ನಂಜುಂಡಪ್ಪ ವರದಿ: ಅಸಮತೋಲನ ನಿವಾರಣೆ ಪರಾಮರ್ಶೆ

KannadaprabhaNewsNetwork |  
Published : May 13, 2025, 01:03 AM IST
12ಸಿಎಚ್‌ಎನ್‌56ಚಾಮರಾಜನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಆರ್. ವಿಶಾಲ್, ಸಮಿತಿಯ ಸದಸ್ಯರು, ನಿರ್ದೇಶಕರು ಹಾಗೂ ಜಿಲ್ಲೆಯ ಶಾಸಕರು, ಹಿರಿಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ನಡೆದ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯನ್ನು ಆರ್ಥಿಕ ತಜ್ಞರು ಹಾಗೂ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ಅವರು ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. | Kannada Prabha

ಸಾರಾಂಶ

ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ಬಳಿಕ ಜಿಲ್ಲೆಗಳಲ್ಲಿ ಯಾವ ರೀತಿಯ ಬೆಳವಣಿಗೆ ಬದಲಾವಣೆಯಾಗಿದೆ, ಇನ್ನೂ ಏನೇನು ಅಭಿವೃದ್ಧಿಯಾಗಬೇಕಿದೆ ಎಂಬುದನ್ನು ಗುರುತಿಸಿ ಹೊಸದಾಗಿ ಸೂಚ್ಯಂಕ ಆಧರಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಾಮರ್ಶಿಸಿ ವರದಿ ನೀಡಲಾಗುವುದೆಂದು ಆರ್ಥಿಕ ತಜ್ಞರು ಹಾಗೂ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ತಿಳಿಸಿದರು.

ಕನ್ನಡಪ್ರಭ ವಾರ್ತೆ ಚಾಮರಾಜನಗರ

ಡಾ. ಡಿ.ಎಂ. ನಂಜುಂಡಪ್ಪ ವರದಿ ಅನುಷ್ಠಾನದ ಬಳಿಕ ಜಿಲ್ಲೆಗಳಲ್ಲಿ ಯಾವ ರೀತಿಯ ಬೆಳವಣಿಗೆ ಬದಲಾವಣೆಯಾಗಿದೆ, ಇನ್ನೂ ಏನೇನು ಅಭಿವೃದ್ಧಿಯಾಗಬೇಕಿದೆ ಎಂಬುದನ್ನು ಗುರುತಿಸಿ ಹೊಸದಾಗಿ ಸೂಚ್ಯಂಕ ಆಧರಿಸಿ ಪ್ರಾದೇಶಿಕ ಅಸಮತೋಲನ ನಿವಾರಣೆಗೆ ಪರಾಮರ್ಶಿಸಿ ವರದಿ ನೀಡಲಾಗುವುದೆಂದು ಆರ್ಥಿಕ ತಜ್ಞರು ಹಾಗೂ ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಅಧ್ಯಕ್ಷ ಪ್ರೊ. ಎಂ. ಗೋವಿಂದರಾವ್ ತಿಳಿಸಿದರು. ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಸಮಿತಿಯ ಸದಸ್ಯ ಕಾರ್ಯದರ್ಶಿಗಳು ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಆರ್. ವಿಶಾಲ್, ಸಮಿತಿಯ ಸದಸ್ಯರು, ನಿರ್ದೇಶಕರು ಹಾಗೂ ಜಿಲ್ಲೆಯ ಶಾಸಕರು, ಹಿರಿಯ ಅಧಿಕಾರಿಗಳು, ವಿವಿಧ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸೋಮವಾರ ನಡೆದ ಸಮಿತಿಯ ಜಿಲ್ಲಾ ಮಟ್ಟದ ಸಂವಾದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಪ್ರಾದೇಶಿಕ ಅಸಮತೋಲನ ನಿವಾರಣೆ ಕುರಿತ ಡಾ. ಡಿ.ಎಂ. ನಂಜುಂಡಪ್ಪ ಅಧ್ಯಕ್ಷತೆಯ ಸಮಿತಿಯು 2002ರಲ್ಲಿ ವರದಿ ನೀಡಿದ ಶಿಫಾರಸಿನ ಅನ್ವಯ ಗುರುತಿಸಲಾದ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ಸರ್ಕಾರ ೪೩ ಸಾವಿರ ಕೋಟಿ ರು. ವೆಚ್ಚ ಮಾಡಿದೆ. ಈ ತಾಲೂಕುಗಳಲ್ಲಿ ಯಾವ ರೀತಿಯ ಬೆಳವಣಿಗೆಯಾಗಿದೆ, ಯಾವ ತಾಲೂಕುಗಳಲ್ಲಿ ಇನ್ನೂ ಹಿಂದುಳಿದ ಪ್ರದೇಶಗಳು ಮುಂದುವರೆದಿವೆ ಎಂಬುದನ್ನು ಸಮಿತಿ ಪರಾಮರ್ಶಿಸಲಿದೆ ಎಂದರು. ಅಸಮತೋಲನ ಹೆಚ್ಚಾದಾಗ ಪ್ರದೇಶಗಳು ಹಿಂದುಳಿಯಲಿವೆ. ನಂಜುಂಡಪ್ಪ ವರದಿ ಅನುಷ್ಠಾನದಿಂದ ಹೇಗೆ ಅಭಿವೃದ್ಧಿಯಾಗಿದೆ ಎಂಬುದನ್ನು ಸೂಚ್ಯಂಕದ ಅಧಾರದ ಮೇಲೆ ನೋಡಲಾಗುತ್ತದೆ. ಹಿಂದುಳಿದಿದ್ದಲ್ಲಿ ಯಾವ ಕಾರಣಕ್ಕಾಗಿ ಯಾವ ಕ್ಷೇತ್ರದಲ್ಲಿ ಹಿಂದೆ ಉಳಿದಿದೆ ಎಂಬುದನ್ನು ಸಮಿತಿಯು ಪರಾಮರ್ಶಿಸಲಿದೆ. ತಲಾ ಆದಾಯ, ಶಿಕ್ಷಣ, ಆರೋಗ್ಯ, ಇನ್ನಿತರ ಕ್ಷೇತ್ರಗಳಲ್ಲಿನ ಸುಧಾರಣೆ, ಬೆಳವಣಿಗೆಯ ಬಗ್ಗೆಯು ಸಮಿತಿಯು ಪರಿಶೀಲಿಸಲಿದೆ. ಎಲ್ಲ ಅಂಶಗಳನ್ನು ಗಮನಿಸಿ ಅಧ್ಯಯನ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ ಎಂದು ತಿಳಿಸಿದರು.

ಸಮಿತಿಯ ಸದಸ್ಯ ಕಾರ್ಯದರ್ಶಿ ಹಾಗೂ ವಿತ್ತೀಯ ಸುಧಾರಣೆ ಮತ್ತು ಯೋಜನಾ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಡಾ. ಆರ್. ವಿಶಾಲ್ ಮಾತನಾಡಿ, ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯು ಹೊಸ ಸೂಚ್ಯಂಕಗಳನ್ನು ಆಧರಿಸಿ ಶಿಫಾರಸು ಮಾಡಬೇಕಿದೆ. ಅಸಮತೋಲನ ನಿವಾರಣೆ ಸಂಬಂಧ ಜಿಲ್ಲೆಗಳಿಗೆ ಭೇಟಿ ನೀಡಿ ಸಂವಾದ ನಡೆಸಿ ಅಭಿಪ್ರಾಯ ಸಲಹೆಗಳನ್ನು ಪಡೆಯಲಾಗುತ್ತಿದೆ. ಅಗಬೇಕಿರುವ ಅಭಿವೃದ್ಧಿಗಳ ಸಂಬಂಧ ಸ್ಥಳೀಯವಾಗಿ ಚರ್ಚಿಸಿ ವಿವರ ಪಡೆದುಕೊಳ್ಳಲಾಗುತ್ತಿದೆ ಎಂದರು.

ಶಾಸಕ ಎ.ಆರ್. ಕೃಷ್ಣಮೂರ್ತಿ ಮಾತನಾಡಿ, ಜಿಲ್ಲೆಯಲ್ಲಿ ಸಾಕಷ್ಟು ಅರಣ್ಯ ಪ್ರದೇಶವಿದ್ದು ಹಿಂದುಳಿದವರು, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಶಾಲೆಗಳಿಗೆ ಅಗತ್ಯ ಸಂಖ್ಯೆಗೆ ಅನುಗುಣವಾಗಿ ನುರಿತ ಶಿಕ್ಷಕರ ನೇಮಕವಾಗಬೇಕಿದೆ. ಕೌಶಲ್ಯ ಅಭಿವೃದ್ಧಿಗೆ ಗಮನಹರಿಸಿ ಸ್ಥಳೀಯರಿಗೆ ಉದ್ಯೋಗ ಅವಕಾಶಗಳನ್ನು ನೀಡಬೇಕಿದೆ. ಪ್ರವಾಸಿ ತಾಣ, ಧಾರ್ಮಿಕ ಕ್ಷೇತ್ರಗಳು, ಅರಣ್ಯಧಾಮಗಳಂತಹ ಪ್ರವಾಸಿ ಸ್ಥಳಗಳಿದ್ದು ಪ್ರವಾಸೋದ್ಯಮ ಅಭಿವೃದ್ಧಿಗೆ ಜಿಲ್ಲೆ ಪೂರಕವಾಗಿದೆ. ಕಬಿನಿ ೨ನೇ ಹಂತ ಜಾರಿಯಾದರೆ ಅನುಕೂಲವಾಗಲಿದೆ. ಹೀಗೆ ಹಲವು ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಸಮಿತಿಯು ಗಮನಿಸಿ ಶಿಫಾರು ಮಾಡಬೇಕು ಎಂದರು.

ಶಾಸಕ ಎಂ.ಆರ್. ಮಂಜುನಾಥ್ ಮಾತನಾಡಿ, ಹನೂರು ಕ್ಷೇತ್ರದಲ್ಲಿ ನೀರಾವರಿಗೆ ಹೆಚ್ಚಿನ ಆದ್ಯತೆ ಕಲ್ಪಿಸಬೇಕು. ಕ್ಷೇತ್ರದಲ್ಲಿ ಯಾವುದೇ ಕೈಗಾರಿಕೆ ಪ್ರದೇಶಗಳಿಲ್ಲ. ಹೀಗಾಗಿ ಉದ್ಯೋಗಕ್ಕಾಗಿ ಬೇರೆಕಡೆ ಸ್ಥಳೀಯರು ಹೋಗಬೇಕಿದೆ. ಕಾಡಂಚಿನ ಗ್ರಾಮಗಳು, ರಸ್ತೆ ಸಂಪರ್ಕಗಳು ಇಲ್ಲದ ಕಾರಣ ವಿದ್ಯಾರ್ಥಿಗಳಿಗೆ ತೀವ್ರ ತೊಂದರೆಯಾಗಿದೆ. ಉದ್ಯೋಗ ಸೃಷ್ಟಿ, ರೈತರಿಗೆ ನೆರವು, ಆರೋಗ್ಯ ಕ್ಷೇತ್ರದ ಸುಧಾರಣೆಯಾಗಬೇಕಿದೆ ಎಂದು ಸಮಿತಿಯ ಗಮನಕ್ಕೆ ತಂದರು.

ಜಿಲ್ಲಾಧಿಕಾರಿ ಶಿಲ್ಪಾ ನಾಗ್ ಮಾತನಾಡಿ, ಇಲ್ಲಿ ಉತ್ಪಾದಿಸುವ ಬೆಳೆಗಳಿಗೆ ಮೌಲ್ಯವರ್ಧನೆ ಆಗಬೇಕಿದೆ. ಜಿಲ್ಲೆಯ ಪ್ರವಾಸಿ ತಾಣಗಳ ಅಭಿವೃದ್ಧಿ ಸಂಬಂಧ ವಿಸೃತ ಯೋಜನೆ ತಯಾರಿಸಲಾಗಿದೆ. ಮೂಲ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ಕೊಡಲಾಗಿದೆ ಎಂದರು.

ವಾಣಿಜೋದ್ಯಮಿಗಳು, ರೈತ ಮುಖಂಡರು, ವಿವಿಧ ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಇನ್ನಿತರ ಕ್ಷೇತ್ರದ ಸಂಘಟನೆಗಳ ಮುಖಂಡರು, ಪ್ರತಿನಿಧಿಗಳು ಮಾತನಾಡಿ ಸ್ಥಳೀಯ ಸಮಸ್ಯೆಗಳನ್ನು ಗಮನಕ್ಕೆ ತಂದು ಸಲಹೆಗಳನ್ನು ನೀಡಿದರು. ಬೆಳೆಗಳಿಗೆ ಬೆಂಬಲ ಬೆಲೆ, ಉದ್ಯೋಗ ಸೃಷ್ಠಿ, ನೀರಾವರಿ, ಸೂಪರ್ ಸ್ಪೆಶಾಲಿಟಿ ಆಸ್ಪತ್ರೆಗಳು, ಸಣ್ಣ ಉದ್ಯಮಗಳಿಗೂ ಹೆಚ್ಚಿನ ಉತ್ತೇಜನ, ಶಿಕ್ಷಣ ಸಂಸ್ಥೆಗಳಿಗೆ ಮೂಲ ಸೌಕರ್ಯ, ಕಾಡು ಪ್ರಾಣಿಗಳಿಂದ ಬೆಳೆಗಳ ರಕ್ಷಣ, ಟೆಕ್‌ಟೈಲ್ಸ್ ಹಬ್, ಜಿ.ಎಸ್.ಟಿ ವಿನಾಯಿತಿ, ಬ್ಯಾಂಕುಗಳಿಂದ ಸಾಲ ಸೌಲಭ್ಯ, ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ಪ್ರೋತ್ಸಾಹ, ಕೃಷಿ ಆಧಾರಿತ ಕೈಗಾರಿಕೆಗಳು, ಅತಿಥಿ ಶಿಕ್ಷಕರಿಗೆ ಹೆಚ್ಚಿನ ಗೌರವಧನ, ರೇಷ್ಮೆ ಅಭಿವೃದ್ಧಿ ಪುನಶ್ಚೇತನ ಸೇರಿದಂತೆ ಇನ್ನಿತರ ಅಂಶಗಳ ಬಗ್ಗೆ ಸಲಹೆ ನೀಡಿದರು.

ಅಧಿಕಾರಿಗಳಿಂದಲೂ ಆರೋಗ್ಯ, ಶಿಕ್ಷಣ, ಕೈಗಾರಿಕೆ, ನಗರಾಭಿವೃದ್ದಿ, ಮೂಲ ಸೌಕರ್ಯ ಇನ್ನಿತರ ವಿಷಯಗಳ ಬಗ್ಗೆ ವಿವರವಾಗಿ ಮಾಹಿತಿ ಪಡೆಯಲಾಯಿತು.

ಕರ್ನಾಟಕ ಪ್ರಾದೇಶಿಕ ಅಸಮತೋಲನ ನಿವಾರಣಾ ಸಮಿತಿಯ ಸದಸ್ಯರಾದ ಡಾ. ಎಂ.ಹೆಚ್. ಸೂರ್ಯನಾರಾಯಣ, ನಿರ್ದೇಶಕರಾದ ಚಂದ್ರಶೇಖರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮೋನಾ ರೋತ್, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ ಉಪಸ್ಥಿತರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ