ನಾನು ಕಿಡ್ನಾಪ್‌ ಆಗಿಲ್ಲ ಎಂಬ ಸಂತ್ರಸ್ತೆ ಹೇಳಿಕೆಯೇ ಫೇಕ್‌!

KannadaprabhaNewsNetwork | Updated : May 14 2024, 01:19 PM IST

ಸಾರಾಂಶ

ಕಿಡ್ನಾಪ್‌ ಆಗಿದ್ದಾಗಲೇ ಮಾಡಿದ್ದ ವಿಡಿಯೋ ಇದಾಗಿದ್ದು, ಜಡ್ಜ್‌ ಮುಂದೆಯೂ ಈ ವಿಷಯ ಹೇಳಿದ್ದ ಸಂತ್ರಸ್ತೆ ಸತ್ಯವನ್ನು ಎತ್ತಿ ಹಿಡಿದಿದ್ದರು. ಈ ಹಿನ್ನೆಲೆಯಲ್ಲಿ ನಾನು ಕಿಡ್ನಾಪ್‌ ಆಗಿಲ್ಲ ಎಂಬ ಸಂತ್ರಸ್ತೆ ಹೇಳಿಕೆಯೇ ಫೇಕ್‌ ಆಗಿರುವುದು ಬಯಲಾಗಿದೆ.

 ಬೆಂಗಳೂರು :  ‘ನಾನು ಅಪಹರಣಕ್ಕೊಳಗಾಗಿಲ್ಲ. ನಾನೇ ಇಷ್ಟಪಟ್ಟು ಸಂಬಂಧಿಕರ ಮನೆಗೆ ಬಂದಿದ್ದೇನೆ’ ಎಂದು ಅಪಹರಣ ಪ್ರಕರಣದ ಸಂತ್ರಸ್ತೆಯಿಂದ ಮಾಜಿ ಸಚಿವ ಎಚ್‌.ಡಿ.ರೇವಣ್ಣ ಬೆಂಬಲಿಗರು ಪಡೆದುಕೊಂಡಿದ್ದ ವಿಡಿಯೋ ಹೇಳಿಕೆ ಈಗ ವೈರಲ್‌ ಆಗಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

ಅಲ್ಲದೆ ಈ ವಿಚಾರ ನ್ಯಾಯಾಲಯದ ಮುಂದೆ ಸಿಆರ್‌ಪಿಸಿ 164ರಡಿ ಸಂತ್ರಸ್ತೆ ದಾಖಲಿಸಿದ ಹೇಳಿಕೆಯಲ್ಲಿ ಸಹ ಉಲ್ಲೇಖವಾಗಿದೆ. ಅಪಹರಣ ಪ್ರಕರಣದಲ್ಲಿ ಮಾಜಿ ಸಚಿವ ರೇವಣ್ಣ ಅವರನ್ನು ಪಾರು ಮಾಡುವ ಸಲುವಾಗಿಯೇ ಅವರ ಬೆಂಬಲಿಗರು ಈ ರೀತಿ ಕುತಂತ್ರ ರೂಪಿಸಿದ್ದರು ಎನ್ನಲಾಗಿದೆ.

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ವಿರುದ್ಧ ಲೈಂಗಿಕ ಹಗರಣ ಬಯಲಾದ ಬೆನ್ನಲ್ಲೇ ಏ.29ರಂದು ಮೈಸೂರು ಜಿಲ್ಲೆ ಕೆ.ಆರ್‌.ತಾಲೂಕಿನಲ್ಲಿರುವ ಸಂತ್ರಸ್ತೆ ಮನೆಯಿಂದ ಆಕೆಯನ್ನು ಮಾಜಿ ಸಚಿವ ರೇವಣ್ಣ ಬೆಂಬಲಿಗರು ಕರೆದೊಯ್ದಿದ್ದರು. ಬಳಿಕ ಹುಣಸೂರು ತಾಲೂಕಿನ ಕಾಳೇನಹಳ್ಳಿಯಲ್ಲಿದ್ದ ರೇವಣ್ಣ ಅವರ ಆಪ್ತ ಸಹಾಯಕ ರಾಜಗೋಪಾಲ್‌ ಅವರಿಗೆ ಸೇರಿದ ತೋಟದ ಮನೆಯಲ್ಲಿ ಸಂತ್ರಸ್ತೆಯನ್ನು ಅಕ್ರಮ ಬಂಧನದಲ್ಲಿಟ್ಟಿದ್ದ ಆರೋಪ ಕೇಳಿ ಬಂದಿತ್ತು. ಆದರೆ ಮೇ 2ರಂದು ರಾತ್ರಿ ಮಾಜಿ ಸಚಿವ ರೇವಣ್ಣ ಹಾಗೂ ಅವರ ಸಹಚರರ ವಿರುದ್ಧ ಸಂತ್ರಸ್ತೆ ಪುತ್ರ ನೀಡಿದ ದೂರಿನ ಮೇರೆಗೆ ಕೆ.ಆರ್‌.ನಗರ ಠಾಣೆಯಲ್ಲಿ ಅಪಹರಣ ಪ್ರಕರಣ ದಾಖಲಾಯಿತು.

ಇದರಿಂದ ಸಂಕಷ್ಟಕ್ಕೀಡಾದ ರೇವಣ್ಣ ಅವರನ್ನು ಪಾರು ಮಾಡಲು ಸಂತ್ರಸ್ತೆಯಿಂದ ಮಾಧ್ಯಮಗಳಿಗೆ ಹೇಳಿಕೆ ಕೊಡಿಸಲು ರೇವಣ್ಣ ಬೆಂಬಲಿಗರು ಯೋಜಿಸಿದ್ದರು. ಅದರ ಭಾಗವಾಗಿಯೇ ಅಪಹರಣಕ್ಕೊಳಗಾದ ಸಮಯದಲ್ಲಿ ಸಂತ್ರಸ್ತೆಯಿಂದ ತಾನು ಅಪಹರಣಕ್ಕೊಳಗಾಗಿಲ್ಲ, ತಾನೇ ಸ್ವಯಂ ಕೆಲವು ದಿನಗಳ ಮಟ್ಟಿಗೆ ಇದ್ದು ಹೋಗಲು ಸಂಬಂಧಿಕರ ಮನೆಗೆ ಬಂದಿದ್ದಾಗಿ ವಿಡಿಯೋ ಹೇಳಿಕೆ ದಾಖಲಿಸಿಕೊಂಡಿದ್ದರು. ಈ ವಿಡಿಯೋ ಬಗ್ಗೆ ಎಸ್‌ಐಟಿ ಮುಂದೆ ಸಂತ್ರಸ್ತೆ ಸತ್ಯ ಹೇಳಿದ್ದಳು. ಬಳಿಕ ನ್ಯಾಯಾಲಯದ ಮುಂದೆ ಸಿಆರ್‌ಪಿಸಿ 164ರಡಿ ಹೇಳಿಕೆ ದಾಖಲಿಸುವಾಗ ಆಕೆ ಮತ್ತೆ ಪ್ರಸ್ತಾಪಿಸಿದ್ದಳು ಎಂದು ತಿಳಿದು ಬಂದಿದೆ.

ಆದರೂ ಆ ವಿಡಿಯೋ ವೈರಲ್ ಆಗಿದ್ದರಿಂದ ಸಂತ್ರಸ್ತೆ ಉಲ್ಟಾ ಹೊಡೆದಿದ್ದಾರೆ ಎಂದು ವದಂತಿ ಹಬ್ಬಿತ್ತು.

ಆಗಿದ್ದು ಏನು?ರೇವಣ್ಣ ನನ್ನನ್ನು ಕಿಡ್ನಾಪ್‌ ಮಾಡಿಲ್ಲ ಎಂಬ ಕೆ.ಆರ್‌.ನಗರ ಸಂತ್ರಸ್ತೆಯ ವಿಡಿಯೋ ವೈರಲ್‌ ಆಗಿತ್ತು. ಹೀಗಾಗಿ ರೇವಣ್ಣ ವಿರುದ್ಧ ದೂರು ನೀಡಿದ ಮಹಿಳೆ ಉಲ್ಟಾ ಹೊಡೆದಿದ್ದಾಳೆಂದು ಸುದ್ದಿಯಾಗಿತ್ತು. ಆದರೆ ಇದು ಕಿಡ್ನಾಪ್‌ ಆಗಿದ್ದಾಗ ರೇವಣ್ಣ ಬೆಂಬಲಿಗರೇ ಬಲವಂತದಿಂದ ಮಾಡಿದ್ದ ವಿಡಿಯೋ ಎಂಬುದು ಬೆಳಕಿಗೆ ಬಂದಿದೆ.

Share this article