ಸಚಿವ ಕೃಷ್ಣಬೈರೇಗೌಡ ಸೂಚನೆ । ಕಂದಾಯ ಇಲಾಖೆ ಪ್ರಗತಿ ಪರಿಶೀಲನಾ ಸಭೆ । ಭೂದಾಖಲೆಗಳ ಡಿಜಿಟಲೀಕರಣಕ್ಕೆ ನಿರ್ದೇಶನ
ಮುಂಬರುವ ಜೂ.30ರೊಳಗೆ ಜಿಲ್ಲೆಯಲ್ಲಿ ಬಾಕಿ ಇರುವ ಕಂದಾಯ ಗ್ರಾಮಗಳ ರಚನೆಗೆ ಸಂಬಂಧಿಸಿದಂತೆ ಅಂತಿಮ ಅಧಿಸೂಚನೆ ಹೊರಡಿಸಬೇಕು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲೆಯ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಹಟ್ಟಿ, ತಾಂಡಾಗಳನ್ನು ಕಂದಾಯ ಗ್ರಾಮಗಳನ್ನಾಗಿ ಮಾಡುವ ಕಾರ್ಯ ತ್ವರಿತಗತಿಯಲ್ಲಿ ನಡೆಯಬೇಕು ಎಂದರು.ಕಂದಾಯ ಗ್ರಾಮಗಳ ರಚನೆಗೆ ಜಿಲ್ಲೆಯಲ್ಲಿ ಒಟ್ಟು 316 ಗ್ರಾಮಗಳ ಗುರುತಿಸಲಾಗಿದ್ದು, ಈಗಾಗಲೇ 296 ಪ್ರಾಥಮಿಕ ಸೂಚನೆ ಹಾಗೂ 206 ಅಂತಿಮ ಅಧಿಸೂಚನೆಯಾಗಿದೆ. ಇನ್ನೂ 61 ಗ್ರಾಮಗಳು ಅಂತಿಮ ಅಧಿಸೂಚನೆಗೆ ಬಾಕಿ ಇದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಮಾಹಿತಿ ನೀಡಿದರು.
ಗ್ರಾಮದ 1 ಕಿಮೀ ವ್ಯಾಪ್ತಿ ಒಳಗೆ ಇದ್ದು, 10 ಮನೆಗಳಿಗಿಂತಲೂ ಹೆಚ್ಚು ಇದ್ದರೆ ಉಪ ಗ್ರಾಮ ರಚನೆ ಮಾಡಲು ಅವಕಾಶ ಇದೆ. ಜನರಿಗೆ ನಾವು ಸ್ಥಿರ ಬದುಕು ನೀಡಬೇಕು. ಬಿಟ್ಟು ಹೋಗಿರುವ ಕಂದಾಯ ಗ್ರಾಮಗಳ ರಚನೆ ಹಾಗೂ ಗುರುತಿಸುವ ಕಾರ್ಯ ಆಗಬೇಕು ಎಂದರು
ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ಹಕ್ಕುಪತ್ರ ಹಾಗೂ ಆಸ್ತಿ ನೊಂದಣಿಗೆ ಸಂಬಂಧಿಸಿದಂತೆ ಒಟ್ಟು 6393 ಕುಟುಂಬಗಳ ದಾಖಲೆಗಳಿಗೆ ಆಯಾ ತಹಸೀಲ್ದಾರರು ಅನುಮೋದನೆ ನೀಡಿದ್ದು, 4305 ಡೀಡ್‍ಗಳಿಗೆ ತಹಸೀಲ್ದಾರರು ಸಹಿ ಮಾಡಿರುತ್ತಾರೆ. ಈವರೆಗೆ 2888 ಫಲಾನುಭವಿಗಳಿಗೆ ಕಾವೇರಿ ತಂತ್ರಾಂಶದಲ್ಲಿ ಉಪ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿದ್ದು, 2403 ಫಲಾನುಭವಿಗಳ ಇ-ಸ್ವತ್ತು ನೋಟಿಸ್ ಜನರೇಟ್ ಮಾಡಲಾಗಿದೆ ಎಂದರು.
ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ತಾಜ್‍ಪೀರ್, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಶಿವಣ್ಣ, ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಎಲ್ಲ ತಾಲೂಕುಗಳ ತಹಸೀಲ್ದಾರರು ಪಾಲ್ಗೊಂಡಿದ್ದರು.