ಚುನಾವಣೆ ಸೋಲಿಗೆ ಬೆಲೆ ಏರಿಸಿ ಸೇಡು: ಬಿಜೆಪಿ

KannadaprabhaNewsNetwork | Updated : Jun 17 2024, 10:02 AM IST

ಸಾರಾಂಶ

ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಕಿಡಿಕಾರಿದ್ದಾರೆ.

 ಬೆಂಗಳೂರು :  ಕಾಂಗ್ರೆಸ್ ಸರ್ಕಾರ ಒಂದು ವರ್ಷದಲ್ಲಿ ಎಲ್ಲ ಬಗೆಯ ಬೆಲೆ ಏರಿಕೆಯ ಭಾಗ್ಯಗಳನ್ನು ನೀಡಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್‌ ಕಿಡಿಕಾರಿದ್ದಾರೆ.

ಭಾನುವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಾಲಿನ ದರ, ಆಲ್ಕೋಹಾಲ್ ದರ, ಸ್ಟಾಂಪ್ ಡ್ಯೂಟಿ, ಮಾರ್ಗಸೂಚಿ ದರ, ವಿದ್ಯುತ್ ದರ ಹಾಗೂ ಈಗ ತೈಲ ಬೆಲೆ ಏರಿಕೆ ಮಾಡಲಾಗಿದೆ ಎಂದರು.

ಹಿಂದಿನ ಬಿಜೆಪಿ ಸರ್ಕಾರದಲ್ಲಿ ಒಂದು ರು. ಬೆಲೆ ಏರಿಕೆಯಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ಕೂಟರ್ ಶವ ಯಾತ್ರೆ ಮಾಡಿದ್ದರು. 15 ಬಾರಿ ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಗೆ ಯೋಗ್ಯತೆ ಇಲ್ಲ. ಜನರ ಮೇಲೆ ಸೇಡು ತೀರಿಸಿಕೊಳ್ಳಲು ದರ ಏರಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ಸೋತ ಸೇಡನ್ನು ತೀರಿಸಿಕೊಳ್ಳಲು ಕಾಂಗ್ರೆಸ್ ಸರ್ಕಾರ ತೈಲ ದರವನ್ನು ಏರಿಕೆ ಮಾಡಿದ್ದು, ಈ ಮೂಲಕ ಜನರ ತಲೆ ಮೇಲೆ ಚಪ್ಪಡಿ ಕಲ್ಲು ಹಾಕಿದ್ದಾರೆ ಎಂದು ಹರಿಹಾಯ್ದರು.

ಗ್ಯಾರಂಟಿಗಾಗಿ ₹55 ಸಾವಿರ ಕೋಟಿ ಮೀಸಲಿಟ್ಟಿರುವುದರಿಂದ ಹಣ ಕೊರತೆಯಾಗಿ ಸಂಬಳ ಕೊಡಲು ದುಡ್ಡಿಲ್ಲ. ಆದ್ದರಿಂದ ಜನರ ಮೇಲೆ ಮೂರ್ನಾಲ್ಕು ಸಾವಿರ ಕೋಟಿ ರು. ಹೊರೆ ಹಾಕಿ ತೈಲ ದರ ಏರಿಸಲಾಗಿದೆ. ಇದರಿಂದ ಸಹಜವಾಗಿ ತರಕಾರಿ, ಹಾಲು, ಹಣ್ಣು, ಕೊನೆಗೆ ಟೀ ಕಾಫಿಗೂ ದರ ಏರಲಿದೆ. ನಾಳೆಯಿಂದಲೇ ಆಟೊರಿಕ್ಷಾದವರು, ಗೂಡ್ಸ್ ಗಾಡಿಗಳು ದರ ಏರಿಕೆ ಮಾಡುತ್ತಾರೆ ಎಂದರು.

ನ್ಯಾಯವಾಗಿ ಮಾಡುವುದಿದ್ದರೆ ಬಜೆಟ್‌ನಲ್ಲಿ ಸರ್ಕಾರ ತೈಲ ದರ ಏರಿಸಬೇಕಿತ್ತು. ಆದರೆ ಚುನಾವಣೆಯಲ್ಲಿ ಸೋತಿದ್ದರಿಂದ ನಂತರ ಕಳ್ಳ ದಾರಿಯಿಂದ ದರ ಏರಿಸಿ ಜನರ ಮೇಲೆ ಸೇಡು ತೀರಿಸಿಕೊಂಡಿದ್ದಾರೆ. ಸಂಸತ್ತಿನಲ್ಲಿ 100 ಸೀಟು ಪಡೆಯಲಾಗದ ಕಾಂಗ್ರೆಸ್ ಪೆಟ್ರೋಲ್ ದರವನ್ನು 100 ರೂಪಾಯಿಗೂ ಹೆಚ್ಚು ಮಾಡಿದೆ. ರಾಹುಲ್ ಗಾಂಧಿ ಹೇಳಿದಂತೆ ಟಕಾಟಕ್ ಎಂದು ತೈಲ ದರ ಏರಿಸಿದ್ದಾರೆ ಎಂದು ಅಶೋಕ್‌ ದೂರಿದರು.

ಬಿಬಿಎಂಪಿ ಆಸ್ತಿ ಮಾರಾಟಕ್ಕೆ ಸಿದ್ಧತೆ:

ಪಾಪರ್ ಆಗಿರುವ ಕಾಂಗ್ರೆಸ್ ಸರ್ಕಾರ ಬಿಡಿಎ ಆಸ್ತಿಗಳ ಮಾರಾಟಕ್ಕೆ ಮುಂದಾಗಿದೆ. ಬಿಬಿಎಂಪಿ ಹಾಗೂ ಜಲಮಂಡಳಿಯ ಆಸ್ತಿಗಳನ್ನು ಕೂಡ ಮಾರಾಟ ಮಾಡಲು ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದ ಆರ್ಥಿಕ ಶಿಸ್ತನ್ನು ಸರ್ವನಾಶ ಮಾಡಿದ್ದಾರೆ. ಇನ್ನೂ ಒಂದು ವರ್ಷದಲ್ಲಿ ವಿಧಾನಸೌಧವನ್ನೂ ಅಡಮಾನ ಇಡುತ್ತಾರೆ ಎಂದು ಇದೇ ವೇಳೆ ಆರ್‌.ಅಶೋಕ್‌ ಆಪಾದಿಸಿದರು.

ಸರ್ಕಾರಿ ನೌಕರರು ಮತ ನೀಡಿಲ್ಲವೆಂಬ ಕಾರಣಕ್ಕೆ ವೇತನ ಹೆಚ್ಚಿಸಿಲ್ಲ. 7ನೇ ವೇತನ ಆಯೋಗದ ವರದಿ ಜಾರಿ ‘ನಾಳೆ ಬಾ’ ಎಂಬ ಸ್ಥಿತಿಗೆ ಬಂದಿದೆ. 143 ಶಾಸಕರ ಕ್ಷೇತ್ರದಲ್ಲಿ ಬಿಜೆಪಿಗೆ ಹೆಚ್ಚು ಮತ ಬಂದಿದೆ. ಅದಕ್ಕಾಗಿ ತೈಲ ದರ ಏರಿಸಿದ್ದಾರೆ. ಇದರಿಂದ ಕಾಂಗ್ರೆಸ್ ಶಾಸಕರು ಕೂಡ ಬೇಸರಗೊಂಡಿದ್ದಾರೆ‌. ಜಿಲ್ಲಾ ಪಂಚಾಯತ್ ಹಾಗೂ ಬಿಬಿಎಂಪಿ ಚುನಾವಣೆಯಲ್ಲಿ ಜನರು ಕಾಂಗ್ರೆಸ್ ಗೆ ಪಾಠ ಕಲಿಸಲಿದ್ದಾರೆ ಎಂದು ಅಶೋಕ್ ಹೇಳಿದರು.

ಜನರಿಗೆ ತೆರಿಗೆ ಹೆಚ್ಚಳದ ಕೊಡುಗೆ: ಅಶ್ವತ್ಥ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ನಿಷ್ಠೆಯಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳವನ್ನು ಜನರಿಗೆ ಕೊಡುಗೆಯಾಗಿ ನೀಡಿದೆ ಎಂದು ಬಿಜೆಪಿ ಶಾಸಕ ಡಾ। ಸಿ.ಎನ್.ಅಶ್ವತ್ಥನಾರಾಯಣ ಟೀಕಿಸಿದ್ದಾರೆ.

ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸುತ್ತದೆ. ಏರಿಸಿದ ದರವನ್ನು ಸಂಪೂರ್ಣವಾಗಿ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಸರ್ಕಾರವು ಆಸ್ತಿ ತೆರಿಗೆ ಹೆಚ್ಚಳ, ಕುಡಿಯುವ ನೀರಿನ ದರ ಏರಿಕೆ, ವಿದ್ಯುತ್ ದರ ಏರಿಕೆ ಮಾಡಿದೆ. ವಾಹನಗಳ ತೆರಿಗೆ, ಆಸ್ತಿ ತೆರಿಗೆಯನ್ನೂ ಹೆಚ್ಚಿಸಲಾಗಿದೆ. ಸಾಲ ಪಡೆಯಲು ಬ್ಯಾಂಕಿಗೆ ಹೋದರೆ ರಿಜಿಸ್ಟ್ರೇಶನ್ ದರವನ್ನೂ ಹೆಚ್ಚಿಸಲಾಗಿದೆ. ಹಣದುಬ್ಬರ, ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿನವರು, ಚುನಾವಣೆ ವೇಳೆ ಬೆಲೆ ಇಳಿಸುವ ಭರವಸೆ ಕೊಟ್ಟಿದ್ದರು. ಇದೀಗ ರಾಜ್ಯದ ಜನತೆಗೆ ಕಾಂಗ್ರೆಸ್ಸಿನವರದು ಬೆಲೆ ಏರಿಕೆಯ ಗ್ಯಾರಂಟಿ ಎಂದು ತಿಳಿಸಿದರು.

ಕರ್ನಾಟಕದಲ್ಲಿ ಬಂಡವಾಳ ಹೂಡಿಕೆ ಪರ ವಾತಾವರಣ ಇಲ್ಲ. ನೆಗೆಟಿವ್ ರೇಟಿಂಗ್ ಇದೆ. ಭೂಮಿ ಸಿಗಲ್ಲ, ನೀರು ಕೊಡುವುದಿಲ್ಲ, ಕರೆಂಟ್ ದರ ಹೆಚ್ಚು ಇಂಥ ಹತ್ತಾರು ಸಮಸ್ಯೆಗಳಿವೆ. ಆರ್ಥಿಕ ವ್ಯವಸ್ಥೆ ಹೆಚ್ಚಿಸಿ ಆದಾಯ ಹೆಚ್ಚಿಸಬೇಕಿತ್ತು. ಇರುವವರನ್ನೇ ಪೂರ್ತಿ ಕತ್ತು ಕುಯ್ದು ಇರುವಂಥವರು ಬದುಕಲು ಸಾಧ್ಯವಿಲ್ಲದ ರೀತಿಯಲ್ಲಿ ಆಡಳಿತ ಮಾಡುತ್ತಿರುವವರು ಕಾಂಗ್ರೆಸ್ಸಿಗರು ಎಂದರು.

ಬಿಲ್ಡರ್‌ಗಳು, ಕೈಗಾರಿಕೆದಾರರು ರಾಜ್ಯವನ್ನು ತೊರೆಯುವಂತಾಗಿದೆ. ಹಣದುಬ್ಬರ ಒಂದೆಡೆ ಇನ್ನೊಂದೆಡೆ ಲೂಟಿ, ಭ್ರಷ್ಟಾಚಾರ ಈ ಸರಕಾರದಿಂದ ನಡೆದಿದೆ. ಎಲ್ಲರ ಲೂಟಿ ಕಾರ್ಯ ನಡೆದಿದೆ. ರೈತರು ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಮೊತ್ತಕ್ಕಾಗಿ ಆತ್ಮಹತ್ಯೆ ಎನ್ನುವಷ್ಟು ಆಡಳಿತ ಹದಗೆಟ್ಟಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಇಂದು ವಿಜಯೇಂದ್ರ ನೇತೃತ್ವದಲ್ಲಿ ಧರಣಿ

ತೈಲ ದರ ಏರಿಕೆ ಇಳಿಕೆಗೆ ಒತ್ತಾಯಿಸಿ ಸೋಮವಾರ ಬೆಳಗ್ಗೆ 11ಗಂಟೆಗೆ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ಬಿಜೆಪಿಯಿಂದ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.

ಈ ಪ್ರತಿಭಟನೆಯಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್.ಅಶೋಕ್, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ, ನಗರದ ಸಂಸದರು, ಶಾಸಕರು ಹಾಗೂ ಮುಖಂಡರು ಪಾಲ್ಗೊಳ್ಳಲಿದ್ದಾರೆ.

Share this article