ರಿಕ್ಕಿ ರೈ ಶೂಟೌಟ್ ಪ್ರಕರಣ: 5 ತನಿಖಾ ತಂಡ ರಚನೆ

KannadaprabhaNewsNetwork |  
Published : Apr 20, 2025, 01:51 AM IST

ಸಾರಾಂಶ

ರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಐದು ತನಿಖಾ ತಂಡಗಳನ್ನು ರಚಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.

ರಾಮನಗರ: ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಮೇಲಿನ ಗುಂಡಿನ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸ್ ಇಲಾಖೆ ಐದು ತನಿಖಾ ತಂಡಗಳನ್ನು ರಚಿಸಿದ್ದು, ತನಿಖೆಯನ್ನು ಚುರುಕುಗೊಳಿಸಿದೆ.1ನೇ ತಂಡ ಶಾರ್ಪ್ ಶೂಟರ್ಸ್ ಬಂದಿದ್ದ ರಸ್ತೆಯ ಸಿಸಿಟಿವಿ ಪರಿಶೀಲನೆಯಲ್ಲಿದ್ದರೆ, 2ನೇ ತಂಡ ಬಿಡದಿ ರಿಕ್ಕಿ ರೈ ಫಾರ್ಮ್ ಹೌಸ್ ಬಳಿ ಸಿಡಿಆರ್ ಸಂಗ್ರಹದಲ್ಲಿ ತೊಡಗಿದೆ. 3ನೇ ತಂಡ ರಿಕ್ಕಿ ರೈ ಮೇಲೆ ಹಳೇ ದ್ವೇಷ ಇರುವವರನ್ನು ಪತ್ತೆ ಮಾಡುತ್ತಿದ್ದರೆ, 4ನೇ ತಂಡ ರಿಕ್ಕಿ ರೈ ಕುಟುಂಬಸ್ಥರ ಬಳಿ ಮಾಹಿತಿ ಕಲೆ ಹಾಕುತ್ತಿದೆ. ಇನ್ನು 5ನೇ ತಂಡ ಸ್ಥಳದಲ್ಲಿ ಬೀಡು ಬಿಟ್ಟು ಮಾನಿಟರಿಂಗ್ ಮಾಡುತ್ತಿದೆ.

ಎಸ್ಪಿ ಶ್ರೀನಿವಾಸ್ ಗೌಡ ನಡೆಸಿದ ಡಿವೈಎಸ್ಪಿ ಹಾಗೂ ಅಧಿಕಾರಿಗಳ ಸಭೆಯಲ್ಲಿ ಎಫ್‌ಎಸ್‌ಎಲ್ ತಂಡ ಕೂಡ ಭಾಗಿಯಾಗಿತ್ತು. ಘಟನೆಗೆ ಸಂಬಂಧಿಸಿದಂತೆ ಸಂಗ್ರಹಿಸಿರುವ ಎವಿಡೆನ್ಸ್‌ಗಳ ಬಗ್ಗೆ ಎಫ್‌ಎಸ್‌ಎಲ್ ಟೀಮ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದೆ.

ಭದ್ರಕೋಟೆಯಂತೆ ಇರುವ ಮುತ್ತಪ್ಪ ರೈ ಅವರ ಮನೆಯಿಂದ ಹೊರಬರುತ್ತಿದ್ದಂತೆ ರಸ್ತೆಯಲ್ಲಿ ಕಾರಿನ ಮೇಲೆ ಅಟ್ಯಾಕ್ ನಡೆದಿರುವುದು ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ. ಈ ಫೈರಿಂಗ್ ಹಿಂದೆ ಭೂಗತ ಲೋಕದ ಕೈವಾಡ ಇರುವ ಶಂಕೆ ಕೂಡ ವ್ಯಕ್ತವಾಗಿದೆ. ತಂದೆಯ ಮೇಲಿನ ದ್ವೇಷ, ರಿಕ್ಕಿಯ ವೈಯಕ್ತಿಕ ದ್ವೇಷಕ್ಕೆ ಫೈರಿಂಗ್ ನಡೆದಿರುವ ಅನುಮಾನಗಳು ಹುಟ್ಟಿಕೊಂಡಿವೆ.

ಸದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ಆಯಾಮಗಳಲ್ಲಿ ತನಿಖೆ ಚುರುಕುಗೊಳಿಸಿರುವ ಪೊಲೀಸರು, ಮನೆ ಸಿಬ್ಬಂದಿ, ಆಪ್ತರಿಂದ ಹೇಳಿಕೆ ದಾಖಲಿಸಿಕೊಳ್ಳುತ್ತಿದ್ದಾರೆ. ರಿಕ್ಕಿ ರೈ ವಿದೇಶದಿಂದ ಬಂದಿದ್ದು ಯಾವಾಗ, ವ್ಯವಹಾರಗಳೇನು? ಇತ್ತೀಚೆಗೆ ಯಾವುದಾದರೂ ವ್ಯವಹಾರದಲ್ಲಿ ಗಲಾಟೆ ಆಗಿತ್ತಾ? ರಾಮನಗರ ತಾಲೂಕು ಬಿಡದಿ ಹೋಬಳಿ ಕರಿಯಪ್ಪನದೊಡ್ಡಿಯಲ್ಲಿರುವ ಮನೆಯಲ್ಲಿ ಯಾರ್ಯಾರು ಇದ್ದಾರೆ? ರಿಕ್ಕಿ ಮನೆಗೆ ಹೊಸದಾಗಿ ಯಾರಾದರು ಕೆಲಸಕ್ಕೆ ಸೇರಿಕೊಂಡಿದ್ದಾರಾ? ಹಳೇ ದ್ವೇಷ, ಅಸ್ತಿ ವಿವಾದ, ವ್ಯವಹಾರ ಕುರಿತು ಪೊಲೀಸರು ತನಿಖೆ ಶುರು ಮಾಡಿದ್ದಾರೆ.

ಮಾಜಿ ಡಾನ್ ಮುತ್ತಪ್ಪ ರೈ ಸಾವಿನ ಬಳಿಕ ಆಸ್ತಿ ವಿಚಾರ ವ್ಯಾಜ್ಯವಿತ್ತು. ಮೊದಲ ಪತ್ನಿ ಮಕ್ಕಳು ಹಾಗೂ 2ನೇ ಪತ್ನಿ ನಡುವೆ ಆಸ್ತಿ ವಿಚಾರಕ್ಕೆ ವ್ಯಾಜ್ಯವಿತ್ತು. ಹೀಗಾಗಿ ಆಸ್ತಿ ಭಾಗದ ವಿಚಾರವಾಗಿ ಕುಟುಂಬ ಕೋರ್ಟ್ ‌ಮೆಟ್ಟಿಲೇರಿತ್ತು. ಮುತ್ತಪ್ಪ ರೈ ಸಾವಿಗೂ ಮುನ್ನ, ಇಬ್ಬರು ಮಕ್ಕಳು, ಸಹೋದರನ ಮಗ, 2ನೇ ಪತ್ನಿ, ಮನೆ ಕೆಲಸಗಾರರು ಸೇರಿ ಎಲ್ಲರಿಗೂ ಆಸ್ತಿ ಭಾಗ ಮಾಡಿ ವಿಲ್​ ಬರೆಸಲಾಗಿತ್ತು. ಸದ್ಯ ಎಲ್ಲಾ ಆಯಾಮಗಳಲ್ಲೂ ಬಿಡದಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಈಗಾಗಲೇ ಪೊಲೀಸರು ಆಸ್ಪತ್ರೆಯಲ್ಲಿಯೇ ರಿಕ್ಕಿ ರೈ ಅವರಿಂದ ಘಟನೆ ಸಂಬಂಧ ಹೇಳಿಕೆ ಪಡೆದಿದ್ದಾರೆ. ಅಲ್ಲದೆ, ಚಾಲಕ ಬಸವರಾಜುನನ್ನು ಸ್ಥಳಕ್ಕೆ ಕರೆತಂದು ಮಹಜರ್ ಮಾಡಿದ್ದು, ಬಸವರಾಜು ಕೈಯಲ್ಲಿ ಕಾರು ಚಾಲನೆ ಮಾಡಿಸಿ ಘಟನೆ ಮರು ಸೃಷ್ಟಿಸಿ ಮಾಹಿತಿ ಕಲೆ ಹಾಕಿದರು.

ಪೊಲೀಸರು ಬಿಡದಿ ಠಾಣೆಗೆ ಕರೆತಂದು ರಿಕ್ಕಿ ರೈ ಸ್ನೇಹಿತ ಫರನ್ ಅಲಿ ಎಂಬುವರನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್ ಗೌಡ ವಿಚಾರಣೆ ನಡೆಸಿದ್ದಾರೆ. ಅಲ್ಲದೆ, ಆತನ ಮೊಬೈಲ್ ಕೂಡ ಪರಿಶೀಲನೆ ಮಾಡಿದ್ದಾರೆ. ಈತ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆಯುತ್ತಿರುವಾಗ ರಿಕ್ಕಿ ರೈ ಜೊತೆಯಲ್ಲಿ ಇದ್ದನು.

ಬಾಕ್ಸ್‌...........

ಮುತ್ತಪ್ಪ ರೈ ಮೇಲಿನ ದ್ವೇಷ ರಿಕ್ಕಿ ರೈ ಮೇಲಿರಬಹುದು: ಪ್ರಕಾಶ್ ರೈ

ರಾಮನಗರ:

ಮುತ್ತಪ್ಪ ರೈ ಮೇಲಿನ ದ್ವೇಷ ಮಗನ ಮೇಲೂ ಇರುವ ಸಾಧ್ಯತೆ ಇದೆ. ಯಾರೋ ಟಾರ್ಗೆಟ್ ಮಾಡಿ ರಿಕ್ಕಿ ರೈ ಹತ್ಯೆಗೆ ಸ್ಕೆಚ್ ಹಾಕಿದ್ದಾರೆ ಎಂದು ಮುತ್ತಪ್ಪ ರೈ ಸಂಬಂಧಿ ಪ್ರಕಾಶ್ ರೈ ಶಂಕೆ ವ್ಯಕ್ತಪಡಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಕ್ಕಿ ರೈ ಮೇಲೆ ಗುಂಡಿ ದಾಳಿ ನಡೆದಿರುವುದು ವಿಚಾರ ರಾತ್ರಿ ನನಗೆ ಗೊತ್ತಾಯಿತು. ಮುತ್ತಪ್ಪ ರೈ ಕಾಲದಿಂದಲೂ ಅವರ ಕುಟುಂಬದ ಮೇಲೆ ಸಾಕಷ್ಟು ಜನರಿಗೆ ದ್ವೇಷ ಇದೆ. ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಒಂದಷ್ಟು ಇಶ್ಯೂ ಇತ್ತು. ರಿಕ್ಕಿ ಹೆಚ್ಚಿನ ಸಮಯ ಬಿಡದಿಯಲ್ಲಿ ಕಳೆಯುತ್ತಿದ್ದರು. ಬೆಂಗಳೂರಿನ ಸದಾಶಿವ ನಗರದಲ್ಲೂ ಮನೆ ಇದೆ. ಬಿಡದಿ ಮನೆಯಲ್ಲಿ ಇಂಟೀರಿಯರ್ ಕೆಲಸ ನಡೆಯುತ್ತಿತ್ತು. ಅದನ್ನೂ ನೋಡಲು ರಿಕ್ಕಿ ಬಂದಿದ್ದರು. ರಾತ್ರಿ ಇಲ್ಲಿಂದ ಹೋಗುವಾಗ ಯಾರೋ ಅಟ್ಯಾಕ್ ಮಾಡಿದ್ದಾರೆ ಎಂದು ತಿಳಿಸಿದರು.

ಮುತ್ತಪ್ಪ ರೈ ಇದ್ದಾಗಲೇ ರಿಕ್ಕಿ ಮೊದಲ ಪತ್ನಿಯಿಂದ ಡೈವರ್ಸ್ ಆಗಿತ್ತು. 2ನೇ ಪತ್ನಿ ವಿದೇಶದವರು, ಅವರು ಮಗು ಜತೆ ವಿದೇಶದಲ್ಲಿದ್ದಾರೆ. ರಿಕ್ಕಿ ರೈ ಕೂಡ ಹೆಚ್ಚಿನ ಸಮಯ ವಿದೇಶದಲ್ಲೇ ಕಳೆಯುತ್ತಿದ್ದರು ಎಂದು ಹೇಳಿದರು.

ಬಾಕ್ಸ್‌...................

ಮೊಬೈಲ್ ಮತ್ತು ಬುಲೆಟ್ ಶೆಲ್ ಪತ್ತೆ

ರಾಮನಗರ: ರಿಕ್ಕಿ ರೈ ಶೂಟೌಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನಾ ಸ್ಥಳದಲ್ಲೇ ಸೀನ್ ಆಫ್ ಕ್ರೈಂ ಆಫೀಸರ್ಸ್(ಸೋಕೋ) ಹಾಗೂ ಎಫ್ಎಸ್ಎಲ್ ತಂಡ ಪರಿಶೀಲನೆ ನಡೆಸಿದೆ. ಈ ವೇಳೆ ಫೈರಿಂಗ್ ಸ್ಥಳದಲ್ಲಿ ಮೊಬೈಲ್, ಬ್ಯಾರೆಲ್ ಗನ್ ನ ಬುಲೆಟ್ ಶೆಲ್ ಸೇರಿದಂತೆ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ. ಇನ್ನು ಪೊಲೀಸ್ ಶ್ವಾನ ಫೈರಿಂಗ್ ಆಗಿರುವ ಜಾಗದಲ್ಲಿ ಪರಿಶೀಲನೆ ನಡೆಸಿತು. ಕೌಪೌಂಡ್ ನಿಂದ ಹೊರ ಬಂದ ಶ್ವಾನ ದೊಡ್ಡ ಮುದುವಾಡಿ ಕಡೆ ಸುಮಾರು 2 ಕಿ.ಮೀ ದೂರದ ಹೆಗ್ಗಡಗೆರೆವರೆಗೆ ಓಡಿದೆ. ಬಹುಶಃ ದಾಳಿಕೋರರು ವಾಹನ ನಿಲ್ಲಿಸಿ ಬಂದಿರುವ ಶಂಕೆ ವ್ಯಕ್ತವಾಗಿದೆ.

ಕೋಟ್ ...............

ರಿಕ್ಕಿ ರೈ ಹೇಳಿಕೆ ಪಡೆದು ತನಿಖೆ ಮುಂದುವರೆಸುತ್ತೇವೆ‌. ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳನ್ನು ಪರಿಶೀಲಿಸುತ್ತಿದ್ದು, ಯಾವ ಗನ್‌ನಿಂದ ಫೈರಿಂಗ್ ಆಗಿದೆ ಅಂತ ತನಿಖೆ ಮಾಡುತ್ತಿದ್ದೇವೆ‌. ರಿಕ್ಕಿ ರೈ ಹೆಚ್ಚಾಗಿ ಹೊರದೇಶದಲ್ಲಿ ಇರುತ್ತಾರೆ. ಯಾವುದೋ ಕೋರ್ಟ್ ಕೇಸ್ ಅಟೆಂಡ್ ಮಾಡಲು ಬಂದಿದ್ದರು. ನಿನ್ನೆ ಬಿಡದಿ ನಿವಾಸಕ್ಕೆ ಬಂದು ವಾಪಸ್ ಹೋಗುವಾಗ ಅಟ್ಯಾಕ್ ಆಗಿದೆ. ರಿಕ್ಕಿ ರೈ ಜೊತೆ ಡ್ರೈವರ್, ಗನ್ ಮ್ಯಾನ್ ಇದ್ದರು. ಸಿವಿಲ್ ಡಿಸ್ಬೂಟ್ ರಿಲೇಟೆಡ್ ಕೆಲವರ ಮೇಲೆ ಅನುಮಾನ ವ್ಯಕ್ತಪಡಿಸಿ ಚಾಲಕ ದೂರು ನೀಡಿದ್ದಾನೆ. ಭೂಗತ ಲೋಕದ ನಂಟಿನ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಘಟನೆ ಸಂಬಂಧ ಯಾರನ್ನೂ ವಶಕ್ಕೆ ಪಡೆದಿಲ್ಲ. ಸದ್ಯಕ್ಕೆ ಐದು ತಂಡ ರಚಿಸಿ, ಆರೋಪಿ ಪತ್ತೆಗೆ ತನಿಖೆ ಮುಂದುವರಿಸಿದ್ದೇವೆ.

- ಶ್ರೀನಿವಾಸ್ ಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ರಾಮನಗರ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವಾಗ್ದೇವಿ ಟವರ್ಸ್‌ಗೆ ಭೂಮಿ ಪೂಜೆ
ಆತ್ಮನಿರ್ಭರ ಭಾರತಕ್ಕೆ ಸ್ವದೇಶಿ ವಸ್ತು ಬಳಕೆ ಅಗತ್ಯ: ನಾರಾಯಣಸಾ ಭಾಂಡಗೆ