ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಇಲ್ಲಿನ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕ್ರಾಂತಿಕಾರಿ ಹೋರಾಟಗಾರ ಬಿ.ಬಸವಲಿಂಗಪ್ಪನವರ 34ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿ, ಸಮಾಜದಲ್ಲಿ ತರೆದೂರಿದ್ದ ತಲೆ ಮೇಲೆ ಮಲ ಹೊರುವ ಪದ್ಧತಿಯನ್ನು ದೇಶದಲ್ಲೇ ಪ್ರಪ್ರಥಮ ಬಾರಿಗೆ ನಿಷೇಧಿಸಿ, ಸ್ವಚ್ಛ ಭಾರತ ಪಿತಾಮಹರಾಗಿ ಬೂಸಾ ಚಳವಳಿ ಮೂಲಕ ಶೋಷಿತ ಸಮುದಾಯದೊಳಗೆ ಸ್ವಾಭಿಮಾನದ ಅಲೆ ಎಬ್ಬಿಸಿದ ಧೀಮಂತ ನಾಯಕ ಎಂದು ಬಣ್ಣಿಸಿದರು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತೋರಿದ ಮಾರ್ಗದಲ್ಲಿ ಸಾಗಿ, ಶೋಷಿತರ ವಿಮೋಚಕರಾಗಿ ಸೇವೆ ಸಲ್ಲಿಸಿ, ದಮನಿತರ ಧ್ವನಿಯಾಗಿದ್ದ ಮಹಾನ್ ಚೇತನರ ಸಾಧನೆ ಇಂದಿಗೂ ಜನಮಾನಸದಲ್ಲಿ ಹಚ್ಚಳದೆ ಉಳಿದಿದೆ. ಸ್ವಾಭಿಮಾನಿ ನಾಯಕ ಬಿ.ಬಸವಲಿಂಗಪ್ಪನವರ ಆದರ್ಶಗಳನ್ನು ನಾವು ಪಾಲಿಸಿ ಅವರು ತೋರಿದ ಮಾರ್ಗದಲ್ಲಿ ಸಾಗಬೇಕಿದೆ ಎಂದರು.ಕೆಪಿಸಿಸಿ ಸದಸ್ಯ ಚಿದಂಬರ ಮೂರ್ತಿ ಮಾತನಾಡಿ, ಕರ್ನಾಟಕ ರಾಜಕಾರಣದಲ್ಲಿ ನೆನಪಿಡಲೇಬೇಕಾದ ಅಪರೂಪದ ವ್ಯಕ್ತಿತ್ವವೆಂದರೆ ಬಸವಲಿಂಗಪ್ಪನವರು. ಶೋಷಿತ ವರ್ಗಗಳ ಪರ ರಾಜಕಾರಣವನ್ನು ಬದುಕಿನೂದ್ದಕ್ಕೂ ನಡೆಸಿ ನುಡಿದಂತೆಯೇ ನಡೆದ ಜನನಾಯಕರುರಾಗಿದ್ದರು. ಮಲ ಹೊರುವ ಪದ್ಧತಿ ನಿಷೇಧಿಸಿ, ಪೌರ ಕಾರ್ಮಿಕರ ಹಿತ ಕಾಯ್ದರು. ಕನ್ನಡ ಸಾಹಿತ್ಯವನ್ನು ಬೂಸಾ ಎಂದು ಜರಿದು ರಾಜ್ಯದಲ್ಲಿ ಸಂಚಲನ ಮೂಡಿಸಿದ ಬೂಸಾ ಚಳವಳಿಗೆ ನಾಂದಿಹಾಡಿದ ದಿಟ್ಟ ನಾಯಕರು ಎಂದರು.
ರಾಜ್ಯ ಮಂತ್ರಿ ಮಂಡಲದಲ್ಲಿ ಪರಿಸರ, ವಸತಿ ಮತ್ತು ಪೌರಾಡಳಿತ, ಸಮಾಜ ಕಲ್ಯಾಣ ಇಲಾಖೆ ಸಚಿವರಾಗಿ ಉಪ ಗೃಹಮಂತ್ರಿಯಾಗಿ ದಕ್ಷತೆಯಿಂದ ದಲಿತ ನಾಯಕತ್ವಕ್ಕೆ ಬುನಾದಿ ಹಾಕಿದರು ಎಂದರು.ಬೆಂಗಳೂರಿನಲ್ಲಿ ನಾಗಸೇನ ವಿದ್ಯಾ ಸಂಸ್ಥೆ ಸ್ಥಾಪಿಸಿ ದಿನ ದಲಿತರ ಶೈಕ್ಷಣಿಕ ಅಭ್ಯುಧ್ಯಯಕ್ಕೆ ಶ್ರಮಿಸಿದರು. ದಲಿತ ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆ ಇದ್ದರೂ ನೇರ, ನಿಷ್ಟುರ ನುಡಿಯಿಂದ ಅವಕಾಶ ವಂಚಿತರಾದರು ಎಂದು ಬೇಸರ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕರಡಕೆರೆ ಯೋಗೇಶ್, ಚಿಕ್ಕರಸಿನಕೆರೆ ಕೆ.ಶಿವಲಿಂಗಯ್ಯ ಕ್ಯಾತಘಟ್ಟ ಪ್ರಸಾದ್, ಸಬ್ಬನಹಳ್ಳಿ ಗೃಹ ರಕ್ಷಕ ಪುಟ್ಟಸ್ವಾಮಿ, ಸಿದ್ದರಾಜು, ಗುರುಸ್ವಾಮಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.