ಕನ್ನಡಪ್ರಭ ವಾರ್ತೆ ಉಡುಪಿ
ಧರ್ಮಗುರು ಡೆನಿಸ್ ಡೆಸಾ, ದೇವರು ತನಗೆ ನೀಡಿದ ಜೀವನಕ್ಕಾಗಿ ಕೃತಜ್ಞತಾ ಬಲಿಪೂಜೆಯನ್ನು ಸಹ ಯಾಜಕರೊಂದಿಗೆ ಅರ್ಪಿಸಿದರು.
ಈ ವೇಳೆ ಪ್ರವಚನ ನೀಡಿದ ದೇರೆಬೈಲ್ ಚರ್ಚ್ ಪ್ರಧಾನ ಧರ್ಮಗುರು ಜೋಸೆಫ್ ಮಾರ್ಟಿಸ್, ಜೀವನ ದೇವರು ನಮಗೆ ನೀಡಿರುವ ವರವಾಗಿದ್ದು, ಅದರೊಂದಿಗೆ ಸೇವೆ ಮತ್ತು ಜವಾಬ್ದಾರಿಯನ್ನು ಕೂಡ ನೀಡಿದ್ದಾರೆ. ಸಮಾಜದಲ್ಲಿ ಸರ್ವರೊಂದಿಗೆ ಬೆರೆತು ನಮ್ಮ ಜೀವನವನ್ನು ಪರರ ಒಳಿತಿಗಾಗಿ ಉಪಯೋಗಿಸಿಕೊಂಡು ದೇವರ ವಾಕ್ಯದಂತೆ ಬದುಕಿದಾಗ ನಮ್ಮ ಜೀವನ ಸಾರ್ಥಕತೆಯನ್ನು ಕಾಣಲು ಸಾಧ್ಯವಿದೆ. ವಂ.ಡೆನಿಸ್ ಡೆಸಾ ತನ್ನ ಜೀವಿತಾವಧಿಯಲ್ಲಿ ಎಲ್ಲರೊಂದಿಗೆ ಬೆರೆತು ಯೇಸುವಿನ ನೈಜ ಸೇವಕರಾಗಿ ಸಮಾಜದಲ್ಲಿ ಕ್ರಾಂತಿಯನ್ನೇ ಮಾಡಿದ್ದಾರೆ ಎಂದರು.ಬಲಿಪೂಜೆಯ ಬಳಿಕ ಕಿರು ಸನ್ಮಾನ ಕಾರ್ಯಕ್ರಮ ಚರ್ಚ್ ಆಡಳಿತ ಮಂಡಳಿಯಿಂದ ಜರುಗಿತು. ಧರ್ಮಪ್ರಾಂತ್ಯದ ಪರವಾಗಿ ಶ್ರೇಷ್ಠ ಗುರುಗಳು, ಸರ್ವಧರ್ಮ ಸಮಿತಿಯ ವತಿಯಿಂದ ಡೆನಿಸ್ ಡೆಸಾ ಅವರನ್ನು ಸನ್ಮಾನಿಸಲಾಯಿತು.
-------ಬಡವರಿಗೆ ಮನೆ ನಿರ್ಮಿಸಲು ಮನವಿಜನ್ಮದಿನದ ಪ್ರಯುಕ್ತ ಅದ್ದೂರಿ ಆಚರಣೆಯ ಬದಲಾಗಿ ಚರ್ಚಿನ ವ್ಯಾಪ್ತಿಯಲ್ಲಿರುವ ಒಂದು ಬಡ ಕುಟುಂಬಕ್ಕೆ ಸುಸಜ್ಜಿತ ಮನೆಯೊಂದನ್ನು ನಿರ್ಮಿಸಲು ಧರ್ಮಗುರು ಡೆನಿಸ್ ಡೆಸಾ ಮನವಿ ಮಾಡಿದರು. ಮನವಿಗೆ ಚರ್ಚಿನ ಸದಸ್ಯರು ಸಹಮತ ವ್ಯಕ್ತಪಡಿಸಿ ಮುಂದಿನ 3 ತಿಂಗಳ ಒಳಗಡೆ ಮನೆಯನ್ನು ನಿರ್ಮಿಸುವುದಕ್ಕೆ ಒಪ್ಪಿಗೆ ಸೂಚಿಸಲಾಯಿತು.