ಸಂಕಷ್ಟದಲ್ಲಿರುವ ವಾಯವ್ಯ ಸಾರಿಗೆಗೆ ಪುನಶ್ಚೇತನ ನೀಡಿ!

KannadaprabhaNewsNetwork |  
Published : Feb 27, 2026, 02:45 AM IST
ಹುಬ್ಬಳ್ಳಿಯ ಹೊಸೂರು ಬಸ್‌ ನಿಲ್ದಾಣದಲ್ಲಿ ನಿಂತಿರುವ ಬಸ್‌ಗಳು. | Kannada Prabha

ಸಾರಾಂಶ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಾರಂಭವಾಗಿ 25 ವರ್ಷವಾಗಿದ್ದರೂ ಈ ವರೆಗೂ ಒಂದು ವರ್ಷವೂ ಸಂಸ್ಥೆ ಲಾಭ ಗಳಿಸಿಲ್ಲ. 5210 ಬಸ್‌ಗಳು ನಿತ್ಯ ಓಡುತ್ತಿದ್ದು 26 ಲಕ್ಷಕ್ಕೂ ಅಧಿಕ ಜನರು ಪ್ರಯಾಣಿಸುತ್ತಾರೆ. ಆದರೆ, ಲಾಭ ಮಾತ್ರ ಶೂನ್ಯವಾಗಿದೆ.

ಶಿವಾನಂದ ಗೊಂಬಿ

ಹುಬ್ಬಳ್ಳಿ:

ಸಂಸ್ಥೆ ಪ್ರಾರಂಭವಾದಾಗಿನಿಂದ ನಷ್ಟದಲ್ಲೇ ಇರುವ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗೆ ವಿಶೇಷ ಅನುದಾನದ ಮೂಲಕ ಪುನಶ್ಚೇತನ, ಹೊಸ ಬಸ್‌ ಖರೀದಿಗೆ ಹಣ, ಶಕ್ತಿ ಯೋಜನೆಯ ಬಾಕಿ ಹಣ ನೀಡುವ ಮೂಲಕ ಸಂಸ್ಥೆಗೆ ಶಕ್ತಿ ತುಂಬಿ!

ಇದು ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ವತಿಯಿಂದ ರಾಜ್ಯ ಸರ್ಕಾರಕ್ಕೆ ಬಜೆಟ್‌ ಹಿನ್ನೆಲೆಯಲ್ಲಿ ಹೋಗಿರುವ ಪ್ರಸ್ತಾವನೆ.

ಸಂಸ್ಥೆ ಪ್ರಾರಂಭವಾಗಿ 25 ವರ್ಷವಾಗಿದ್ದರೂ ಈ ವರೆಗೂ ಒಂದು ವರ್ಷವೂ ಸಂಸ್ಥೆ ಲಾಭ ಗಳಿಸಿಲ್ಲ. ಧಾರವಾಡ, ಬೆಳಗಾವಿ, ಬಾಗಲಕೋಟೆ, ಉತ್ತರ ಕನ್ನಡ, ಗದಗ, ಹಾವೇರಿ ಆರು ಜಿಲ್ಲೆಗಳ 9 ವಿಭಾಗ, 56 ಘಟಕ, 8 ವಿಭಾಗೀಯ ಕಾರ್ಯಾಗಾರ, 1 ಪ್ರಾದೇಶಿಕ ಕಾರ್ಯಾಗಾರಗಳಿವೆ. 23500ಕ್ಕೂ ಅಧಿಕ ಸಿಬ್ಬಂದಿಗಳಿದ್ದಾರೆ. 5210 ಬಸ್‌ಗಳು ನಿತ್ಯ ಓಡುತ್ತಿದ್ದು 26 ಲಕ್ಷಕ್ಕೂ ಅಧಿಕ ಜನರು ಪ್ರಯಾಣಿಸುತ್ತಾರೆ. ಆದರೆ, ಲಾಭ ಮಾತ್ರ ಶೂನ್ಯವಾಗಿದೆ. ಇದರಿಂದಾಗಿ ಸಂಸ್ಥೆಯ ಹಲವು ಆಸ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ಇಂತಿಷ್ಟು ವರ್ಷ ಲೀಜ್‌ ನೀಡಿದ್ದರೂ ನಿವೃತ್ತರಿಗೆ ನೀಡಬೇಕಾದ ಸೌಲಭ್ಯ ಕೊಡಲು ಸಾಧ್ಯವಾಗಿಲ್ಲ.

ಏನೇನು ಕೇಳಲಾಗಿದೆ?

ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯಡಿ 2023 ಜೂನ್‌ನಿಂದ ಈ ವರೆಗೆ ವಾಯವ್ಯ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಮಹಿಳೆಯರು ಪ್ರಯಾಣಿಸಿದ ಮೊತ್ತ ₹ 4191 ಕೋಟಿ ಆಗಿದೆ. ಆದರೆ ಸರ್ಕಾರದಿಂದ ಬಂದಿರುವುದು ಬರೀ ₹ 3102 ಕೋಟಿ ಮಾತ್ರ. ಬಾಕಿಯಿರುವ ₹ 1088 ಕೋಟಿ ಬಿಡುಗಡೆ ಮಾಡುವಂತೆ ಕೇಳಲಾಗಿದೆ. 2025-26ರಲ್ಲಿ 289 ಬಸ್‌ ನಿಷ್ಕ್ರಿಯೆಗೊಳಿಸಿದ್ದರೆ 2026-27ರಲ್ಲಿ 550 ಬಸ್‌ ನಿಷ್ಕ್ರಿಯಗೊಳಿಸಬೇಕಿದೆ. ಹೀಗಾಗಿ ಹೊಸ ಬಸ್‌ ಖರೀದಿ ಅನಿವಾರ್ಯವಾಗಿದ್ದು 800 ಬಸ್‌ ಖರೀದಿಸಲು ₹ 500 ಕೋಟಿ ಬಜೆಟ್‌ನಲ್ಲಿ ನೀಡಬೇಕೆಂದು ಕೊರಲಾಗಿದೆ.

ಹುದ್ದೆ ಖಾಲಿ:

ಸಂಸ್ಥೆಯಲ್ಲಿ ತಾಂತ್ರಿಕ ವಿಭಾಗದಲ್ಲಿ ಮೆಕಾನಿಕ್‌ ಸೇರಿದಂತೆ 1144 ಹುದ್ದೆ ಖಾಲಿಯಿದ್ದು ಇದರಿಂದ ಬಸ್‌ಗಳ ನಿರ್ವಹಣೆಗೆ ಸಮಸ್ಯೆಯಾಗಿದೆ. ಆದ ಕಾರಣ ಈ ಪೈಕಿ 929 ಹುದ್ದೆಗೆ ನೇರ ನೇಮಕಾತಿ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಒಪ್ಪಿಗೆ ನೀಡಬೇಕು ಎಂದು ಸಂಸ್ಥೆಯ ಅಧ್ಯಕ್ಷ ರಾಜು ಭರಮಗೌಡ (ಕಾಗೆ) ಕೋರಿರುವುದುಂಟು.

₹ 1700 ಕೋಟಿ:

ಸಂಸ್ಥೆಯ ಅಭಿವೃದ್ಧಿಗಾಗಿ ವಿಶೇಷ ಅನುದಾನವನ್ನಾಗಿ ₹ 1700 ಕೋಟಿ ಬಿಡುಗಡೆ ಮಾಡಬೇಕು. ಬಜೆಟ್‌ನಲ್ಲಿ ಈ ವಿಷಯ ಪ್ರಸ್ತಾಪಿಸಬೇಕು ಎಂಬ ಪ್ರಸ್ತಾವನೆಯೂ ಸಂಸ್ಥೆಯಿಂದ ಸರ್ಕಾರಕ್ಕೆ ಹೋಗಿದೆ. ಈ ಹಿಂದೆಯೂ ಹಲವು ಬಾರಿ ವಿಶೇಷ ಅನುದಾನಕ್ಕೆ ಮನವಿ ಸಲ್ಲಿಸಿದರೂ ಸರ್ಕಾರ ಮಾತ್ರ ಸ್ಪಂದಿಸಿಲ್ಲ. ಈ ಸಲವಾದರೂ ಕಣ್ತೆರೆಯುವುದಾ? ಎಂಬುದನ್ನು ಕಾಯ್ದು ನೋಡಬೇಕಷ್ಟೇ!ಶಕ್ತಿ ಯೋಜನೆಯಡಿ ಸಂಸ್ಥೆ ಸರ್ಕಾರ ₹ 1088 ಕೋಟಿ ನೀಡುವ ಜತೆಗೆ ₹ 1700 ಕೋಟಿ ವಿಶೇಷ ಅನುದಾನ ನೀಡುವಂತೆ ಪ್ರಸ್ತಾವನೆ ಕಳುಹಿಸಲಾಗಿದೆ.

ಪ್ರಿಯಾಂಗಾ ಎಂ. ವ್ಯವಸ್ಥಾಪಕ ನಿರ್ದೇಶಕರು, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾಳೆ ಶಿವಾಜಿ ಜಯಂತ್ಯುತ್ಸವ ಪ್ರಯುಕ್ತ ಬೃಹತ್ ಮೆರವಣಿಗೆ
ಫೆ. 28ಕ್ಕೆಶೈಕ್ಷಣಿಕ ಸಮ್ಮೇಳನ: ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಕರೆ