ರೈತರಿಗೆ ರಸಗೊಬ್ಬರ, ಬಿತ್ತನೆ ಬೀಜ ವಿತರಿಸಿ

KannadaprabhaNewsNetwork | Published : May 13, 2025 1:04 AM
Follow Us

ಸಾರಾಂಶ

ಕಳೆದ ವರ್ಷ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರು ಮತ್ತು ಬಿತ್ತನೆ ಬೀಜ ನೀಡಿಲ್ಲ. ಇದರಿಂದ ತಾಲೂಕಿನ ರೈತರು ತೊಂದರೆ ಅನುಭವಿಸಿದ್ದು, ಈ ವರ್ಷ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ನೆಪ ಹೇಳದೆ ವೈಜ್ಞಾನಿಕ ದರದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ನೀಡಬೇಕು.

ಕನಕಗಿರಿ:

ಸಮಯಕ್ಕೆ ಸರಿಯಾಗಿ ರೈತರಿಗೆ ರಸಗೊಬ್ಬರದ ಜತೆಗೆ ಬಿತ್ತನೆ ಬೀಜ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಪಟ್ಟಣದ ತಹಸೀಲ್ದಾರ್‌ ಕಚೇರಿಯಲ್ಲಿ ಸೋಮವಾರ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ತಹಸೀಲ್ದಾರ್‌ ವಿಶ್ವನಾಥ ಮುರುಡಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಗದ್ದಿ ಮಾತನಾಡಿ, ಕಳೆದ ವರ್ಷ ರೈತರಿಗೆ ಸಮಯಕ್ಕೆ ಸರಿಯಾಗಿ ರಸಗೊಬ್ಬರು ಮತ್ತು ಬಿತ್ತನೆ ಬೀಜ ನೀಡಿಲ್ಲ. ಇದರಿಂದ ತಾಲೂಕಿನ ರೈತರು ತೊಂದರೆ ಅನುಭವಿಸಿದ್ದು, ಈ ವರ್ಷ ಕೃಷಿ ಇಲಾಖೆ ಅಧಿಕಾರಿಗಳು ಯಾವುದೇ ನೆಪ ಹೇಳದೆ ವೈಜ್ಞಾನಿಕ ದರದಲ್ಲಿ ರಸಗೊಬ್ಬರ, ಬಿತ್ತನೆ ಬೀಜ ನೀಡಬೇಕು ಎಂದು ಆಗ್ರಹಿಸಿದರು.

ಈಗಾಗಲೇ ನೀರಾವರಿ ಮೂಲಕ ರೈತರು ಬಿತ್ತನೆ ಮಾಡುತ್ತಿದ್ದಾರೆ. ಆದರೆ, ತಾಲೂಕು ವ್ಯಾಪ್ತಿಯ ರೈತರಿಗೆ ಹತ್ತಿ ಮತ್ತು ಸೂರ್ಯಕಾಂತಿ ಬೀಜ ಸರಬರಾಜು ಮಾಡಿಲ್ಲ. ತಾಲೂಕಿನಲ್ಲಿ ಅತಿ ಹೆಚ್ಚು ಬಿಜೋತ್ಪಾದನಾ ಮಾಡುವ ರೈತರಿದ್ದು ಹತ್ತಿ ಬೆಳೆಯನ್ನು ಕಂದಾಯ ಇಲಾಖೆ ಮತ್ತು ಕೃಷಿ ಇಲಾಖೆ ವಿಮಾ ವ್ಯಾಪ್ತಿಗೆ ಸೇರಿಸದೆ ರೈತರಿಗೆ ಅನ್ಯಾಯ ಮಾಡಿದೆ. ಹೀಗಾಗಿ ಹತ್ತಿ ಬೆಳೆಯನ್ನು ವಿಮಾ ವ್ಯಾಪ್ತಿಗೆ ತಾಲೂಕಿನ ಪ್ರಮುಖ ಬೆಳೆಯನ್ನಾಗಿ ಸೇರ್ಪಡೆಗೊಳಿಸಬೇಕು ಎಂದು ಒತ್ತಾಯಿಸಿದರು.

ಮುಂಗಾರು ಪೂರ್ವದಲ್ಲಿ ಹತ್ತಿ, ಸೂರ್ಯಕಾಂತಿ ಬಿತ್ತನೆ ಮಾಡಿರುವ ನೀರಾವರಿ ರೈತರಿಗೆ ಸಮರ್ಪಕ ವಿದ್ಯುತ್ ನೀಡುತ್ತಿಲ್ಲ. ಈ ಬಗ್ಗೆ ಕೇಳಿದರೆ ಜೆಸ್ಕಾಂ ಅಧಿಕಾರಿಗಳು ಬೇಜವಬ್ದಾರಿ ತೋರುತ್ತಿದ್ದಾರೆ. ನಿರಂತರ ವಿದ್ಯುತ್ ಸಮಸ್ಯೆ ಆಗುತ್ತಿರುವುದರಿಂದ ಬೆಳೆ ನಾಶವಾಗುತ್ತಿದೆ. ಇದರಿಂದ ರೈತರಿಗೆ ಲಕ್ಷಾಂತರ ಆರ್ಥಿಕ ಸಂಕಷ್ಟ ಎದುರಾಗಲಿದೆ. ವಿದ್ಯುತ್ ಸಮಸ್ಯೆ ಪರಿಹರಿಸದಿದ್ದರೆ ಜೆಸ್ಕಾಂ ಅಧಿಕಾರಿಗಳೆ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ವೇಳೆ ರೈತರಾದ ಭೀಮನಗೌಡ ಜಿರಾಳ, ಶಿವಕುಮಾರ ಬಡಿಗೇರ, ವೆಂಕಟೇಶ ಮಲ್ಲಿಗೆವಾಡ, ಬಾಲಪ್ಪ ನಾಡಿಗೇರ, ಜಡಿಯಪ್ಪ ನಿರಲೂಟಿ, ಹನುಮೇಶ ಪೂಜಾರಿ, ಹನುಮಂತಪ್ಪ ಬಂಡ್ರಾಳ, ಸಣ್ಣ ಶೇಖರಪ್ಪ ಗದ್ದಿ, ಸೋಮನಾಥ ನಾಯಕ ಸೇರಿದಂತೆ ಇತರರಿದ್ದರು.