ದೇವೇಗೌಡರ ಕುಟುಂಬದ ವಿರುದ್ಧ ಅಬ್ಬರಿಸಿದ್ದ ಸಿಎಂ ಸಿದ್ದರಾಮಯ್ಯ ಟೀಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು

KannadaprabhaNewsNetwork |  
Published : Dec 07, 2024, 12:33 AM ISTUpdated : Dec 07, 2024, 12:22 PM IST
HD revanna

ಸಾರಾಂಶ

  ದೇವೇಗೌಡರ ಕುಟುಂಬದ ವಿರುದ್ಧ ಅಬ್ಬರಿಸಿದ್ದ ಸಿಎಂ ಸಿದ್ದರಾಮಯ್ಯ ಟೀಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು.   ದೇವೇಗೌಡರ ಯಾವ್ಯಾವ ಸಾಕ್ಷಿ ಗುಡ್ಡೆ ಇದೆ ಎಂಬುದನ್ನು ಕಾಲ ಬಂದಾಗ ಹೇಳ್ತೀನಿ. ಅವರು ಬಂದರೆ ಕರೆದುಕೊಂಡು ಹೋಗಿ ಎಲ್ಲೆಲ್ಲಿ ಸಾಕ್ಷಿ ಗುಡ್ಡೆ ಇದೆ ಅಂತ ತೋರುಸ್ತೀನಿ ಎಂದಿದ್ದಾರೆ.  

 ಹಾಸನ : ನಗರದಲ್ಲಿ ನಡೆದ ಕಾಂಗ್ರೆಸಿನ ಜನಕಲ್ಯಾಣ ಸಮಾವೇಶದಲ್ಲಿ ದೇವೇಗೌಡರ ಕುಟುಂಬದ ವಿರುದ್ಧ ಅಬ್ಬರಿಸಿದ್ದ ಸಿಎಂ ಸಿದ್ದರಾಮಯ್ಯ ಟೀಕೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ ತಿರುಗೇಟು ನೀಡಿದ್ದು, ಹಾಸನದಲ್ಲಿ ದೇವೇಗೌಡರ ಯಾವ್ಯಾವ ಸಾಕ್ಷಿ ಗುಡ್ಡೆ ಇದೆ ಎಂಬುದನ್ನು ಕಾಲ ಬಂದಾಗ ಹೇಳ್ತೀನಿ. ಅವರು ಬಂದರೆ ಕರೆದುಕೊಂಡು ಹೋಗಿ ಎಲ್ಲೆಲ್ಲಿ ಸಾಕ್ಷಿ ಗುಡ್ಡೆ ಇದೆ ಅಂತ ತೋರುಸ್ತೀನಿ ಎಂದಿದ್ದಾರೆ.

ಚನ್ನರಾಯಪಟ್ಟಣ ತಾಲೂಕಿನ ಶ್ರವಣಬೆಳಗೊಳದಲ್ಲಿ ಕರ್ಮಯೋಗಿ ದಿಗಂಬರ ಜೈನ ಮಹಾಸಂಸ್ಥಾನ ಮಠದ ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕರ ಸ್ವಾಮೀಜಿಗಳ ನಿಷಿಧಿ ಮಂಟಪ ಲೋಕಾರ್ಪಣೆ ಕಾರ್ಯಕ್ರಮಕ್ಕೆ ತಡವಾಗಿ ಆಗಮಿಸಿದ ಅವರು, ನಿಷಿಧಿ ಮಂಟಪಕ್ಕೆ ಪುಷ್ಪನಮನ ಸಲ್ಲಿಸಿದ ನಂತರ ಮಾತನಾಡಿ, ಹಾಸನ ಬಸ್‌ ಸ್ಟ್ಯಾಂಡ್, ಹಾಸನ-ಬೆಂಗಳೂರು ರೈಲ್ವೆ ಮಾರ್ಗ, 900 ಕೋಟಿ ರು. ವೆಚ್ಚದಲ್ಲಿ 24 ಮೇಲ್ಸೇತುವೆ, ಮೆಡಿಕಲ್ ಕಾಲೇಜಿಗೆ 250 ಕೋಟಿ ಕೊಟ್ಟಿದ್ದೀವಿ. ನಾವು ಕಟ್ಟೋದು, ಅವರು ಉದ್ಘಾಟನೆ ಮಾಡೋದು. ಹಾಸನ ಫ್ಲೈ ಓವರನ್ನು ಕಾಂಗ್ರೆಸ್ ಸರ್ಕಾರ ಇದ್ದಾಗ ಏಕೆ ಮಾಡಲಿಲ್ಲ. ಕೋರ್ಟ್, ಎಂಜಿನಿಯರಿಂಗ್‌ ಕಾಲೇಜು, 120 ಕೋಟಿ ಖರ್ಚು ಮಾಡಿರುವ ನಂಬರ್ ಒನ್ ಎಂಜಿನಿಯರ್‌ ಕಾಲೇಜು ಇದ್ದರೆ ಅದು ಹಾಸನ, ರಾಮನಗರ, ಹೊಳೆನರಸೀಪುರ ತಾಲೂಕಿನ ಮೊಸಳೆ ಹೊಸಳ್ಳಿಯಲ್ಲಿ ಮಾತ್ರ. ಈ ಜಿಲ್ಲೆಯಲ್ಲಿ ಕಾಲೇಜುಗಳನ್ನು ಯಾವ ರೀತಿ ಮಾಡಿದ್ದೀವಿ. ಈ ಜಿಲ್ಲೆಗೆ ಏನು ಬೇಕೋ ದೇವೇಗೌಡರು ಶಕ್ತಿ ಮೀರಿ ಕೆಲಸ ಮಾಡಿದ್ದಾರೆ. ಇನ್ನೂ ಏನು ಸಾಕ್ಷಿಗುಡ್ಡೆ ಬೇಕು ನಿಮಗೆ ಎಂದರು.

ಇನ್ನೂ ಸ್ವಲ್ಪ ದಿನ ಹೋಗಲಿ ರಾಜಕೀಯವಾಗಿ ಏನೇನು ನಡೆಯುತ್ತದೆ ಎಂದು ಹೇಳುತ್ತೇನೆ. ಹಾಸನ ಜಿಲ್ಲೆಯ ಏಳಕ್ಕೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಗೆಲ್ಲುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರಲ್ಲಾ ಈಗ ಅದರ ಬಗ್ಗೆ ಏನು ಹೇಳಲ್ಲ. ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಆಗಿ ಇಳಿದ ಮೇಲೆ ಮೂರು ವರ್ಷ ಈ ಜಿಲ್ಲೆಯಲ್ಲಿ ರಾಜಕಾರಣ ಹೇಗೆ ನಡೆಯಿತು ಅಂತ ಜನರಿಗೆ ಗೊತ್ತಿದೆ ಎಂದರು.

ದೇವೇಗೌಡರು ಒಕ್ಕಲಿಗ ನಾಯಕರನ್ನು ಬೆಳೆಸಿಲ್ಲ ಎಂಬ ಟೀಕೆಗೆ ಪ್ರತಿಕ್ರಿಯಿಸಿ ಒಕ್ಕಲಿಗರ ನಾಯಕರು ಬೆಳೆಸಿಲ್ವಾ. ಬಿ.ಎಲ್.ಶಂಕರ್ ಅವರು ಇಲ್ಲಿ(ಜೆಡಿಎಸ್‌) ಇದ್ದಾಗ ಅವರಿಗೆ ಅಧಿಕಾರ ಏನೇನಿತ್ತು. ಈಗ ಬಿ.ಎಲ್.ಶಂಕರ್ ಕಾಂಗ್ರೆಸ್‌ಗೆ ಹೋದ ಮೇಲೆ ಏನು ಮಾಡಿದ್ದಾರೆ. ಕಾಂಗ್ರೆಸ್‌ಗೆ ಹೋದ ಮೇಲೆ ಅವರ ಪರಿಸ್ಥಿತಿ ಏನಾಗಿದೆ. ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲೆ ಬಿಡುಗಡೆ ಮಾಡ್ತಿದ್ದಾರೆ. ಅವರಿಗೆ ಒಳ್ಳೆಯದಾಗಲಿ. ಬಿ.ಎಲ್.ಶಂಕರ್ ನನ್ನ ಆತ್ಮೀಯ ಸ್ನೇಹಿತರು, ನನಗೆ ಅವರ ಬಗ್ಗೆ ಗೌರವವಿದೆ. ಈಗಲಾದರೂ ಅವರಿಗೆ ಎಂಎಲ್‌ಸಿ ಕೊಟ್ಟು, ಮಂತ್ರಿ ಮಾಡಿ ನಮ್ಮ ಸಮಾಜದ ಗೌರವ ಉಳಿಸಿಕೊಡಿ ಎಂದು ಆಗ್ರಹಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಅಧಿವೇಶನ ಮುಗಿದ ಬಳಿಕ ಡಿಕೆಶಿಗೆ ಶುಭಸುದ್ದಿ : ಇಕ್ಬಾಲ್
ಬೆಳಗಾವೀಲೂ ‘ಕೈ’ ಡಿನ್ನರ್‌ ಸಭೆಗೆ ಬಿವೈವಿ ಕಿಡಿ