ತಾಯಿಯ ನೆನೆದು ಪತ್ರಿಕಾಗೋಷ್ಠಿಯಲ್ಲೇ ಕಣ್ಣೀರು ಹಾಕಿದ ರೇವಣ್ಣ

KannadaprabhaNewsNetwork |  
Published : Jul 24, 2026, 12:45 AM IST
23ಎಚ್ಎಸ್ಎನ್7 :  | Kannada Prabha

ಸಾರಾಂಶ

ಹಾಸನ ತಾಲೂಕಿನ ಮುತ್ತಿಗೆ ಹಿರೆಹಳ್ಳಿ ಗ್ರಾಮದ ಸಾಮಾನ್ಯ ರೈತ ಕುಟುಂಬದ ಪುತ್ರಿಯಾಗಿದ್ದ ಚೆನ್ನಮ್ಮ ಅವರು, ಕಷ್ಟದಲ್ಲಿದ್ದವರಿಗೆ ನೆರವಾಗುವುದನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದರು. ಮನೆಗೆ ಬಂದ ಯಾರನ್ನೂ ಊಟವಿಲ್ಲದೆ ಕಳುಹಿಸುತ್ತಿರಲಿಲ್ಲ. ಸಾವಿರಾರು ಜನರಿಗೆ ಅನ್ನದಾನ ಮಾಡಿದ್ದು ಮಾತ್ರವಲ್ಲದೆ, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದರು ಹಾಗೂ ಉದ್ಯೋಗ ಸಿಗುವಂತೆ ಸಹಾಯ ಮಾಡಿದ್ದರು ಎಂದು ರೇವಣ್ಣ ಸ್ಮರಿಸಿದರು. ತಾಯಿ ಚನ್ನಮ್ಮನವರ ಆರಾಧನಾ ಮಹೋತ್ಸವಕ್ಕೆ ಸಮಸ್ತ ಜನತೆಯನ್ನು ಆಹ್ವಾನಿಸುತ್ತಿದ್ದ ಎಚ್‌.ಡಿ.ರೇವಣ್ಣ ಅವರು ಪತ್ರಿಕಾಗೋಷ್ಟಿಯಲ್ಲೇ ತಾಯಿಯನ್ನು ನೆನೆನು ಭಾವುಕರಾಗಿ ಕಣ್ಣೀರಿಟ್ಟರು.

ಕನ್ನಡಪ್ರಭ ವಾರ್ತೆ ಹಾಸನ

ಮಾಜಿ ಪ್ರಧಾನಿ ಎಚ್‌. ಡಿ. ದೇವೇಗೌಡರ ಪತ್ನಿ ಹಾಗೂ ತಮ್ಮ ತಾಯಿ ಚನ್ನಮ್ಮನವರ ಆರಾಧನಾ ಮಹೋತ್ಸವಕ್ಕೆ ಸಮಸ್ತ ಜನತೆಯನ್ನು ಆಹ್ವಾನಿಸುತ್ತಿದ್ದ ಎಚ್‌.ಡಿ.ರೇವಣ್ಣ ಅವರು ಪತ್ರಿಕಾಗೋಷ್ಟಿಯಲ್ಲೇ ತಾಯಿಯನ್ನು ನೆನೆನು ಭಾವುಕರಾಗಿ ಕಣ್ಣೀರಿಟ್ಟರು.ಚನ್ನಮ್ಮ ಅವರು ಸಾಮಾನ್ಯ ಕುಟುಂಬದಲ್ಲಿ ಜನಿಸಿದರೂ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ರಾಜಕೀಯ ಹಾಗೂ ಕುಟುಂಬದ ಏಳಿಗೆಯಲ್ಲಿ ಅಪಾರ ಕೊಡುಗೆ ನೀಡಿದ್ದರು. ನಾನು ಮತ್ತು ಕುಮಾರಸ್ವಾಮಿ ಈ ಮಟ್ಟಕ್ಕೆ ಬೆಳೆಯಲು ನಮ್ಮ ತಾಯಿಯ ತ್ಯಾಗವೇ ಕಾರಣ. ಅವರು ಎಂದಿಗೂ ಪ್ರಚಾರ ಬಯಸಲಿಲ್ಲ. ಮನೆಯಲ್ಲೇ ಇದ್ದು ಕುಟುಂಬವನ್ನು ಕಟ್ಟಿದರು . ಹಾಸನ ತಾಲೂಕಿನ ಮುತ್ತಿಗೆ ಹಿರೆಹಳ್ಳಿ ಗ್ರಾಮದ ಸಾಮಾನ್ಯ ರೈತ ಕುಟುಂಬದ ಪುತ್ರಿಯಾಗಿದ್ದ ಚೆನ್ನಮ್ಮ ಅವರು, ಕಷ್ಟದಲ್ಲಿದ್ದವರಿಗೆ ನೆರವಾಗುವುದನ್ನು ತಮ್ಮ ಜೀವನದ ಧ್ಯೇಯವಾಗಿಸಿಕೊಂಡಿದ್ದರು. ಮನೆಗೆ ಬಂದ ಯಾರನ್ನೂ ಊಟವಿಲ್ಲದೆ ಕಳುಹಿಸುತ್ತಿರಲಿಲ್ಲ. ಸಾವಿರಾರು ಜನರಿಗೆ ಅನ್ನದಾನ ಮಾಡಿದ್ದು ಮಾತ್ರವಲ್ಲದೆ, ಅನೇಕ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕೆ ನೆರವು ನೀಡಿದ್ದರು ಹಾಗೂ ಉದ್ಯೋಗ ಸಿಗುವಂತೆ ಸಹಾಯ ಮಾಡಿದ್ದರು ಎಂದು ರೇವಣ್ಣ ಸ್ಮರಿಸಿದರು. ೧೯೬೨ರಲ್ಲಿ ದೇವೇಗೌಡರು ತಿಂಗಳಿಗೆ ಕೇವಲ ೧೦ ರು. ಬಾಡಿಗೆಯ ಮನೆಯಲ್ಲಿ ವಾಸಿಸುತ್ತಿದ್ದ ಸಂದರ್ಭವನ್ನು ನೆನಪಿಸಿಕೊಂಡ ಅವರು, ನಂತರ ಪಡುವಲಹಿಪ್ಪೆ ಗ್ರಾಮದಲ್ಲಿ ೧೨ ಎಕರೆ ಜಮೀನನ್ನು ಕೇವಲ ೧,೫೦೦ಕ್ಕೆ ಖರೀದಿಸುವಾಗ ತಾಯಿ ತಮ್ಮ ಒಡವೆಗಳನ್ನು ಅಡವಿಟ್ಟು ನೆರವಾದರು. ನಮ್ಮ ತಾಯಿ ಒಂದು ಮನೆ ಕಟ್ಟಲಿಲ್ಲ, ಒಂದು ಕಾರು ಖರೀದಿ ಮಾಡಲಿಲ್ಲ. ಆದರೆ ಸಾವಿರಾರು ಜನರ ಪ್ರೀತಿ ಸಂಪಾದಿಸಿದ್ದರು. ಚನ್ನಮ್ಮ ಅವರು ಅತ್ಯಂತ ಧಾರ್ಮಿಕರಾಗಿದ್ದು, ಪ್ರತಿನಿತ್ಯ ಪೂಜೆಪುನಸ್ಕಾರದಲ್ಲಿ ತೊಡಗಿರುತ್ತಿದ್ದರು. ಸಸ್ಯಾಹಾರಿ ಜೀವನ ನಡೆಸಿದ ಅವರು ಧರ್ಮಸ್ಥಳ, ಸುಬ್ರಹ್ಮಣ್ಯ ಸೇರಿದಂತೆ ಹಲವು ಕ್ಷೇತ್ರಗಳ ಮೇಲೂ ಅಪಾರ ಭಕ್ತಿ ಹೊಂದಿದ್ದರು. ಶೃಂಗೇರಿ ಶ್ರೀಗಳು, ಸುತ್ತೂರು ಶ್ರೀಗಳು ಸೇರಿದಂತೆ ಅನೇಕ ಮಠಾಧೀಶರು ಅವರನ್ನು ಗೌರವದಿಂದ ಕಾಣುತ್ತಿದ್ದರು. ಬಾಲಗಂಗಾಧರನಾಥ ಸ್ವಾಮೀಜಿಯವರು ಸಹ ಅವರನ್ನು ಕರೆಸಿ ಪಾದಪೂಜೆ ಮಾಡಿಸಿದ್ದರು. ತಾಯಿಯ ಅಂತಿಮ ಕ್ಷಣಗಳನ್ನು ನೆನೆದು ಭಾವುಕರಾದ ಅವರು, "ನಮ್ಮ ತಂದೆ ಬಂದು ಕುಂಕುಮ ಇಟ್ಟು, ಹೂ ಮುಡಿಸಿದ ತಕ್ಷಣವೇ ತಾಯಿ ಕೊನೆಯುಸಿರೆಳೆದರು. ಇಂತಹ ಪುಣ್ಯಮರಣ ಎಲ್ಲರಿಗೂ ಸಿಗುವುದಿಲ್ಲ " ಎಂದು ಕಣ್ಣೀರಿಟ್ಟರು.

ಬೆಂಗಳೂರಿನಿಂದ ಹೊಳೆನರಸೀಪುರದವರೆಗೆ ನಡೆದ ೧೭ ಗಂಟೆಗಳ ಅಂತಿಮ ಯಾತ್ರೆಯಲ್ಲಿ ಲಕ್ಷಾಂತರ ಜನರು ಅಂತಿಮ ದರ್ಶನ ಪಡೆದಿರುವುದು ಕುಟುಂಬಕ್ಕೆ ಅಪಾರ ಧೈರ್ಯ ನೀಡಿದೆ. ಮಾಧ್ಯಮದವರು, ಹಾಸನ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಜಿಲ್ಲಾಧಿಕಾರಿ, ಎಸ್ಪಿ ಹಾಗೂ ರಾಜ್ಯದ ವಿವಿಧ ಅಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಕೇಂದ್ರ ಸಚಿವರಾದ ವಿ. ಸೋಮಣ್ಣ, ಪ್ರಹ್ಲಾದ್ ಜೋಶಿ, ಪ್ರಭು ಸಿಂಗ್ ಚೌಹಾಣ್, ಮನೋಹರ್ ಲಾಲ್ ಕಟ್ಟರ್‌ ಸೇರಿದಂತೆ ವಿವಿಧ ಪಕ್ಷಗಳ ನಾಯಕರು, ಶಾಸಕರು, ಸಚಿವರು ಮತ್ತು ಮಾಜಿ ಶಾಸಕರು ಅಂತಿಮ ವಿಧಿವಿಧಾನದಲ್ಲಿ ಭಾಗವಹಿಸಿ ಸಾಂತ್ವನ ಹೇಳಿರುವುದಕ್ಕೆ ಧನ್ಯವಾದ ತಿಳಿಸಿದರು. ೨೦೦೧ರಲ್ಲಿ ತಮ್ಮ ಕುಟುಂಬದ ಮೇಲೆ ನಡೆದ ಆಸಿಡ್ ದಾಳಿಯನ್ನು ನೆನೆದು ಮಾತನಾಡಿದ ರೇವಣ್ಣ, ಅಂದು ನನ್ನನ್ನೇ ಗುರಿಯಾಗಿಸಿಕೊಂಡು ಸಂಚು ರೂಪಿಸಲಾಗಿತ್ತು. ನಾನು ಮನೆಯಲ್ಲಿ ಇಲ್ಲದ ಕಾರಣ ತಾಯಿಯ ಮೇಲೆ ದಾಳಿ ನಡೆಯಿತು. ಆ ನೋವು ಅವರನ್ನು ಜೀವನಪೂರ್ತಿ ಕಾಡಿತು. ಆ ಘಟನೆ ನಡೆಯದಿದ್ದಿದ್ದರೆ ಅವರು ಇನ್ನೂ ಕೆಲವು ವರ್ಷ ಬದುಕುತ್ತಿದ್ದರು. ಕುಟುಂಬದ ಹಿರಿಯರ ಆಶಯ ಹಾಗೂ ಕುಮಾರಸ್ವಾಮಿ ಅವರ ಒತ್ತಾಯದಂತೆ ಮಾವಿನಕೆರೆ ಬೆಟ್ಟದ ತಪ್ಪಲಿನಲ್ಲೇ ಚನ್ನಮ್ಮ ಅವರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಜುಲೈ ೩೦ರಂದು ಆರಾಧನಾ ಮಹೋತ್ಸವ ನಡೆಯಲಿದ್ದು, ಇದು ಯಾವುದೇ ರಾಜಕೀಯ ಪಕ್ಷದ ಕಾರ್ಯಕ್ರಮವಲ್ಲ. ಎಲ್ಲ ವರ್ಗದ ಜನರು ಆಗಮಿಸಿ ಅವರ ಆತ್ಮಕ್ಕೆ ಶಾಂತಿ ಕೋರುವಂತೆ ರೇವಣ್ಣ ಮನವಿ ಮಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಿ ರಾಮ್‌ ಜಿ ಯೋಜನೆ ಲಾಭ ಪಡೆಯಿರಿ: ಸಂದೇಶ್‌
ದುಬೈ ವಿಶ್ವ ಕನ್ನಡ ಸಂಸ್ಕೃತಿ ಸಮ್ಮೇಳನಕ್ಕೆ ತೆರಳುತ್ತಿರುವ ಡಾ.ಕಿಕ್ಕೇರಿ ಕೃಷ್ಣಮೂರ್ತಿ