2ನೇ ದಿನಕ್ಕೆ ಕಂದಾಯ ಇಲಾಖೆ ನೌಕರರ ಧರಣಿ

KannadaprabhaNewsNetwork |  
Published : Sep 28, 2024, 01:19 AM IST
27ಕೆಆರ್ ಎಂಎನ್ 2.ಜೆಪಿಜಿರಾಮನಗರ ಜಿಲ್ಲಾ ಕಚೇರಿಗಳ ಎದುರು ಕಂದಾಯ ಇಲಾಖೆ ನೌಕರರು ಧರಣಿ ನಡೆಸಿದರು. | Kannada Prabha

ಸಾರಾಂಶ

ರಾಮನಗರ: ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಸಾಧನಗಳನ್ನು ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನವಾದ ಶುಕ್ರವಾರವೂ ಮುಂದುವರಿಯಿತು.

ರಾಮನಗರ: ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಸಾಧನಗಳನ್ನು ಕಲ್ಪಿಸುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕಂದಾಯ ಇಲಾಖೆ ನೌಕರರು ತೋಳಿಗೆ ಕಪ್ಪುಪಟ್ಟಿ ಕಟ್ಟಿಕೊಂಡು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ 2ನೇ ದಿನವಾದ ಶುಕ್ರವಾರವೂ ಮುಂದುವರಿಯಿತು.

ತಾಲೂಕು ಕೇಂದ್ರಗಳಲ್ಲಿ ತಾಲೂಕು ಆಡಳಿತ ಸೌಧದ ಆವರಣದಲ್ಲಿ ಗುರುವಾರ ಮುಷ್ಕರ ಆರಂಭಿಸಿದ ನೌಕರರು ಶುಕ್ರವಾರ ಜಿಲ್ಲಾ ಕೇಂದ್ರಕ್ಕೆ ಆಗಮಿಸಿ ಜಿಲ್ಲಾ ಕಚೇರಿಗಳ ಸಂಕೀರ್ಣದ ಎದುರು ಧರಣಿ ನಡೆಸಿದರು.

ಈ ವೇಳೆ ಮಾತನಾಡಿದ ಕಂದಾಯ ಇಲಾಖೆ ನೌಕರರ ಸಂಘದ ಜಿಲ್ಲಾಧ್ಯಕ್ಷ ಎಂ.ಹರ್ಷ, ಕಂದಾಯ ಇಲಾಖೆಯಿಂದ ಅಭಿವೃದ್ಧಿಪಡಿಸಿರುವ ಸುಮಾರು 17ಕ್ಕೂ ಅಧಿಕ ಮೊಬೈಲ್-ವೆಬ್ ತಂತ್ರಾಂಶಗಳ ಮೂಲಕ ಕರ್ತವ್ಯ ನಿರ್ವಹಿಸಲು ಒತ್ತಡ ಹೇರುತ್ತಿದ್ದು, ಈ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್ ಸಾಧನ, ಲ್ಯಾಪ್‌ಟಾಪ್ ಹಾಗೂ ಅದಕ್ಕೆ ಅವಶ್ಯಕವಾಗಿರುವ ಇಂಟರ್‌ನೆಟ್, ಸ್ಕ್ಯಾನರ್ ಒದಗಿಸಿಲ್ಲ. ಕ್ಷೇತ್ರ ಮಟ್ಟದಲ್ಲಿ ಮಾನಸಿಕ, ದೈಹಿಕವಾಗಿ ವೈತಿರಿಕ್ತ ಪರಿಣಾಮ ಹೆಚ್ಚಾಗುತ್ತಿದೆ ಎಂದು ದೂರಿದರು.

ಗ್ರಾಮ ಆಡಳಿತ ಅಧಿಕಾರಿಗಳು 30 ವರ್ಷಗಳ ಮೇಲ್ಪಟ್ಟು ಪದೋನ್ನತಿಯನ್ನು ನಿವೃತ್ತಿ ಅಂಚಿನಲ್ಲಿ ಪಡೆಯುತ್ತಿರುವುದರಿಂದ ರಾಜ್ಯದಲ್ಲಿನ 1196 ಗ್ರೇಡ್ -1 ಗ್ರಾಪಂ ಹಾಗೂ 304 ಕಸಬಾ ಹೋಬಳಿ ವೃತ್ತಗಳನ್ನು ಗ್ರೇಡ್ -1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಮೇಲ್ದರ್ಜೆಗೇರಿಸಿ ರಾಜಸ್ವ ನಿರೀಕ್ಷಕರು - ಪ್ರಥಮ ದರ್ಜೆ ಸಹಾಯಕರು - ಗ್ರೇಡ್ -1 ಗ್ರಾಮ ಆಡಳಿತ ಅಧಿಕಾರಿ ಹುದ್ದೆಯನ್ನಾಗಿ ಪರಿಷ್ಕರಿಸಿ ಮೇಲ್ದರ್ಜೆಗೇರಿಸಿ ಪದೋನ್ನತಿ ನೀಡಬೇಕು ಎಂದು ಒತ್ತಾಯಿಸಿದರು.

ಅಂತಱ ಜಿಲ್ಲಾ ಪತಿ - ಪತ್ನಿ ಪ್ರಕರಣಗಳ ವರ್ಗಾವಣೆಗೆ ಚಾಲನೆ ನೀಡಿ ಅಂತಿಮ ಆದೇಶಕ್ಕಾಗಿ ಬಾಕಿ ಇರುವ ಪ್ರಕರಣಗಳ ವರ್ಗಾವಣೆ ಆದೇಶ ನೀಡಬೇಕು. ಕಂದಾಯ ಇಲಾಖೆಯ 3 ವರ್ಷಗಳ ಸೇವೆಯನ್ನು ಪರಿಗಣಿಸಿ ಅಂತರ್ ಜಿಲ್ಲಾ ವರ್ಗಾವಣೆಗಾಗಿ ಕಂದಾಯ ಇಲಾಖೆಯಲ್ಲಿ ಹೊಸ ಮಾರ್ಗಸೂಚಿಯನ್ನು ರಚಿಸಬೇಕು. ಮೊಬೈಲ್ ತಂತ್ರಾಂಶಗಳ ಕೆಲಸದ ವಿಚಾರವಾಗಿ ಇದುವರೆಗೆ ಆಗಿರುವ ಎಲ್ಲ ಅಮಾನತ್ತುಗಳನ್ನು ತಕ್ಷಣವೇ ರದ್ದುಪಡಿಸಿ ಹಿಂಪಡೆಯಬೇಕು ಎಂದು ಆಗ್ರಹಿಸಿದರು.

ವಿಶೇಷಚೇತನ ಹಾಗೂ ಕೆಲವು ಅನಾರೋಗ್ಯ ಪ್ರಕರಣಗಳನ್ನು ಹೊರತುಪಡಿಸಿ ತಾಲೂಕು ಕಚೇರಿ, ಉಪ ವಿಭಾಗಾಧಿಕಾರಿಗಳ ಕಚೇರಿ, ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಿಯೋಜನೆ ಮೇಲೆ ಕೆಲಸ ನಿರ್ವಹಿಸುತ್ತಿರುವ ಗ್ರಾಮ ಆಡಳಿತ ಅಧಿಕಾರಿಗಳನ್ನು ಅವರ ಮೂಲ ವೃತ್ತಗಳಿಗೆ ಕರ್ತವ್ಯ ನಿರ್ವಹಿಸಲು ಆದೇಶಿಸಬೇಕು. ಗ್ರಾಮ ಸಹಾಯಕರಿಗೆ ಸೇವಾ ಭದ್ರತೆ ಒದಗಿಸಬೇಕು ಎಂದು ಒತ್ತಾಯಮಾಡಿದರು.

ಸಂಘದ ಗೌರವಾಧ್ಯಕ್ಷ ಎನ್.ರಮೇಶ್, ಖಜಾಂಚಿ ಎ.ಎಸ್. ಧರೇಶ್ ಗೌಡ, ಕಾರ್ಯಾಧ್ಯಕ್ಷ ಯತೀಶ್, ರಾಜಸ್ವ ನಿರೀಕ್ಷಕರಾದ ಪ್ರಸನ್ನಕುಮಾರ್, ಪುಟ್ಟರಾಜು, ಶಿವಕುಮಾರ್, ಗ್ರಾಮ ಲೆಕ್ಕಾಧಿಕಾರಿಗಳಾದ ಮುಭಾರಕ್, ಪರಮೇಶ, ಅಜಯ್, ಸಂಗೀತಾ, ಸುಷ್ಮಾ, ಸೌಮ್ಯ, ರೇಣವ ಬಸಪ್ಪ, ಮೇಘನಾ, ಪವಿತ್ರ, ಸುರೇಶ್ ಕುಮಾರ್ ಭಾಗವಹಿಸಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!