ಕನ್ನಡಪ್ರಭ ವಾರ್ತೆ ಮಂಡ್ಯ
ಕಾರ್ಖಾನೆ ಇತಿಹಾಸದಲ್ಲೇ ಮೊದಲ ಬಾರಿಗೆ ಅಧ್ಯಕ್ಷ ಗಂಗಾಧರ್ ಅವರು ಕಾರ್ಖಾನೆಗೆ ಸೇರಿದ ಆಸ್ತಿಯಲ್ಲಿ ಅಕ್ರಮವಾಗಿ ಅನುಭೋಗದಲ್ಲಿರುವವರನ್ನು ಪತ್ತೆಹಚ್ಚಿದ್ದು, ಈ ಸಂಬಂಧ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ನಗರದ ತಹಸೀಲ್ದಾರ್ ಕಚೇರಿಯಲ್ಲಿ ಸೋಮವಾರ ಸಭೆ ನಡೆಸಿ, ಮೈಷುಗರ್ ಆಸ್ತಿಗೆ ಸಂಬಂಧಿಸಿದ ಆರ್‌ಟಿಸಿಗಳನ್ನು ನೀಡಿ ಅತಿಕ್ರಮಣದಾರರ ವಿರುದ್ಧ ಕ್ರಮಕ್ಕೆ ಸೂಚಿಸಿದರು.
ಕಾರ್ಖಾನೆ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಕಂಪನಿಗೆ ಸೇರಿದ ಆಸ್ತಿಗಳ ಪರಿಶೀಲನೆ ನಡೆಸುವ ವೇಳೆ ಕೆಲವರು ಅಕ್ರಮವಾಗಿ ವಾಣಿಜ್ಯ ಉದ್ದೇಶಕ್ಕೆ ಬಳಸಿಕೊಳ್ಳುತ್ತಿರುವುದು, ಅಕ್ರಮವಾಗಿ ಸಾಗುವಳಿ ಮಾಡುತ್ತಿರುವುದು ಕಂಡುಬಂದಿತ್ತು. ಕಂಪನಿ ಅಧಿಕಾರಿಗಳ ಕಡೆಯಿಂದ ಪರಿಶೀಲನೆ ನಡೆಸಲಾಯಿತಾದರೂ ಯಾವುದೇ ಪ್ರಯೋಜನವಾಗಲಿಲ್ಲ. ಕೊನೆಗೆ ನಿವೃತ್ತ ಕಂದಾಯಾಧಿಕಾರಿ ಸ್ವಾಮಿಗೌಡ ಅವರನ್ನು ಎಸ್ಟೇಟ್ ಮ್ಯಾನೇಜರ್ ಹುದ್ದೆಗೆ ನೇಮಿಸಿಕೊಂಡು ಪರಿಶೀಲಿಸಿದಾಗ ಸುಮಾರು ೫೦೦ ಆರ್‌ಟಿಸಿಗಳಲ್ಲಿ ನೂರಾರು ಮಂದಿ ಅನುಭೋಗದಲ್ಲಿರುವುದು ಪತ್ತೆಯಾಗಿದೆ ಎಂದು ತಿಳಿಸಿದರು.ಅತಿಕ್ರಮಣದಾರರಲ್ಲಿ ಹಲವರು ೧೯೭೦ರಿಂದಲೂ ಆಸ್ತಿಯಲ್ಲಿ ಅನುಭೋಗದಲ್ಲಿದ್ದಾರೆ. ಆರ್‌ಟಿಸಿಯಲ್ಲಿ ಮೈಷುಗರ್ ಕಾರ್ಖಾನೆ ಹೆಸರಿದ್ದರೂ ಅನುಭೋಗದಲ್ಲಿರುವವರೇ ಬೇರೆಯವರಾಗಿದ್ದಾರೆ. ಕೆಲವರು ವಾಣಿಜ್ಯ ಉದ್ದೇಶಗಳಿಗೆ ಕಾರ್ಖಾನೆ ಆಸ್ತಿಯನ್ನು ಬಳಸಿಕೊಂಡು ಲಾಭ ಗಳಿಸುತ್ತಿದ್ದರೆ, ಕೆಲವರು ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ಆದಾಯ ಮೂಲ ಸೃಷ್ಟಿಸಿಕೊಂಡಿದ್ದಾರೆ.
ಆನಂತರದಲ್ಲಿ ಅತಿಕ್ರಮಣ ಮಾಡಿಕೊಂಡಿರುವವರ ವಿರುದ್ಧ ಕ್ರಮಕ್ಕೆ ಮುಂದಾಗುತ್ತೇವೆ. ವಾಣಿಜ್ಯ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ ವಾರ್ಷಿಕವಾಗಿ , ಕೃಷಿ ಉದ್ದೇಶಕ್ಕೆ ಬಳಕೆಯಾಗುತ್ತಿದ್ದರೆ ೬ ತಿಂಗಳಿಗೊಮ್ಮೆ ನೆಲಬಾಡಿಗೆ ವಿಧಿಸಲಾಗುತ್ತದೆ. ಜೊತೆಗೆ ಇಷ್ಟು ವರ್ಷಗಳವರೆಗೆ ಕಾರ್ಖಾನೆಗೆ ಆಗಿರುವ ಫಸಲು ನಷ್ಟವನ್ನೂ ಅತಿಕ್ರಮಣದಾರರಿಂದ ವಸೂಲಿ ಮಾಡಲಾಗುತ್ತದೆ. ನೆಲಬಾಡಿಗೆ ನೀಡುವುದಕ್ಕೆ ಒಪ್ಪದವರನ್ನು ಕೂಡಲೇ ಪೊಲೀಸ್ ಭದ್ರತೆಯಲ್ಲಿ ಅಲ್ಲಿಂದ ತೆರವುಗೊಳಿಸಲಾಗುವುದು ಎಂದು ತಿಳಿಸಿದರು.
ಕಂದಾಯಾಧಿಕಾರಿಗಳು ಕಾರ್ಖಾನೆ ಆಸ್ತಿಗೆ ಸಂಬಂಧಿಸಿದಂತೆ ಒದಗಿಸುವ ಮಾಹಿತಿಗಳಿಂದ ಎಷ್ಟು ಮಂದಿ ಬಳಿ ಅಧಿಕೃತ ದಾಖಲೆಗಳಿವೆ ಅಥವಾ ಅನುಭೋಗದಲ್ಲಿರುವವರೆಲ್ಲಾ ಅತಿಕ್ರಮಣದಾರರೇ ಎಂಬುದು ತಿಳಿಯುತ್ತದೆ. ಕಾರ್ಖಾನೆ ಆಸ್ತಿಯಲ್ಲಿ ಅಕ್ರಮವಾಗಿ ಅನುಭೋಗದಲ್ಲಿರುವವರಿಗೆ ನೆಲಬಾಡಿಗೆ ವಿಧಿಸುವ ಕುರಿತಂತೆಯೂ ಮಾತುಕತೆ ನಡೆಸಲಾಗುವುದು. ಅದಕ್ಕೆ ಒಪ್ಪದಿದ್ದರೆ ಕೂಡಲೇ ಅಂತಹವರನ್ನು ತೆರವುಗೊಳಿಸಲು ಕ್ರಮ ವಹಿಸುವುದಾಗಿ ಹೇಳಿದರು.
‘ಕಂಪನಿಯ ವತಿಯಿಂದ ರೈತರಿಗೆ ಮಂಜೂರು ಮಾಡಿರುವುದು, ಇಲ್ಲವೇ ಹರಾಜು ಪ್ರಕ್ರಿಯೆಯಲ್ಲಿ ತೆಗೆದುಕೊಂಡಿರುವ ಜಮೀನುಗಳ ರೈತರು ತಮ್ಮ ಹೆಸರಿಗೆ ಆರ್‌ಟಿಸಿ ಮಾಡಿಕೊಳ್ಳದಿದ್ದಲ್ಲಿ ಕಂಪನಿ ವತಿಯಿಂದಲೇ ಆರ್‌ಟಿಸಿ ಮಾಡಿಸಿಕೊಡಲಾಗುವುದು. ಇಲ್ಲವೇ ಕಾನೂನು ಬದ್ಧವಾಗಿ ಮಾಸಿಕ ಬಾಡಿಗೆ ನಿಗದಿ ಮಾಡಲಾಗುತ್ತದೆ. ಪ್ರತಿ ಸೋಮವಾರ ಮಧ್ಯಾಹ್ನ ತಹಸೀಲ್ದಾರ್ ಕಚೇರಿಯಲ್ಲಿ ಕಂದಾಯ ಅಧಿಕಾರಿಗಳ ನೇತೃತ್ವದಲ್ಲಿ ಸಭೆ ನಡೆಸಿ ಮೈಷುಗರ್ ಆಸ್ತಿಗೆ ಸಂಬಂಧಿಸಿದಂತೆ ಚರ್ಚೆ ನಡೆಸಲಾಗುವುದು.’
--------------------------
- ಶಿವಕುಮಾರ್ ಬಿರಾದಾರ್, ತಹಸೀಲ್ದಾರ್, ಮಂಡ್ಯ