ಬಡವರ ಮಕ್ಕಳ ಶಿಕ್ಷಣಕ್ಕಾಗಿ ಶ್ರೀಮಂತ ಸರ್ಕಾರಿ ಶಾಲೆ ನಿರ್ಮಾಣ

KannadaprabhaNewsNetwork |  
Published : Jun 23, 2026, 01:15 AM IST
೨೨ಶಿರಾ೧: ಚಿದಾನಂದ್ ಎಂ.ಗೌಡ, ವಿಧಾನಪರಿಷತ್ ಸದಸ್ಯರು | Kannada Prabha

ಸಾರಾಂಶ

ನಾನು ಶಿರಾದಲ್ಲಿ ನಿರ್ಮಿಸಿರುವ ಮಾದರಿಯಲ್ಲಿಯೇ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ನಿರ್ಮಿಸಬೇಕು ಎಂದು ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಹೇಳಿದರು.

ಕನ್ನಡಪ್ರಭ ವಾರ್ತೆ ಶಿರಾ

ಬಡವರ ಮಕ್ಕಳ ಶಿಕ್ಷಣಕ್ಕಾಗಿ ಶ್ರೀಮಂತ ಸರ್ಕಾರಿ ಶಾಲೆ ಎಂಬ ಧ್ಯೇಯೋದ್ಧೇಶದೊಂದಿಗೆ ಸರ್ಕಾರಿ ಶಾಲೆಗಳನ್ನು ವಿನೂತನವಾಗಿ ಎಲ್ಲಾ ಸೌಲಭ್ಯಗಳನ್ನೊಳಗೊಂಡು ನಿರ್ಮಿಸುತ್ತಿದ್ದೇನೆ. ಇಂತಹ ದೊಡ್ಡಮಟ್ಟದ ಕಾರ್ಯಕ್ಕೆ ಸರ್ಕಾರವು ಮುಂದಾಗಬೇಕು. ನಾನು ಶಿರಾದಲ್ಲಿ ನಿರ್ಮಿಸಿರುವ ಮಾದರಿಯಲ್ಲಿಯೇ ರಾಜ್ಯಾದ್ಯಂತ ಸರ್ಕಾರಿ ಶಾಲೆಗಳನ್ನು ನಿರ್ಮಿಸಬೇಕು ಎಂದು ವಿಧಾನಪರಿಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಹೇಳಿದರು.

ಅವರು ಈ ಬಗ್ಗೆ ನಗರದ ಸೇವಾ ಸದನದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ ರಾಜ್ಯದಲ್ಲಿಯೇ ಶಿರಾ ತಾಲೂಕಿನಲ್ಲಿ ಸರ್ಕಾರಿ ಕಟ್ಟಡಗಳನ್ನು ನಿರ್ಮಿಸುವಲ್ಲಿ ಕ್ರಾಂತಿಕಾರಿ ಹೆಜ್ಜೆಯನ್ನಿಟ್ಟು ನನ್ನ ೬ ವರ್ಷಗಳ ಅಧಿಕಾರವಧಿಯಲ್ಲಿ ೬ ಹೈಟೆಕ್ ಸರ್ಕಾರಿ ಶಾಲೆಗಳನ್ನು ನಿರ್ಮಿಸಿದ್ದೇನೆ. ಇದೊಂದು ಮಾದರಿ ಕಾರ್ಯ. ಸರ್ಕಾರ ಶಾಲೆಗಳಿಗೆ ಕೇವಲ ಒಂದೋ ಎರಡೋ ಕೊಠಡಿಗಳನ್ನು ನಿರ್ಮಿಸಿದರೆ ಸಾಲದು. ಈ ಹಿಂದೆ ನಿರ್ಮಾಣವಾಗಿರುವ ಎಲ್ಲಾ ಸರ್ಕಾರಿ ಶಾಲೆಗಳೂ ಸಹ ಶಿಥಿಲಾವಸ್ಥೆಯಲ್ಲಿವೆ. ಅಂತಹ ಕಡೆ ನೂತನವಾಗಿ ಶಾಲೆಗೆ ಅಗತ್ಯವಾಗಿ ಬೇಕಿರುವ ಎಲ್ಲಾ ಕೊಠಡಿಗಳನ್ನು ನಿರ್ಮಿಸಬೇಕು. ವಿದ್ಯಾರ್ಥಿಗಳಿಗೆ ಪಾಠ ಪ್ರವಚನಕ್ಕೆ, ಗ್ರಂಥಾಲಯಕ್ಕೆ, ಹೈಟೆಕ್ ಶೌಚಾಲಯ ಹೀಗೆ ಯಾವುದಕ್ಕೂ ಕೊರತೆ ಇಲ್ಲದಂತೆ ಶಾಲೆಗಳನ್ನು ನಿರ್ಮಿಸಿದರೆ ವಿದ್ಯಾರ್ಥಿಗಳ ದಾಖಲಾತಿಯೂ ಹೆಚ್ಚುತ್ತದೆ. ಆಗ ಯಾವ ಪೋಷಕರೂ ಸಹ ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ದಾಖಲು ಮಾಡುವುದಿಲ್ಲ. ಒಂದು ಮೊರಾರ್ಜಿ ವಸತಿ ಶಾಲೆ ನಿರ್ಮಾಣಕ್ಕೆ ಸುಮಾರು ೨೫ ಕೋಟಿ ರು. ಅನುದಾನ ಬೇಕು. ಇಲ್ಲಿ ಓದುವ ವಿದ್ಯಾರ್ಥಿಗಳು ಕೇವಲ ೨೦೦ ರಿಂದ ೩೦೦ ಮಂದಿ ಮಾತ್ರ. ಆದರೆ ಅದೇ ಹಣದಲ್ಲಿ ಒಂದು ಸುಸಜ್ಜಿತವಾದ ಸರ್ಕಾರಿ ಶಾಲೆ ನಿರ್ಮಾಣವಾದರೆ ೧೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಾರೆ. ಈ ನಿಟ್ಟಿನಲ್ಲಿ ಸರ್ಕಾರಿ ಈ ಬಗ್ಗೆ ವಿಶೇಷ ಕಾಳಜಿ ವಹಿಸಿ ಹೊಸ ಶಾಲೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು ಎಂದರು.

ಶಿರಾ ತಾಲೂಕು ತಾವರೆಕೆರೆ ಗ್ರಾಮದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಆವರಣದಲ್ಲಿ ನೂತನವಾಗಿ ವಿಧಾನಪರಿಷತ್ ಸ್ಥಳೀಯ ಪ್ರದೇಶಾಭಿವೃದ್ಧಿ ಅನುದಾನದ ಅಡಿಯಲ್ಲಿ ಅಂದಾಜು ೧ ಕೋಟಿ ರುಪಾಯಿಗಳ ವೆಚ್ಚದಲ್ಲಿ ನಿರ್ಮಿಸಿರುವ ಹೈಟೆಕ್ ಶಾಲಾ ಕಟ್ಟಡದ ಉದ್ಘಾಟನಾ ಕಾರ್ಯಕ್ರಮ ೨೪ ರ ಬುಧವಾರ ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಶಾಸಕ ಟಿ.ಸಿ.ಜಯಚಂದ್ರ, ಸಂಸದ ಗೋವಿಂದ ಕಾರಜೋಳ ಸೇರಿದಂತೆ ಹಲವು ಗಣ್ಯರು ಆಗಮಿಸಲಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಶಾಲೆಯನ್ನು ವೀಕ್ಷಿಸಿ ತಮ್ಮ ಮಕ್ಕಳನ್ನು ದಾಖಲು ಮಾಡಿ ಎಂದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಯೋಧರ ಕಲ್ಯಾಣಕ್ಕೆ ನಿವೃತ್ತ ಶಿಕ್ಷಕಿ ₹10 ಲಕ್ಷ ದೇಣಿಗೆ!
ವಿದ್ಯುತ್ ಖಾಸಗೀಕರಣ ವಿರೋಧಿಸಿ ಬೆಸ್ಕಾಂಗೆ ರೈತರ ಮುತ್ತಿಗೆ