ಪೆಟ್ರೋಲ್‌ಗೆ ಮುಗಿ ಬಿದ್ದ ಸವಾರರು

KannadaprabhaNewsNetwork |  
Published : Mar 25, 2026, 02:00 AM IST
ಸಾಧನಕೇರಿಯ ಎಚ್‌ಪಿ ಬಂಕ್‌ನಲ್ಲಿ ಪೆಟ್ರೋಲ್‌ಗಾಗಿ ಸರದಿ ಸಾಲಿನಲ್ಲಿ ನಿಂತಿರುವ ಬೈಕ್‌ ಸವಾರರು. | Kannada Prabha

ಸಾರಾಂಶ

ಕೊಲ್ಲಿ ಯುದ್ಧದಿಂದಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಆಗಲಿದೆ, ಬೇಕಾದಷ್ಟು ಪೆಟ್ರೋಲ್‌, ಡೀಸೆಲ್‌ ಸಿಗುವುದು ಕಷ್ಟ ಎಂಬ ಸುದ್ದಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಬೈಕ್‌, ಕಾರು ಹಾಗೂ ವಾಣಿಜ್ಯ ಬಳಕೆಯ ವಾಹನಗಳ ಮಾಲೀಕರು ನಗರದ ಎಲ್ಲ ಪೆಟ್ರೋಲ್‌ ಬಂಕ್‌ಗಳ ಎದುರು ಸಾಲು ಹಚ್ಚಿ ಪೆಟ್ರೋಲ್‌ ಮತ್ತು ಡೀಸೆಲ್‌ ತುಂಬಿಸಿಕೊಳ್ಳುತ್ತಿದ್ದಾರೆ.

ಧಾರವಾಡ:

ಅಮೆರಿಕ-ಇರಾನ್‌ ಮಧ್ಯೆ ನಡೆದಿರುವ ಯುದ್ಧದಿಂದಾಗಿ ಸಿಲಿಂಡರ್‌ ಸಮಸ್ಯೆ ಶುರುವಾಗಿ, ಇನ್ನೇನು ಸರಿ ಹೋಯ್ತು ಎನ್ನುವಷ್ಟರಲ್ಲಿ ಧಾರವಾಡದಲ್ಲಿ ತೈಲಕ್ಕಾಗಿ ಸವಾರರು ಬಂಕ್‌ಗಳಿಗೆ ಮುಗಿ ಬಿದ್ದಿದ್ದಾರೆ.

ಯುದ್ಧದಿಂದಾಗಿ ಪೆಟ್ರೋಲ್‌, ಡೀಸೆಲ್‌ ಬೆಲೆಯಲ್ಲಿ ಏರಿಕೆ ಆಗಲಿದೆ, ಬೇಕಾದಷ್ಟು ಪೆಟ್ರೋಲ್‌, ಡೀಸೆಲ್‌ ಸಿಗುವುದು ಕಷ್ಟ ಎಂಬ ಸುದ್ದಿ ಹರಡಿದ್ದು, ಈ ಹಿನ್ನೆಲೆಯಲ್ಲಿ ಬೈಕ್‌, ಕಾರು ಹಾಗೂ ವಾಣಿಜ್ಯ ಬಳಕೆಯ ವಾಹನಗಳ ಮಾಲೀಕರು ನಗರದ ಎಲ್ಲ ಪೆಟ್ರೋಲ್‌ ಬಂಕ್‌ಗಳ ಎದುರು ಸಾಲು ಹಚ್ಚಿ ಪೆಟ್ರೋಲ್‌ ಮತ್ತು ಡೀಸೆಲ್‌ ತುಂಬಿಸಿಕೊಳ್ಳುತ್ತಿದ್ದಾರೆ.

ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ ಹಾಗೂ ಅಲಭ್ಯ ಎಂದು ಮಂಗಳವಾರ ಮಧ್ಯಾಹ್ನದಿಂದ ಇಂತಹದೊಂದು ಸುದ್ದಿ ಹಬ್ಬುತ್ತಿದ್ದಂತೆ, ಇಲ್ಲಿರುವ ಭಾರತ ಪೆಟ್ರೋಲಿಯಂ, ಹಿಂದುಸ್ತಾನ, ರಿಲಯನ್ಸ್‌ ಸೇರಿದಂತೆ ಹಲವು ಪೆಟ್ರೋಲ್‌ ಬಂಕ್‌ಗಳಲ್ಲಿ ಸರದಿ ಸಾಲಿನಲ್ಲಿ ನಿಂತು ಜನರು ಪೆಟ್ರೋಲ್ ಹಾಕಿಸಿಕೊಂಡರು. ಬುಧವಾರ ಊರಿಗೆ ಹೋಗುವುದಿದೆ. ಜತೆಗೆ ಬೆಲೆ ಏರಿಕೆ ಆಗಲಿದೆ ಎನ್ನಲಾಗುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಇವತ್ತೇ ಕಾರಿನ ಡೀಸೆಲ್‌ ಟ್ಯಾಂಕ್‌ ಪೂರ್ಣಗೊಳಿಸುತ್ತಿದ್ದೇನೆ ಎಂದು ಸಾಧನಕೇರಿ ನಿವಾಸಿಯೊಬ್ಬರು ಹೇಳಿದರು. ಇಂಧನ ಕೊರತೆ ಇಲ್ಲ, ಸುಳ್ಳು ಸುದ್ದಿ ಹರಡಿಸಿದರೆ ಕಠಿಣ ಕ್ರಮ ಜಿಲ್ಲೆಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಅಭಾವ ಉಂಟಾಗಿದೆ ಎಂಬ ವದಂತಿಗಳು ಹರಡುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್ ಸಾರ್ವಜನಿಕರಿಗೆ ಸ್ಪಷ್ಟನೆ ನೀಡಿದ್ದು, ಜಿಲ್ಲೆಯಲ್ಲಿ ಸದ್ಯಕ್ಕೆ ಯಾವುದೇ ಇಂಧನ ಕೊರತೆಯಿಲ್ಲ ಮತ್ತು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ತಿಳಿಸಿದ್ದಾರೆ.ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ತೈಲ ಅಭಾವ ಸುಳ್ಳು ಸುದ್ದಿ. ಜನರು ಪೆಟ್ರೋಲ್ ಬಂಕ್‌ಗಳ ಮುಂದೆ ಸರತಿ ಸಾಲಿನಲ್ಲಿ ನಿಲ್ಲುತ್ತಿರುವುದು ಕಂಡುಬರುತ್ತಿದೆ. ಜನತೆ ಆತಂಕ ಪಡುವ ಅಗತ್ಯವಿಲ್ಲ. ನಾಲ್ಕೈದು ದಿನಕ್ಕೆ ಆಗುವಷ್ಟು ದಾಸ್ತಾನಿದೆ ಎಂದು ಹೇಳಿದ್ದಾರೆ.ಸಾಕಷ್ಟು ದಾಸ್ತಾನು ಲಭ್ಯ:ಜಿಲ್ಲಾದ್ಯಂತ ಎಲ್ಲ ತೈಲ ಕಂಪನಿ ಬಳಿ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಸಾಕಷ್ಟು ಪ್ರಮಾಣದ ಇಂಧನ ದಾಸ್ತಾನು ಲಭ್ಯವಿದೆ. ಎಲ್ಲ ಪೆಟ್ರೋಲ್ ಬಂಕ್‌ಗಳಿಗೆ ನಿರಂತರವಾಗಿ ಇಂಧನ ಪೂರೈಕೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಪೂರೈಕೆಯಲ್ಲಿ ಯಾವುದೇ ವ್ಯತ್ಯಯ ಉಂಟಾಗಿಲ್ಲ. ಜನರು ಗಾಬರಿಯಿಂದ ಅಗತ್ಯಕ್ಕಿಂತ ಹೆಚ್ಚು ಇಂಧನ ಸಂಗ್ರಹಿಸಿಟ್ಟುಕೊಳ್ಳಬಾರದು ಎಂದು ಮನವಿ ಮಾಡಿದ್ದಾರೆ.ಕಠಿಣ ಕ್ರಮದ ಎಚ್ಚರಿಕೆ:ಇಂಧನ ಅಭಾವದ ಬಗ್ಗೆ ಸುಳ್ಳು ಸುದ್ದಿ ಅಥವಾ ವದಂತಿ ಹಬ್ಬಿಸುವ ಕಿಡಿಗೇಡಿಗಳ ವಿರುದ್ಧ ಕಾನೂನು ರೀತ್ಯಾ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದ್ದಾರೆ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಗೊಡದೆ ಜಿಲ್ಲಾಡಳಿತದೊಂದಿಗೆ ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ವಿನಂತಿಸಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಹಿಳೆಯರು ಸಹನ ಶೀಲರು ಹಾಗೂ ಕೆಚ್ಚೆದೆಯ ಹೋರಾಟಗಾರರು- ಡಾ. ಮೀನಾಕ್ಷಿ ಜಂಗಮನಿ
ಅನ್ಯ ಜಿಲ್ಲೆಗೆ ಭದ್ರಾ ನೀರು ಕೊಟ್ಟರೆ ಸಂಕಷ್ಟ: ಆತಂಕ