು.

ಎಫ್ಐಆರ್ ಆದ್ಮೇಲೆ ತನಿಖೆ ಆಗಲೇಬೇಕು. ಒಂದು ಕಡೆ ಲೋಕಾಯುಕ್ತ ತನಿಖೆ ನಡೆದಿದೆ. ಮತ್ತೊಂದು ಕಡೆ ಇಡಿ ಎಫ್ಐಆರ್ ಮಾಡಿಕೊಂಡು ತನಿಖೆ ಮಾಡುತ್ತಿದೆ. ಮೊದಲು ಕಾಂಗ್ರೆಸ್ ನಾಯಕರು ತಪ್ಪೇ ನಡೆದಿಲ್ಲ ಅನ್ನುತ್ತಿದ್ದರು. ಈಗ ಸೈಟ್ ವಾಪಸ್ ಕೊಟ್ಟು ತಪ್ಪಾಗಿದೆ ಅನ್ನುವುದನ್ನು ಒಪ್ಪಿಕೊಂಡಂತಾಗಿದೆ ಎಂದರು.

ಹಿಂದೆ ಯಡಿಯೂರಪ್ಪ ಸೈಟ್ ವಾಪಸ್ ಮಾಡಿದಾಗ ಇದೇ ಸಿದ್ದರಾಮಯ್ಯ ಏನು ಹೇಳಿದ್ದರು ನೆನಪಿಸಿಕೊಳ್ಳಲಿ, ಆಗ ಯಡಿಯೂರಪ್ಪ ಸೈಟ್ ವಾಪಸ್ ಮಾಡುವ ಮೂಲಕ ತಪ್ಪನ್ನು ಒಪ್ಪಿಕೊಂಡಿದ್ದಾರೆ ಅಂತ ಹೇಳಿದ್ದರು. ಈಗ ಇದೇ ಮಾತು ಸಿದ್ದರಾಮಯ್ಯ ಅವರಿಗೂ ಅನ್ವಯ ಆಗುತ್ತದೆ. ಸೈಟ್ ವಾಪಸ್ ನೊಂದಿಗೆ ಅಕ್ರಮ ಆಗಿರುವುದನ್ನು, ಸೈಟು ಹಂಚಿಕೆ ಕಾನೂನುಬಾಹಿರವಾಗಿ ಆಗಿದೆ ಅನ್ನುವುದನ್ನು ಅವರೇ ಒಪ್ಪಿಕೊಂಡಿದ್ದಾರೆ ಎಂದು ಹೇಳಿದರು.

ಮಾಡಿರುವ ಹಗರಣ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ: ಟೆಂಗಿನಕಾಯಿ

ಹುಬ್ಬಳ್ಳಿ: ಮುಡಾ ಹಗರಣದಲ್ಲಿ ಎಫ್ಐಆರ್ ಆಗಿ ಈಗ ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ 14 ಸೈಟ್ ಗಳನ್ನು ಹಿಂತಿರುಗಿಸುವುದಾಗಿ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ಮುಖ್ಯಮಂತ್ರಿಗಳು ಮಾಡಿದ ಈ ಹಗರಣವನ್ನು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹರಿಹಾಯ್ದರು.

ಈ ಕುರಿತು ಪ್ರಕಟಣೆ ನೀಡಿ, ಮುಡಾ ಹಗರಣದಲ್ಲಿ ಈಗಾಗಲೇ ತನಿಖೆ ಪ್ರಾರಂಭವಾಗಿದ್ದು ಇಂತಹ ಸಂದರ್ಭದಲ್ಲಿ ಸೈಟ್ ಗಳನ್ನು ವಾಪಸ್ ನೀಡುತ್ತೇವೆ ಎಂದಾಕ್ಷಣ ಇದರ ಕಥೆ ಮುಗಿಯುವುದಿಲ್ಲ. ಈಗಾಗಲೇ ಈಡಿ ಕೇಸ್ ದಾಖಲಾಗಿದೆ. ಭ್ರಷ್ಟಾಚಾರಗಳ ಸತ್ಯಾಂಶಗಳು ಬರುವ ದಿನಗಳಲ್ಲಿ ಮುಡಾ ಹಗರಣ ಸಂಪೂರ್ಣ ಹೊರ ಬರಲಿದೆ. ಈ ಪ್ರಕರಣ ಹೊರಬರಲು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ಸದನದ ಒಳಗಡೆ ಅಹೋರಾತ್ರಿ ಧರಣಿ ಮಾಡಿದ್ದೇವೆ ಹಾಗೂ ಬೆಂಗಳೂರಿನಿಂದ ಮೈಸೂರು ವರೆಗೆ ಪಾದಯಾತ್ರೆ ಮಾಡುವ ಮೂಲಕ ಹೋರಾಟ ಮಾಡಿದ್ದೇವೆ ಎಂದರು.

ಈಗಲಾದರೂ ಸಿದ್ದರಾಮಯ್ಯ ಗೌರವಯುತವಾಗಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸುವುದು ಸೂಕ್ತ. ಈಗಾಗಲೇ ಕಾಂಗ್ರೆಸ್ ಪಕ್ಷದಲ್ಲಿ ಮುಖ್ಯಮಂತ್ರಿ ಪಟ್ಟಕ್ಕಾಗಿ ಅನೇಕರು ಸರತಿ ಸಾಲಿನಲ್ಲಿ ನಿಂತಿದ್ದಾರೆ. ಅವರ ಪಕ್ಷದವರೇ ಬೇಗ ರಾಜೀನಾಮೆ ನೀಡಲಿ ಎಂದು ಕಾಯುತ್ತಿದ್ದಾರೆ ಎಂದು ತಿಳಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶೇ.11ರಷ್ಟು ಟೊಯೋಟಾ ಕಾರುಗಳು ರಾಜ್ಯದಲ್ಲೇ ಸೇಲ್‌
ರಾಜ್ಯದಲ್ಲಿ 2 ದಿನ ಮೋಡಕವಿದ ವಾತಾವರಣ, ಮಳೆ