ಮರುಮೌಲ್ಯಮಾಪನ: ಎಸ್ಸೆಸ್ಸೆಲ್ಸಿಯಲ್ಲಿ ಮಲ್ಲಸಂದ್ರ ವಿದ್ಯಾರ್ಥಿನಿಗೆ 625ಕ್ಕೆ 625

KannadaprabhaNewsNetwork | Published : Jun 6, 2024 1:46 AM

ಸಾರಾಂಶ

ಮಲ್ಲಸಂದ್ರದ ಬಿ.ಎನ್.ಆರ್ ಶಾಲೆಯ ವಿದ್ಯಾರ್ಥಿನಿ ಭಾವನ ಟಿ.ಎಸ್. ಅವರು ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಮೊದಲು 625ಕ್ಕೆ 620 ಅಂಕಗಳ ಪಡೆದಿದ್ದರು. ಆದರೆ, ಮತ್ತೆ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದು ಈ ಸಾಧನೆಗೈದ ರಾಜ್ಯದ ಎರಡನೇ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಕನ್ನಡಪ್ರಭ ವಾರ್ತೆ ಪೀಣ್ಯ ದಾಸರಹಳ್ಳಿ

ಮಲ್ಲಸಂದ್ರದ ಬಿ.ಎನ್.ಆರ್ ಶಾಲೆಯ ವಿದ್ಯಾರ್ಥಿನಿ ಭಾವನ ಟಿ.ಎಸ್. ಅವರು ಈ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಈ ಮೊದಲು 625ಕ್ಕೆ 620 ಅಂಕಗಳ ಪಡೆದಿದ್ದರು. ಆದರೆ, ಮತ್ತೆ ಮರು ಮೌಲ್ಯಮಾಪನದಲ್ಲಿ 625ಕ್ಕೆ 625 ಅಂಕ ಪಡೆದು ಈ ಸಾಧನೆಗೈದ ರಾಜ್ಯದ ಎರಡನೇ ವಿದ್ಯಾರ್ಥಿನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಸೂರಜ್ ಫೌಂಡೇಶನ್ ವತಿಯಿಂದ ವಿದ್ಯಾರ್ಥಿನಿಗೆ ಶಾಸಕ ಎಸ್.ಮುನಿರಾಜು ಅವರು ಪುಸ್ತಕ ಮತ್ತು ಸಮವಸ್ತ್ರಕ್ಕೆ 25 ಸಾವಿರ ನಗದು ನೀಡಿ, ಸಿಹಿ ತಿನಿಸಿ ಅಭಿನಂದಿಸಿದರು.

ಬಳಿಕ ಮಾತನಾಡಿದ ಶಾಸಕ ಎಸ್.ಮುನಿರಾಜು, ರಾಜ್ಯಕ್ಕೆ ಹೆಸರು ತಂದಿರುವ ಈ ವಿದ್ಯಾರ್ಥಿನಿಯ ಪಿಯುಸಿಗೆ ಬೇಕಾದ ಪುಸ್ತಕ ಸಮವಸ್ತ್ರಗಳಿಗೆ ಪ್ರತಿ ವರ್ಷ ವಿದ್ಯಾಭ್ಯಾಸಕ್ಕೆ ಸೂರಜ್ ಫೌಂಡೇಶನ್ ಸಂಸ್ಥಾಪಕಿ ಸುಜಾತ ಮುನಿರಾಜು ಅವರಿಂದ 25 ಸಾವಿರ ನಗದು ಹಣ ನೀಡುತ್ತಾರೆ ಎಂದರು.

ಅಷ್ಟೇ ಅಲ್ಲದೆ, ನಮ್ಮ ಸ್ನೇಹಿತರಿಗೂ ತಿಳಿಸಿ ಆ ಮಗುವಿನ ಮುಂದಿನ ಭವಿಷ್ಯಕ್ಕೆ ಅನುಕೂಲ ಮಾಡಿಕೊಡಿ ಎಂದು ಹೇಳಿದ್ದೇವೆ. ಅಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಕೂಡ ಬರೆದಿದ್ದೇನೆ ಎಂದು ತಿಳಿಸಿದರಲ್ಲದೆ, ವಿದ್ಯಾರ್ಥಿನಿಗೆ ಎನ್‌.ಪ್ಲಸ್‌ ಅಕಾಡೆಮಿ ಕಾಲೇಜಿಗೆ ಪ್ರವೇಶಾತಿ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ.

ವಿದ್ಯಾರ್ಥಿನಿ ತಂದೆ ಸಿದ್ದೇಗೌಡ ಮಾತನಾಡಿ, ನಾನು ಕ್ಯಾಬ್ ಚಾಲಕನಾದರೂ ಕೂಡ ನನ್ನ ಮಗಳ ವಿದ್ಯಾಭ್ಯಾಸಕ್ಕೆ ಕೊರತೆ ಮಾಡಲಿಲ್ಲ, ಅವಳಿಗೆ ಬೇಕಾದ ಪುಸ್ತಕ, ಬಟ್ಟೆ, ಸಮವಸ್ತ್ರ, ಶುಲ್ಕ ಎಲ್ಲವನ್ನೂ ಪೂರೈಸಿದ್ದೆ. ಅವಳು ಸಹ ಪ್ರತಿ ವರ್ಷವೂ ಕೂಡ ಚೆನ್ನಾಗಿ ಓದಿ ಹೆಚ್ಚು ಅಂಕ ಪಡೆಯುತ್ತಿದ್ದಳು ಎಂದು ಹರ್ಷ ವ್ಯಕ್ತಪಡಿಸಿದರು.

ಬಿ.ಎನ್.ಆರ್. ಶಾಲೆಯ ಪ್ರಾಶುಂಪಾಲ ಭೂಷಣ್ ಎನ್. ಮಾತನಾಡಿದರು.

ಈ ಸಂದರ್ಭದಲ್ಲಿ ಮಂಡಲ ಬಿಜೆಪಿಯ ಅಧ್ಯಕ್ಷ ಸೋಮಶೇಖರ್, ಮುಖಂಡ ಗುರುಪ್ರಸಾದ್, ಪಾಂಡು ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Share this article