ಅಂತ್ಯಕ್ರಿಯೆಗೆ ಅಡ್ಡಿಪಡಿಸಿದ ಕಂದಾಯ ಅಧಿಕಾರಿಗಳು

KannadaprabhaNewsNetwork |  
Published : May 20, 2026, 01:30 AM IST
01 | Kannada Prabha

ಸಾರಾಂಶ

ದೇವನಹಳ್ಳಿ: ತಾಲೂಕಿನ ಅರದೇಶನಹಳ್ಳಿಯ ವೀರಶೈವ ಲಿಂಗಾಯತ ಸ್ಮಶಾನ ಜಾಗ ಹಿಂದಿನ ಕಾಲದಿಂದಲೂ ನೀರಿನ ಮೂಲವಾಗಿದ್ದು, ಇಲ್ಲಿ ಶವಸಂಸ್ಕಾರ ಮಾಡಬಾರದೆಂದು ಕಂದಾಯ ಇಲಾಖೆ ಅಧಿಕಾರಿಗಳು ಅಂತ್ಯಕ್ರಿಯೆಗೆ ಅವಕಾಶ ನೀಡದ ಕಾರಣ ಗ್ರಾಮಸ್ಥರು ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು

ದೇವನಹಳ್ಳಿ: ತಾಲೂಕಿನ ಅರದೇಶನಹಳ್ಳಿಯ ವೀರಶೈವ ಲಿಂಗಾಯತ ಸ್ಮಶಾನ ಜಾಗ ಹಿಂದಿನ ಕಾಲದಿಂದಲೂ ನೀರಿನ ಮೂಲವಾಗಿದ್ದು, ಇಲ್ಲಿ ಶವಸಂಸ್ಕಾರ ಮಾಡಬಾರದೆಂದು ಕಂದಾಯ ಇಲಾಖೆ ಅಧಿಕಾರಿಗಳು ಅಂತ್ಯಕ್ರಿಯೆಗೆ ಅವಕಾಶ ನೀಡದ ಕಾರಣ ಗ್ರಾಮಸ್ಥರು ರಸ್ತೆಯಲ್ಲೇ ಶವವಿಟ್ಟು ಪ್ರತಿಭಟನೆ ನಡೆಸಿ ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು.

ಅರದೇಶನಹಳ್ಳಿ ಗ್ರಾಮದ ವ್ಯಕ್ತಿಯೊಬ್ಬರು ಭಾನುವಾರ ರಾತ್ರಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಸೋಮವಾರ ಅವರ ಅಂತ್ಯಕ್ರಿಯೆಗೆ ಗುಂಡಿಯನ್ನೂ ತೋಡಿ ಸಿದ್ಧತೆ ನಡೆಸಲಾಗಿತ್ತು. ಗ್ರಾಮಸ್ಥರು ಹಾಗೂ ಕುಟುಂಬಸ್ಥರು ಅಂತ್ಯಕ್ರಿಯೆ ಮಾಡಲು ಸ್ಮಶಾನಕ್ಕೆ ಶವವನ್ನು ಕೊಂಡೊಯ್ಯುತ್ತಿದ್ದ ಸಂದರ್ಭದಲ್ಲಿ ಕಂದಾಯ ಇಲಾಖೆಯ ಅಧಿಕಾರಿಗಳು ಪೊಲೀಸರ ಜೊತೆ ಆಗಮಿಸಿ ಈ ಜಾಗದಲ್ಲಿ ಅಂತ್ಯಕ್ರಿಯೆ ನಡೆಸಬಾರದೆಂದು ಕುಟುಂಬಸ್ಥರು ಮತ್ತು ಗ್ರಾಮಸ್ಥರನ್ನು ಮಧ್ಯದಲ್ಲೇ ತಡೆದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಅಧಿಕಾರಿಗಳ ನಡುವೆ ಮಾತಿನ ಚಕಮಕಿ ನಡೆದು ಪರಸ್ಪರ ತಳ್ಳಾಡಿಕೊಂಡರು. ಸ್ಥಳದಲ್ಲಿ ಕೆಲಕಾಲ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು.

ವರ್ಷಗಳ ಕಾಲ ಅಂತ್ಯಕ್ರಿಯೆ ನಡೆಸುತ್ತಿದ್ದ ಜಾಗದಲ್ಲಿ ಶವಸಂಸ್ಕಾರ ತಡೆಯುವುದು ಈಗ ಏಕಾಏಕಿ ಸರಿಯಲ್ಲ ಎಂದು ಗ್ರಾಮಸ್ಥರು ಅಧಿಕಾರಿಗಳ ನಡೆಗೆ ಆಕ್ರೋಶ ವ್ಯಕ್ತಪಡಿಸಿದರು. ನಂತರ ಘಟನೆಯಲ್ಲಿ ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತಂದರು. ಮಾತುಕತೆ ಮೂಲಕ ಸಂಜೆ ವೇಳೆಗೆ ಅದೇ ಸ್ಥಳದಲ್ಲಿ ಅಂತ್ಯಕ್ರಿಯೆ ನಡೆಯಿತು.

ಗ್ರಾಮದ ಹೊರವಲಯದಲ್ಲಿರುವ ಸಿದ್ದಯ್ಯನಕುಂಟೆಯಲ್ಲಿ ಕಳೆದ 30 ವರ್ಷಗಳಿಂದ ವೀರಶೈವ ಸಮುದಾಯದವರು ಅಂತ್ಯಕ್ರಿಯೆ ನಡೆಸುತ್ತಿದ್ದರು. ಗ್ರಾಮಸ್ಥರೇ ಈ ಸ್ಥಳವನ್ನು ವೀರಶೈವ ಲಿಂಗಾಯತ ಸಮುದಾಯಕ್ಕೆ ನೀಡಿದ್ದಾರೆ. ಈಗಾಗಲೇ 30ಕ್ಕೂ ಹೆಚ್ಚು ಶವಗಳ ಅಂತ್ಯಸಂಸ್ಕಾರ ಮಾಡಲಾಗಿದೆ. ಆದರೆ ಈಗ ಏಕಾಏಕಿ, ಆ ಜಾಗ ಸರ್ಕಾರಕ್ಕೆ ಸೇರಿದ್ದು, ನೀರಿನ ಮೂಲ, ಅಲ್ಲಿ ಅಂತ್ರಕ್ರಿಯೆ ನಡೆಸುತ್ತಿರುವುದರಿಂದ ಗ್ರಾಮಸ್ಥರಿಗೆ ತೊಂದರೆ ಆಗಿದೆ ಎಂದು ಶವ ಸಂಸ್ಕಾರಕ್ಕೆ ಅಡ್ಡಿಪಡಿಸಿರುವುದು ಸರಿಯಲ್ಲ ಎಂದು ವೀರಶೈವ ಲಿಂಗಾಯತ ಸಮುದಾಯದ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದರು.

ರಾಜಕೀಯ ದ್ವೇಷ:

ರಾಜಕೀಯ ದುರುದ್ದೇಶದಿಂದ ನಮ್ಮ ಸಮುದಾಯದ ಮೇಲೆ ದ್ವೇಷ ತೋರಿಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಕಂದಾಯ ಅಧಿಕಾರಿಗಳು ಈಗಾಗಲೇ ಈ ಜಾಗವನ್ನು ವೀರಶೈವ ಸಮುದಾಯದ ಸ್ಮಶಾನವಾಗಿ ಗುರುತಿಸಲು ಸಿದ್ಧತೆ ಮಾಡಿಕೊಂಡಿದ್ದರು. ಆದರೆ ರಾಜಕೀಯ ಮುಖಂಡರು ಈ ಜಾಗಕ್ಕೆ ಮಂಜೂರು ಸಿಗದಂತೆ ತಡೆಯುತ್ತಿದ್ದಾರೆ ಎಂದು ಗ್ರಾಮಸ್ಥರು ದೂರಿದರು.

ಈ ವೇಳೆ ಗ್ರಾಮದ ವೀರಶೈವ ಲಿಂಗಾಯತ ಸಮಾಜದ ತಾಲೂಕು ಅಧ್ಯಕ್ಷ ಎಂ.ಎಸ್ ರಮೇಶ್, ಖಜಾಂಚಿ ಎಸ್. ನಾಗೇಶ್, ರಾಜ್ಯ ಸಮಿತಿ ಸದಸ್ಯ ವಿರೂಪಾಕ್ಷ, ಮುಖಂಡರಾದ ನಾಗೇಶ್, ಸತೀಶ್, ಮಣಿ, ಡಿವೈಎಸ್ಪಿ ಪಾಂಡುರಂಗ, ದೊಡ್ಡಬಳ್ಳಾಪುರ ಉಪವಿಭಾಗಾಧಿಕಾರಿ ಮಂಜುನಾಥ್, ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಹನುಮಂತರಾಯಪ್ಪ ಮತ್ತು ಸಿಬಂದ ವರ್ಗ ಇದ್ದರು.

೧೯ ದೇವನಹಳ್ಳಿ ಚಿತ್ರಸುದ್ದಿ: ೦೧

ದೇವನಹಳ್ಳಿ ತಾಲೂಕಿನ ಅರದೇಶನಹಳ್ಳಿ ಗ್ರಾಮದ ವೀರಶೈವ ಲಿಂಗಾಯತ ಸ್ಮಶಾನದಲ್ಲಿ ಶವಸಂಸ್ಕಾರಕ್ಕೆ ಅಡ್ಡಿಪಡಿಸಿದ ಅಧಿಕಾರಿಗಳ ವಿರುದ್ಧ ಗ್ರಾಮಸ್ಥರ ಆಕ್ರೋಶ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಟೈರ್ ಪಂಚರ್ ಆಗಿ ಮರಕ್ಕೆ ಗುದ್ದಿದ ಕಾರು: ಶನಿ ದೇಗುಲ ವ್ಯವಸ್ಥಾಪಕ ಜಗನ್ನಾಥ್ ಸಾವು
ಪೇಪರ್ ಲೆಸ್ ನೋಂದಣಿಯಿಂದ ಸಾರ್ವಜನಿಕರಿಗೆ ತೊಂದರೆ: ನಾಗೇಂದ್ರ