ಶಿರಸಿ: ಭಗವದ್ಗೀತೆಯು ಉಪನಿಷತ್ತುಗಳ ಸಾರವಾಗಿದ್ದು, ವ್ಯಕ್ತಿತ್ವ ವಿಕಸನ, ನೈತಿಕ ಮೌಲ್ಯಗಳ ಪುನರುತ್ಥಾನ, ಸಾಮಾಜಿಕ ಸಾಮರಸ್ಯ ಹಾಗೂ ರಾಷ್ಟ್ರೀಯ ಭಾವೈಕ್ಯ ನಿರ್ಮಾಣದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದು ಸೋಂದಾ ಸ್ವರ್ಣವಲ್ಲೀಯ ಗಂಗಾಧರೇಂದ್ರ ಸರಸ್ವತೀ ಸ್ವಾಮಿಗಳು ನುಡಿದರು.ಶ್ರೀ ಭಗವದ್ಗೀತಾ ಅಭಿಯಾನ- ಕರ್ನಾಟಕ ಹಾಗೂ ಶ್ರೀ ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಆಶ್ರಯದಲ್ಲಿ ಬಳ್ಳಾರಿಯ ಸಂಗನಕಲ್ಲು ರಸ್ತೆಯ ಶಂಕರ ಮಠದಲ್ಲಿ ಆಯೋಜಿಸಿದ್ದ 2026ನೇ ಸಾಲಿನ ಅಭಿಯಾನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.
ಇಂದಿನ ದಿನಗಳಲ್ಲಿ ಮಾನಸಿಕ ಒತ್ತಡ, ರಕ್ತದೊತ್ತಡ, ಮಧುಮೇಹ ಹಾಗೂ ಹೃದಯಾಘಾತದಂತಹ ಆರೋಗ್ಯ ಸಮಸ್ಯೆಗಳು ಹೆಚ್ಚುತ್ತಿವೆ. ಭಗವದ್ಗೀತೆಯ ತತ್ವಗಳು ಉತ್ತಮ ಜೀವನಶೈಲಿಯನ್ನು ರೂಪಿಸಿ, ಮಾನಸಿಕ ಒತ್ತಡವನ್ನು ಕಡಿಮೆಗೊಳಿಸಿ ಮನಸ್ಸಿಗೆ ಶಾಂತಿ ನೀಡಬಲ್ಲವು. ಸಮಾಜದಲ್ಲಿ ಕುಸಿಯುತ್ತಿರುವ ನೈತಿಕ ಮೌಲ್ಯಗಳ ಪುನರುತ್ಥಾನಕ್ಕೂ ಆಧ್ಯಾತ್ಮಿಕತೆಯ ಗಟ್ಟಿಯಾದ ಅಡಿಪಾಯ ಅಗತ್ಯವಾಗಿದೆ. ವಿವಿಧ ಮತ- ಪಂಥಗಳ ನಡುವೆ ಪರಸ್ಪರ ಹೊಂದಾಣಿಕೆ ಮತ್ತು ಸಾಮರಸ್ಯ ಬೆಳೆಸುವುದರ ಜತೆಗೆ ಆಧ್ಯಾತ್ಮಿಕ ಸಂಸ್ಕಾರವುಳ್ಳ ಸುಶಿಕ್ಷಿತ ಜನಾಂಗದ ನಿರ್ಮಾಣದ ಮೂಲಕ ರಾಷ್ಟ್ರೀಯ ಭಾವೈಕ್ಯ ಸಾಧಿಸುವುದು ಅಭಿಯಾನದ ಪ್ರಮುಖ ಉದ್ದೇಶವಾಗಿದೆ ಎಂದು ವಿವರಿಸಿದರು.
ಭಗವದ್ಗೀತೆಯ ಶ್ಲೋಕಗಳನ್ನು ನಿರ್ದಿಷ್ಟ ರಾಗ ಮತ್ತು ದಾಟಿಯಲ್ಲಿ ಜನರಿಗೆ, ವಿಶೇಷವಾಗಿ ಮಕ್ಕಳಿಗೆ ಕಂಠಪಾಠ ಮಾಡಿಸುವುದು ಅಭಿಯಾನದ ವಿಶೇಷತೆಯಾಗಿದೆ. ಪ್ರತಿವರ್ಷ ಒಂದೊಂದು ಅಧ್ಯಾಯವನ್ನು ಆಯ್ಕೆ ಮಾಡಿಕೊಂಡು ಗೀತೆಯ ಸಂದೇಶವನ್ನು ಜನರಿಗೆ ತಲುಪಿಸಲಾಗುತ್ತಿದ್ದು, ಈ ವರ್ಷ ಎರಡನೇ ಅಧ್ಯಾಯವನ್ನು ವಿಶೇಷವಾಗಿ ಕಲಿಸಲಾಗುತ್ತಿದೆ. ತರಬೇತಿ ಪಡೆದ ಶಿಕ್ಷಕರ ಮೂಲಕ ಶಾಲೆಗಳು, ದೇವಸ್ಥಾನಗಳು ಹಾಗೂ ಶಂಕರ ಮಠಗಳಲ್ಲಿ ತರಗತಿಗಳನ್ನು ನಡೆಸಲಾಗುತ್ತದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಿಗೆ ಗೀತಾ ಸ್ಪರ್ಧೆಗಳನ್ನು ಆಯೋಜಿಸುವುದರ ಜತೆಗೆ ಲಕ್ಷಾಂತರ ಪುಸ್ತಕಗಳನ್ನು ವಿತರಿಸುವ ಕಾರ್ಯವೂ ನಡೆಯುತ್ತಿದೆ ಎಂದರು.ಪ್ರಮುಖರಾದ ಮೋಹನ್ ಭಟ್, ಗುರುಪಾದ ಹೆಗಡೆ, ಶಂಕರ ಮಠದ ಧರ್ಮದರ್ಶಿಗಳು, ವ್ಯವಸ್ಥಾಪಕರು ಇತರರು ಇದ್ದರು.