ರೇವಾ ಸ್ಟಾರ್ಟ್‌ ಅಪ್‌ ಶೃಂಗ ಯಶಸ್ವಿ

KannadaprabhaNewsNetwork | Published : Dec 6, 2024 8:57 AM

ಸಾರಾಂಶ

ಯುವ ಪೀಳಿಗೆಯಲ್ಲಿ ನಾವೀನ್ಯತೆ, ಉದ್ಯಮ ಸೃಷ್ಟಿಯ ಮನೋಭಾವ ಪೋಷಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರೇವಾ ವಿಶ್ವವಿದ್ಯಾಲಯ ಇತ್ತೀಚೆಗೆ ಆಯೋಜಿಸಿದ್ದ ‘ರೇವಾ ಸ್ಟಾರ್ಟ್‌ ಅಪ್‌ ಶೃಂಗಸಭೆ-2024’ ಅರ್ಥಪೂರ್ಣವಾಗಿ ಯಶಸ್ವಿಯಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಯುವ ಪೀಳಿಗೆಯಲ್ಲಿ ನಾವೀನ್ಯತೆ, ಉದ್ಯಮ ಸೃಷ್ಟಿಯ ಮನೋಭಾವ ಪೋಷಿಸುವ ನಿಟ್ಟಿನಲ್ಲಿ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ರೇವಾ ವಿಶ್ವವಿದ್ಯಾಲಯ ಇತ್ತೀಚೆಗೆ ಆಯೋಜಿಸಿದ್ದ ‘ರೇವಾ ಸ್ಟಾರ್ಟ್‌ ಅಪ್‌ ಶೃಂಗಸಭೆ-2024’ ಅರ್ಥಪೂರ್ಣವಾಗಿ ಯಶಸ್ವಿಯಾಯಿತು.

ಹಲವು ಉದ್ಯಮಿಗಳು ಶೃಂಗಸಭೆಯ ‘ವಿಶ್ವವಿದ್ಯಾಲಯ ಮತ್ತು ಉದ್ಯಮ’ ಕುರಿತ ಸಂವಾದದಲ್ಲಿ ಪಾಲ್ಗೊಂಡು ಸ್ಟಾರ್ಟ್‌ ಅಪ್‌ಗಳನ್ನು ಸ್ಥಾಪಿಸುವ ಹಾಗೂ ಮುನ್ನಡೆಸಲು ಇರುವ ಸವಾಲುಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿಕೊಡುವ ಮೂಲಕ ಉತ್ತೇಜಿಸುವ ಕೆಲಸ ಮಾಡಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನ್ಯೂಮೋಸಿಟಿಯ ಸಿಇಒ ಹಾಗೂ ಸಹ ಸಂಸ್ಥಾಪಕ ರವಿಕಿರಣ್‌ ಅಣ್ಣಾಸ್ವಾಮಿ ಮಾತನಾಡಿ, ಸ್ಟಾರ್ಟ್‌ ಅಪ್‌ ಆರಂಭಿಸುವುದು ಸುಲಭದ ಮಾತಲ್ಲ. ಏಕೆಂದರೆ ಯಾವುದೇ ಕ್ಷೇತ್ರದಲ್ಲಿ ಜನರ ಅಗತ್ಯತೆಗಳು ಕಾಲ ಕಾಲಕ್ಕೆ ಬದಲಾಗುತ್ತಾ ಸಾಗುತ್ತಿರುತ್ತವೆ. ಯಾವುದೇ ಒಂದು ಅಗತ್ಯಕ್ಕೆ ಸ್ಟಾರ್ಟ್‌ ಅಪ್‌ ಆರಂಭಿಸುವವ ವೇಳೆಗೆ ಆ ಅಗತ್ಯತೆ, ಬೇಡಿಕೆ, ಸಮಸ್ಯೆಗಳು ಮಾರ್ಪಾಡಾಗಿರುತ್ತದೆ. ಹಾಗಾಗಿ ಈಗ ಮಾತ್ರವಲ್ಲ ಭವಿಷ್ಯದಲ್ಲಿ ಜನರು ಏನು ಬಯಸಬಹುದು, ಅವರಿಗೆ ಸುಧಾರಿತ ಕ್ರಮದಲ್ಲಿ ಏನು ಬೇಕು ಎಂಬ ಬಗ್ಗೆ ಕಲ್ಪನೆ ಅಥವಾ ಸ್ಪಷ್ಟತೆ ಆರಂಭದಲ್ಲೇ ಇರಬೇಕಾಗುತ್ತದೆ. ಎಲ್ಲಕ್ಕಿಂತ ಸ್ಟಾರ್ಟ್‌ ಅಪ್‌ಗಳ ಯಶಸ್ವಿಗೆ, ಮುಂದುವರಿಕೆಗೆ ಪೂರಕವಾದ ಬಂಡವಾಳ ಆಕರ್ಷಿಸುವುದು ಬಹಳ ಮುಖ್ಯ ಎಂದರು.

ಜೋಸ್‌ ಅಲುಕ್ಕಾಸ್‌ ವ್ಯವಸ್ಥಾಪಕ ನಿರ್ದೇಶಕ ವರ್ಗೀಸ್‌ ಅಲುಕ್ಕಾಸ್‌ ಮಾತನಾಡಿ, ನಾವು ಪ್ರತಿದಿನ ಮಾಡುವ ಕೆಲಸಗಳು ಸ್ಟಾರ್ಟ್‌ ಅಪ್‌ಗಳಂತೆಯೇ ಭಾಸವಾಗುತ್ತವೆ. ಯಾವುದೇ ನಾವೀನ್ಯತೆಯ ಉದ್ಯಮ, ವ್ಯಾಪಾರವನ್ನು ಉತ್ಸಾಹದಿಂದ ಪರಿಗಣಿಸಬೇಕು. ಜನರ ಅಗತ್ಯಗಳನ್ನು ಅರ್ಥಮಾಡಿಕೊಂಡು ಉದ್ಯಮ ಬೆಳವಣಿಗೆಗೆ ಸಮರ್ಪಣಾ ಮನೋಭಾವ ಮತ್ತು ಸ್ಥಿರತೆಯನ್ನು ಕಾಯ್ದುಕೊಳ್ಳಬೇಕು ಎಂದರು.

ರೇವಾ ವಿಶ್ವವಿದ್ಯಾಲಯದ ಕುಲಾಧಿಪತಿ ಡಾ। ಪಿ.ಶ್ಯಾಮರಾಜು ಮಾತನಾಡಿ, ಯುವ ಪೀಳಿಗೆ ವ್ಯಾಸಂಗ ಮುಗಿದ ಬಳಿಕ ಉದ್ಯೋಗ ಹುಡುಕುವ ಬದಲು ತಾವೇ ಒಂದು ಉದ್ಯಮ ಆರಂಭಿಸಿ ನಾಲ್ಕಾರು ಜನರಿಗೆ ಉದ್ಯೋಗ ನೀಡುವ ಗುರಿ ಇಟ್ಟುಕೊಳ್ಳಬೇಕು. 2030ರ ವೇಳೆಗೆ ನಮ್ಮ ವಿವಿಯ ಕನಿಷ್ಠ ಶೇ.10ರಷ್ಟು ವಿದ್ಯಾರ್ಥಿಗಳು ಉದ್ಯೋಗ ನೀಡುವ ಉದ್ಯಮಶೀಲ ಗುಣ ಬೆಳೆಸುವ ಗುರಿ ಹೊಂದಿದೆ. ಈ ನಿಟ್ಟಿನಲ್ಲಿ ರೇವಾ ನೆಸ್ಟ್ ಎಂಬ ತಂತ್ರಜ್ಞಾನ ಉದ್ಯಮ ಇನ್‌ ಕ್ಯುಬೇಟರ್‌ ವಿದ್ಯಾರ್ಥಿಗಳಲ್ಲಿ ಹೊಸ ಉದ್ಯಮ ಆಲೋಚನೆಗಳನ್ನು ಸೃಷ್ಟಿಸಲು ನೆರವಾಗುತ್ತಿದೆ ಎಂದರು.

ಕಾರ್ಯಕ್ರಮದಲ್ಲಿ ರೇವಾ ವಿವಿ ಕುಲಪತಿ ಡಾ। ಸಂಜಯ್‌ ಆರ್‌.ಚಿಟ್ನಿಸ್‌, ಸಹ ಕುಲಪತಿ ಡಾ। ಆರ್‌.ಸಿ.ಬಿರಾದಾರ್‌ ಇದ್ದರು.

Share this article