ಕನ್ನಡಪ್ರಭ ವಾರ್ತೆ ರಾಮನಗರ
ಭೂಗತ ಜಗತ್ತಿನ ಮಾಜಿ ಡಾನ್ ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಶೂಟ್‌ಔಟ್ ಪ್ರಕರಣ ನಡೆದ ಐದು ದಿನಗಳಾಗಿದ್ದು, ಪ್ರಕರಣ ಬೇಧಿಸುವುದು ಪೊಲೀಸರಿಗೆ ಕಗ್ಗಂಟಾಗಿ ಪರಿಣಮಿಸಿದೆ. ಸದ್ಯಕ್ಕೆ ಮುತ್ತಪ್ಪ ರೈ ಮಾಜಿ ಗನ್ ಮ್ಯಾನ್ ಮನ್ನಪ್ಪ ವಿಠ್ಠಲ್ ಮೇಲೆ ಅನುಮಾನ ಬಲವಾಗಿದ್ದು, ಆಸ್ಪತ್ರೆಯಲ್ಲಿರುವ ವಿಠ್ಠಲ್ ಅಲ್ಲಿಂದ ಹೊರ ಬರುತ್ತಿದ್ದಂತೆ ವಶಕ್ಕೆ ಪಡೆದು ವಿಚಾರಣೆ ನಡೆಸಲು ಪೊಲಿಸರು ಸಿದ್ಧತೆ ನಡೆಸಿದ್ದಾರೆ.ಈಗಾಗಲೇ ಮನ್ನಪ್ಪ ವಿಠ್ಠಲ್ ನನ್ನು ಪೊಲೀಸರು ಒಂದು ಸುತ್ತು ವಿಚಾರಣೆ ನಡೆಸಿದ್ದು, ಈ ಸಂದರ್ಭದಲ್ಲಿ ಆತನಿಗೆ ಎದೆನೋವು ಕಾಣಿಸಿಕೊಂಡ ಪರಿಣಾಮ ಆತನನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುರುವಾರ ಆತ ಆಸ್ಪತ್ರೆಯಿಂದ ಹೊರಗೆ ಬರಲಿದ್ದು, ಆಸ್ಪತ್ರೆಯಿಂದ ಹೊರಗೆ ಬರುತ್ತಿದ್ದಂತೆ ವಿಚಾರಣೆ ನಡೆಸಲಿದ್ದಾರೆ ಎನ್ನಲಾಗಿದೆ.
ಅನುಮಾನ ಯಾಕೆ?:ಪೊಲೀಸರಿಗೆ ಶೂಟ್‌ಔಟ್ ನಡೆದ ಸ್ಥಳದಲ್ಲಿ ಸಿಕ್ಕಿರುವ ಬುಲೆಟ್ ವಿಠ್ಠಲ್ ಬಳಿ ಇದ್ದ ಗನ್‌ನ ಬುಲೆಟ್ ಎಂದು ಪೊಲೀಸರು ಶಂಕಿಸಿದ್ದು, ಈತನ ಗನ್ ಅನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟ ತೀರ್ಮಾನ ನೀಡುವಂತೆ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಗನ್ ಅನ್ನು ಕಳುಹಿಸಿದ್ದು, ತಜ್ಞರ ವರದಿಗಾಗಿ ಕಾಯುತ್ತಿದ್ದಾರೆ. ಇನ್ನು ಮುತ್ತಪ್ಪ ರೈ ಬಳಿ ಗನ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ಈತ ಕೆಲಕಾಲ ರಿಕ್ಕಿರೈಗೂ ಗನ್‌ಮ್ಯಾನ್ ಆಗಿದ್ದು, ಆರೋಗ್ಯ ಸರಿ ಇಲ್ಲದ ಕಾರಣ ಗನ್ ಮ್ಯಾನ್ ಕೆಲಸ ಬಿಟ್ಟು ಮನೆಯಲ್ಲೇ ಸೆಕ್ಯುರಿಟಿ ಕೆಲಸ ಮಾಡುತ್ತಿದ್ದ. ಮುತ್ತಪ್ಪ ರೈ ಸಾಯುವ ಮುನ್ನ ಈತನಿಗೆ ನಿವೇಶನ ನೀಡುವುದಾಗಿ ಹೇಳಿದ್ದರು. ಆದರೆ, ರಿಕ್ಕಿರೈ ಸೈಟ್ ಕೊಡಲು ನಿರಾಕರಿಸಿದ್ದ ಎಂದು ತಿಳಿದು ಬಂದಿದೆ. ಈ ಕಾರಣಕ್ಕೆ ವಿಠ್ಠಲ್ ಗುಂಡು ಹಾರಿಸಿದನಾ ಎಂಬ ಸಂದೇಹ ಮೂಡಿದೆ. ಇನ್ನು ಶೂಟ್‌ಔಟ್ ನಡೆದಿದ್ದ ಏ.೧೯ ರಂದು ವಿಠಲ್ ಬಿಡದಿಯ ರಿಕ್ಕಿರೈ ನಿವಾಸದಿಂದ ಹಿಂಬಾಗಿಲಿನಿಂದ ಹೊರಗೆ ಬಂದು ಮತ್ತೆ ಅದೇ ಬಾಗಿಲಿನಿಂದ ಒಳಗೆ ಹೋಗಿರುವ ಸಿಸಿಟಿವಿ ದೃಶ್ಯಾವಳಿ ಸೆರೆಯಾಗಿದ್ದು, ಇದು ಸಹ ಪೊಲೀಸರ ಅನುಮಾನ ಹೆಚ್ಚಳಕ್ಕೆ ಕಾರಣವಾಗಿದೆ.
ಪ್ರಕರಣದ ಮೂರನೇ ಆರೋಪಿ ವಿಚಾರಣೆ:ರಿಕ್ಕಿರೈ ಮೇಲಿನ ಗುಂಡಿ ದಾಳಿ ಪ್ರಕರಣದ ಮೂರನೇ ಆರೋಪಿ ನಿತೇಶ್ ಶೆಟ್ಟಿ ಬುಧವಾರ ತಮ್ಮ ವಕೀಲರ ಜೊತೆ ಬಿಡದಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾದರು. ಬಿಡದಿ ಠಾಣೆಯಲ್ಲಿ ನಿತೀಶ್‌ಶೆಟ್ಟಿಯನ್ನು ಎಎಸ್ಪಿ ಸುರೇಶ್ ವಿಚಾರಣೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಪೊಲೀಸರು ವಿವರಣೆ ಪಡೆದಿದ್ದಾರೆ.
ಇದುವರೆಗೆ ಯಾರನ್ನೂ ಬಂಧಿಸಿಲ್ಲ: ಎಸ್ಪಿರಾಮನಗರ: ರಿಕ್ಕಿ ರೈ ಮೇಲಿನ ಶೂಟ್‌ಔಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಯಾರನ್ನೂ ಬಂಧಿಸಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಿವಾಸ್‌ಗೌಡ ತಿಳಿಸಿದ್ದಾರೆ.
ದೂರುದಾರರು ಸಂದೇಹ ವ್ಯಕ್ತಪಡಿಸಿರುವ ೩ನೇ ಆರೋಪಿಯನ್ನು ವಿಚಾರಣೆ ನಡೆಸಲಾಗುತ್ತಿದೆ. ಇದರೊಂದಿಗೆ ಎಫ್‌ಐಆರ್‌ನಲ್ಲಿ ಇಲ್ಲದವರ ಹೇಳಿಕೆಯನ್ನೂ ಪಡೆಯಲಾಗುತ್ತಿದೆ. ಕೆಲವು ವರದಿಗಳು ಬರಬೇಕಿದ್ದು, ಈ ವರದಿಗಳು ಬಂದ ನಂತರ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.ಸಂಶಯಾಸ್ಪದ ವ್ಯಕ್ತಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಹೆಚ್ಚಿನ ತನಿಖೆಗೆ ಒಳಪಡಿಸಲು ಸಾಧ್ಯವಾಗಿಲ್ಲ. ಸದ್ಯಕ್ಕೆ ಸಂಶಯಾಸ್ಪದ ವ್ಯಕ್ತಿ ಮತ್ತು ವಿಕ್ಟಿಮ್ ಇಬ್ಬರೂ ಆಸ್ಪತ್ರೆಯಲ್ಲಿದ್ದಾರೆ. ಇದು ಫೈರಿಂಗ್ ಪ್ರಕರಣವಾಗಿರುವ ಕಾರಣ ಹಲವು ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಎಲ್ಲರ ವಿಚಾರಣೆ ಮುಗಿದ ಬಳಿಕ ಅಂತಿಮ ನಿರ್ಧಾರ ಮಾಡುತ್ತೇವೆ ಎಂದು ತಿಳಿಸಿದ್ದಾರೆ.