ಕನ್ನಡಪ್ರಭ ವಾರ್ತೆ ಹೊಳೆರನರಸೀಪುರನಾಗರಿಕರ ನೆಮ್ಮದಿಯ ಬದುಕಿಗಾಗಿ ಮಳೆ, ಚಳಿ, ಬಿಸಿಲು ಜತೆಗೆ ಯಾವುದೇ ಸೋಂಕಿಗೂ ಹೆದರದೇ ಅತ್ಯಮೂಲ್ಯವಾದ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರ ಆರೋಗ್ಯ ರಕ್ಷಣೆ ಸೇರಿದಂತೆ ಅವರ ನೆಮ್ಮದಿಯ ಬದುಕಿಗೆ ಸಹಕಾರ ನೀಡಬೇಕಾದ್ದು ನಮ್ಮಗಳ ಕರ್ತವ್ಯವಾದ್ದರಿಂದ ಅಗತ್ಯ ಪರಿಕರ ಒಳಗೊಂಡ ಕಿಟ್ ವಿತರಣೆ ಮಾಡಲಾಗುತ್ತದೆ ಎಂದು ಶಾಸಕ ಎಚ್.ಡಿ. ರೇವಣ್ಣ ತಿಳಿಸಿದರು.
ಈಗಾಗಲೇ ೪೮ ಪೌರ ಕಾರ್ಮಿಕರಿಗೆ ನಿವೇಶನ ನೀಡಿ, ಮನೆ ನಿರ್ಮಾಣಕ್ಕೆ ಸಹಕಾರ ನೀಡಲಾಗಿದ್ದು, ರಾಜ್ಯದಲ್ಲಿ ಯಾವುದೇ ಪೌರ ಕಾರ್ಮಿಕರಿಗೆ ಈ ರೀತಿಯ ಸೌಲಭ್ಯ ಕಲ್ಪಿಸಿಲ್ಲವೆಂದರು. ಪಟ್ಟಣದ ಮಹಾರಾಜ ಪಾರ್ಕಿನ ಅಭಿವೃದ್ಧಿಗಾಗಿ ೩ ಕೋಟಿ ರು. ಹಣವನ್ನು ಶಾಸಕರ ಅನುದಾನದಲ್ಲಿ ನೀಡಲಾಗುತ್ತಿದ್ದು, ಪುರಸಭೆಯಿಂದ ಸ್ಪಿಂಕ್ಲರ್ ಅಳವಡಿಸಲು ೨ ಕೋಟಿ ರು. ಹಣ ನೀಡಲಾಗುತ್ತದೆ ಎಂದರು. ಪುರಸಭೆ ವತಿಯಿಂದ ೩ ಜನರಿಗೆ ಮನೆ ದುರಸ್ತಿಗಾಗಿ ೯೦ ಸಾವಿರ ರೂ. ಹಾಗೂ ೩ ಅಂಗವಿಕಲರಿಗೆ ತ್ರಿಚಕ್ರ ವಾಹನವನ್ನು ನೀಡಲಾಯಿತು.
ಪುರಸಭೆ ಮಾಜಿ ಅಧ್ಯಕ್ಷರಾದ ಸುದಾನಳಿನಿ, ಎ.ಶ್ರೀಧರ್, ಎಚ್.ಕೆ.ಪ್ರಸನ್ನ ಹಾಗೂ ಎ.ಜಗನ್ನಾಥ್, ಸದಸ್ಯರಾದ ವಾಸಿಮ್, ಟಿ.ಶಾಂತಿ, ಪುರಸಭೆ ಅಧಿಕಾರಿಗಳಾದ ಪಂಕಜಾ, ರಮೇಶ್, ಪರಮೇಶ್, ವಸಂತಕುಮಾರ್, ಇತರರು ಇದ್ದರು.