ಕನ್ನಡಪ್ರಭ ವಾರ್ತೆ ಬೆಳಗಾವಿ ಬೆಳಗಾವಿಗೆ ಸುಮಾರು 2 ಸಾವಿರ ಯುವಜನರಿಗೆ ಉದ್ಯೋಗ ಕಲ್ಪಿಸಬಲ್ಲ ಐಟಿ ಕಂಪನಿಯೊಂದನ್ನು ಕರೆತರುವ ಪ್ರಯತ್ನ ನಡೆದಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಕನ್ನಡಪ್ರಭ ವಾರ್ತೆ ಬೆಳಗಾವಿ

ಬೆಳಗಾವಿಗೆ ಸುಮಾರು 2 ಸಾವಿರ ಯುವಜನರಿಗೆ ಉದ್ಯೋಗ ಕಲ್ಪಿಸಬಲ್ಲ ಐಟಿ ಕಂಪನಿಯೊಂದನ್ನು ಕರೆತರುವ ಪ್ರಯತ್ನ ನಡೆದಿದ್ದು, ಮಾತುಕತೆ ಅಂತಿಮ ಹಂತದಲ್ಲಿದೆ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ನಗರದ ವಾರ್ಡ್‌ ನಂ.43ರಲ್ಲಿ ನಗರಸೇವಕಿ ವಾಣಿ ಜೋಶಿ ಅವರು ಗಣೇಶೋತ್ಸವ ಮಂಡಳಿಗಳಿಗೆ ಹಿಂದೂ ಎಂದು ಬರೆಯಲಾದ ಕುರ್ಚಿಗಳನ್ನು ಮಂಗಳವಾರ ವಿತರಿಸಿ ಮಾತನಾಡಿದರು. ಬೆಳಗಾವಿಯ ಪ್ರತಿಭಾವಂತ ಯುವಕರು ಉದ್ಯೋಗಕ್ಕಾಗಿ ಬೆಂಗಳೂರು, ಪುಣೆ ಹಾಗೂ ಹೈದರಾಬಾದ್‌ಗೆ ತೆರಳುತ್ತಿದ್ದಾರೆ. ಸ್ಥಳೀಯವಾಗಿಯೇ ಉದ್ಯೋಗ ಸೃಷ್ಟಿಸುವುದು ನಮ್ಮ ಗುರಿ. ಎರಡು ಸಾವಿರ ಜನರಿಗೆ ಉದ್ಯೋಗ ನೀಡುವ ಸಾಮರ್ಥ್ಯದ ಐಟಿ ಕಂಪನಿಯೊಂದಿಗೆ ಅಂತಿಮ ಹಂತದ ಚರ್ಚೆ ನಡೆದಿದೆ. ಕಂಪನಿ ಬೆಳಗಾವಿಗೆ ಬಂದರೆ ನಗರದ ಉದ್ಯೋಗ ಕ್ಷೇತ್ರಕ್ಕೆ ಹೊಸ ದಿಕ್ಕು ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ವಿಮಾನ ಸಂಪರ್ಕ ಹೆಚ್ಚಿಸಲು ಒತ್ತಡ

ಕೈಗಾರಿಕೆ ಹಾಗೂ ಐಟಿ ಕಂಪನಿಗಳನ್ನು ಬೆಳಗಾವಿಗೆ ಆಕರ್ಷಿಸಲು ಪ್ರಮುಖ ನಗರಗಳೊಂದಿಗೆ ನಿರಂತರ ವಿಮಾನ ಸಂಪರ್ಕ ಅಗತ್ಯ. ಉಡಾನ್‌-3 ಯೋಜನೆಯಡಿ ದೇಶದಲ್ಲೇ ಹೆಚ್ಚಿನ ವಿಮಾನ ಸಂಪರ್ಕ ಹೊಂದಿದ್ದ ನಗರವಾಗಿ ಬೆಳಗಾವಿ ಗುರುತಿಸಿಕೊಂಡಿದೆ. ಬಳಿಕ ಸ್ಥಗಿತಗೊಂಡಿರುವ ಕೆಲವು ಮಾರ್ಗಗಳನ್ನು ಪುನರಾರಂಭಿಸುವಂತೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಒತ್ತಡ ತರಲಾಗುತ್ತಿದೆ ಎಂದರು.

ಈ ಹಿಂದೆ ಬೆಳಗಾವಿಯಿಂದ ಉದಯಪುರ, ಜೈಪುರ ಹಾಗೂ ಚೆನ್ನೈಗೆ ವಿಮಾನ ಸಂಪರ್ಕವಿತ್ತು. ಉದ್ಯಮಿಗಳ ಸಂಚಾರಕ್ಕೆ ಅನುಕೂಲವಾಗುವ ಈ ಮಾರ್ಗಗಳನ್ನು ಮತ್ತೆ ಆರಂಭಿಸಬೇಕಾಗಿದೆ. ಈ ವಿಚಾರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರ ಸಹಕಾರ ಪಡೆಯಲಾಗುವುದು ಎಂದು ತಿಳಿಸಿದರು.

ಯಳ್ಳೂರು ಕೋಟೆಗೆ ₹60 ಕೋಟಿ ಕೇಬಲ್ ಕಾರ್

ಐತಿಹಾಸಿಕ ಯಳ್ಳೂರು ಕೋಟೆಗೆ ಸುಮಾರು ₹60 ಕೋಟಿ ವೆಚ್ಚದಲ್ಲಿ ಕೇಬಲ್ ಕಾರ್ ನಿರ್ಮಿಸುವ ಯೋಜನೆ ರೂಪಿಸಲಾಗಿದೆ. ಈ ಕುರಿತು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರೊಂದಿಗೆ ಚರ್ಚಿಸಲಾಗಿದೆ ಎಂದು ಅಭಯ ಪಾಟೀಲ ಹೇಳಿದರು.

ನಗರದಲ್ಲಿ ಧಾರ್ಮಿಕ, ನೈಸರ್ಗಿಕ ಹಾಗೂ ಐತಿಹಾಸಿಕ ಪ್ರವಾಸೋದ್ಯಮಕ್ಕೆ ವಿಫುಲ ಅವಕಾಶಗಳಿವೆ. ಆದರೆ, ಸಮರ್ಪಕ ಪ್ರಚಾರದ ಕೊರತೆಯಿದೆ. ವ್ಯಾಕ್ಸಿನ್ ಡಿಪೊದಲ್ಲಿ ನಾಲ್ಕು ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವ ಹಂತದಲ್ಲಿದ್ದು, ನವೆಂಬರ್‌ನಲ್ಲಿ ಉದ್ಘಾಟಿಸುವ ಉದ್ದೇಶವಿದೆ. ನಗರದ ನಿರಂತರ ಕುಡಿಯುವ ನೀರಿನ ಯೋಜನೆ ವಿಳಂಬವಾಗಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ಆಗಲೇ ಯೋಜನೆ ಅನುಷ್ಠಾನಗೊಂಡಿದ್ದರೆ 2016ರ ವೇಳೆಗೆ ಪೂರ್ಣಗೊಳ್ಳುತ್ತಿತ್ತು. ವಿಳಂಬದಿಂದಾಗಿ ಯೋಜನಾ ವೆಚ್ಚ ₹588 ಕೋಟಿಗೆ ಏರಿಕೆಯಾಗಿದೆ ಎಂದರು.

ಎಲ್‌ಆ್ಯಂಡ್‌ಟಿ ಕಂಪನಿಯ ಪೈಪ್‌ಲೈನ್ ಕಾಮಗಾರಿಯಿಂದಾಗಿ ಹೊಸದಾಗಿ ನಿರ್ಮಿಸಿದ ರಸ್ತೆಗಳನ್ನು ಮತ್ತೆ ಅಗೆಯಲಾಗುತ್ತಿದೆ. ರಸ್ತೆ ಕಾಮಗಾರಿ ಹಾಗೂ ನೀರಿನ ಪೈಪ್‌ಲೈನ್ ಕಾಮಗಾರಿಗಳ ನಡುವೆ ಸಮನ್ವಯದ ಕೊರತೆಯಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಬಾಕ್ಸ:ಬ್ರಾಹ್ಮಣ ಸಮಾಜ ಟ್ರಸ್ಟ್ ಉಪಾಧ್ಯಕ್ಷ ಭರತ ದೇಶಪಾಂಡೆ, ಅರುಣಾ ನಾಯಕ, ಅರವಿಂದ ಹುನಗುಂದ, ಮಧು ಗುರವ, ಶೇಖರ ಇನಾಮದಾರ್ ಮಾತನಾಡಿದರು. ಗಣೇಶೋತ್ಸವ ಮಂಡಳಿಗಳ ಪದಾಧಿಕಾರಿಗಳು, ಕಾರ್ಯಕರ್ತರು ಹಾಗೂ ವಾರ್ಡ್ ನಿವಾಸಿಗಳು ಉಪಸ್ಥಿತರಿದ್ದರು.ಬಾಕ್ಸ್‌

ಬೆಳಗಾವಿಗೆ ಕೇವಲ ಮೂಲಸೌಕರ್ಯ ಅಭಿವೃದ್ಧಿ ಸಾಲದು. ಸ್ಥಳೀಯ ಯುವಜನರಿಗೆ ಇಲ್ಲಿಯೇ ಉದ್ಯೋಗ ಸೃಷ್ಟಿಯಾಗಬೇಕು. ಐಟಿ ಪಾರ್ಕ್, ರಕ್ಷಣಾ ಉತ್ಪಾದನಾ ಘಟಕ ಹಾಗೂ ಪ್ರವಾಸೋದ್ಯಮ ಯೋಜನೆಗಳನ್ನು ಸಾಕಾರಗೊಳಿಸಲು ಸತತ ಪ್ರಯತ್ನ ನಡೆಸಲಾಗುತ್ತಿದೆ.— ಅಭಯ ಪಾಟೀಲ, ದಕ್ಷಿಣ ಕ್ಷೇತ್ರದ ಶಾಸಕ