ಕನ್ನಡಪ್ರಭ ವಾರ್ತೆ ಆಲೂರು
ಪಟ್ಟಣದ ಮಿನಿ ವಿಧಾನಸೌಧ ಆವರಣದಲ್ಲಿ ತಾಲೂಕು ಆಡಳಿತ ವತಿಯಿಂದ ಏರ್ಪಡಿಸಲಾಗಿದ್ದ ಪೌತಿ ಖಾತೆ ಆಂದೋಲನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸರ್ಕಾರ ಇಂತಹ ಕಾರ್ಯಕ್ರಮ ರೂಪಿಸಿರುವುದು ಸಂತಸಕರವಾಗಿದೆ.ಡಿಜಿಟಲ್ ಸೇವೆ ಕಾಲದಲ್ಲಿದ್ದರೂ ರೈತರಿಗೆ ಸೂಕ್ತ ದಾಖಲೆಗಳಾದ ದುರಸ್ತಿ, ಪೋಡು ದಾಖಲೆಗಳನ್ನು ಸೂಕ್ತ ಸಮಯದಲ್ಲಿ ಒದಗಿಸಲು ಸಾಧ್ಯವಾಗದಿರುವುದರಿಂದ ಜೀವನವಿಡೀ ಕಂದಾಯ ಇಲಾಖೆಗೆ ಅಲೆದಾಡಿ ತಮ್ಮ ಜೀವನ ಕಳೆದುಕೊಳ್ಳುತ್ತಿದ್ದಾರೆ. ಸೂಕ್ತ ದಾಖಲೆಗಳಿಲ್ಲದೆ ಬ್ಯಾಂಕಿನಿಂದ ಯಾವುದೆ ಸಾಲ ಇನ್ನಿತರೆ ಸೌಲಭ್ಯ ಪಡೆಯಲು ಸಾಧ್ಯವಾಗುತ್ತಿಲ್ಲ. ಯಾವುದೆ ರೈತ ಸರಾಗವಾಗಿ ಕಚೇರಿಗೆ ಬಂದು ಮನವಿ ಸಲ್ಲಿಸಿದಾಗ ಪಾರದರ್ಶಕವಾಗಿ ಸೂಕ್ತ ಸಮಯದಲ್ಲಿ ದಾಖಲೆಗಳನ್ನು ಒದಗಿಸಬೇಕು. ಸೂಕ್ತ ಸಮಯದಲ್ಲಿ ರೈತರ ಕೆಲಸಗಳಾದರೆ ಕೃಷಿಯಲ್ಲಿ ಇಮ್ಮಡಿಯಾಗಿ ಲಾಭ ಗಳಿಸುತ್ತಾರೆ ಎಂಬ ವಿಶ್ವಾಸವಿದೆ. ಇತ್ತೀಚೆಗೆ ಕಂದಾಯ ಇಲಾಖೆ ಉತ್ತಮ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ಇಂದಿಗೂ ಅನಕ್ಷರಸ್ಥರಿದ್ದಾರೆ. ಕಚೇರಿಗೆ ಬರುವ ಎಲ್ಲರಿಗೂ ಗೌರವದಿಂದ ಸಮಸ್ಯೆಗಳನ್ನು ಅಧಿಕಾರಿಗಳು ಆಲಿಸಿದರೆ ಶೇ. 50ರಷ್ಟು ಸಮಸ್ಯೆ ನಿವಾರಣೆಯಾಗುತ್ತದೆ. ಕಚೇರಿಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣ ಮಾಡಬಾರದು. ಆತ್ಮತೃಪ್ತಿಗಾಗಿ ಕೆಲಸ ಮಾಡಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಮಧ್ಯವರ್ತಿಗೆ ಅವಕಾಶವಿಲ್ಲ:
ತಹಸೀಲ್ದಾರ್ ಮಲ್ಲಿಕಾರ್ಜುನ ಮಾತನಾಡಿ, ಕಚೇರಿಯಲ್ಲಿ ಯಾವುದೇ ಕಾರಣಕ್ಕೂ ಮಧ್ಯವರ್ತಿಗಳಿಗೆ ಅವಕಾಶ ನೀಡುವುದಿಲ್ಲ. ರೈತರು ತಮ್ಮ ಕೆಸಲಕ್ಕೆ ನೇರವಾಗಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ. ಸ್ಪಂದಿಸದಿದ್ದರೆ ನನ್ನನ್ನು ನೇರವಾಗಿ ಭೇಟಿ ಮಾಡಬೇಕು. ಪಾರದರ್ಶಕವಾಗಿ ಕೆಲಸ ಮಾಡಿಕೊಡಲಾಗುವುದು ಎಂದು ಭರವಸೆ ನೀಡಿದರು.ಪಹಣಿಯನ್ನು ಆಧಾರ್‌ಕಾರ್ಡ್‌ಗೆ ಲಿಂಕ್ ಮಾಡಬೇಕು. ತಾಲೂಕಿನಲ್ಲಿ 15400 ರೈತರ ಪಹಣಿಗೆ ಆಧಾರ್ ಲಿಂಕ್ ಆಗಿಲ್ಲ. ಮುಂದಿನ ಮೂರು ತಿಂಗಳಿನಲ್ಲಿ ತಾಲೂಕಿನ 4 ಹೋಬಳಿ ಮಟ್ಟದಲ್ಲಿ ಪೌತಿ ಖಾತೆ ಆಂದೋಲನದ ಮೂಲಕ ಖಾತೆ ಮಾಡಿಕೊಡಲಾಗುವುದು. ಪೂರ್ವಜರ ಮರಣ ಪ್ರಮಾಣಪತ್ರವಿಲ್ಲದಿದ್ದರೆ ನೇರವಾಗಿ ನ್ಯಾಯಾಲಯದ ಮೂಲಕ ಮರಣ ದೃಢೀಕರಣ ಪತ್ರ ನೀಡಿದರೆ ಮುಂದಿನ ಕ್ರಮ ಜರುಗಿಸಲಾಗುವುದು ಎಂದರು. ಆಲೂರು ತಾಲೂಕಿನಲ್ಲಿ 15,000 ರೈತರ ಪಹಣಿಗಳು ಇನ್ನೂ ಅವರ ಪೂರ್ವಜರ ಹೆಸರಿನಲ್ಲೇ ಇದ್ದು, ಅವರು ಈಗಾಗಲೇ ಮರಣ ಹೊಂದಿದ್ದು ಅವರ ನ್ಯಾಯಯುತವಾದ ವಾರಸುದಾರರಿಗೆ ಪೌತಿ ಖಾತೆಯನ್ನು ಮಾಡುವ ಅನಿವಾರ್ಯತೆ ಇದೆ. ಅದರಲ್ಲಿ ಕಸಬಾ ಹೋಬಳಿಯಲ್ಲಿಯೇ 5 ಸಾವಿರಕ್ಕೂ ಹೆಚ್ಚು ಪೌತಿ ಖಾತೆಗಳು ಬಾಕಿ ಇವೆ ಎಂದು ಮಾಹಿತಿ ನೀಡಿದರು. ಸಭೆಯಲ್ಲಿ ಕೆಲ ರೈತರು ತಮ್ಮ ಸಮಸ್ಯೆಗಳನ್ನು ಅನಾವರಣಗೊಳಿಸಿದರು. ಕಸಬಾ ಹೋಬಳಿಯಲ್ಲಿ ಸುಮಾರು ೫೦ಕ್ಕೂ ಹೆಚ್ಚು ಅರ್ಜಿಗಳು ದಾಖಲಾದವು. ಸಭೆಯಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ತಾಹೆರಾ ಬೇಗಂ, ಶಿರಸ್ತೇದಾರ್ ಅಂಕೇಗೌಡ, ರಾಜಸ್ವ ನಿರೀಕ್ಷಕ ಜ್ಞಾನೇಂದ್ರ, ಗ್ರಾಮ ಆಡಳಿತ ಅಧಿಕಾರಿಗಳಾ ರವಿನಾಯಕ್, ಚಂದ್ರಶೇಖರ್, ಸಂಜೀವ್, ಮಹೇಶ್ ಮತ್ತು ಕಸಬಾ ಹೋಬಳಿ ಗ್ರಾಮ ಸಹಾಯಕರು ಉಪಸ್ಥಿತರಿದ್ದರು.