ಬಲದಂಡೆ: ಇಂದು ನೀರಾವರಿ ಎಂಜಿನಿಯರ್ ಕಚೇರಿಗೆ ಮುತ್ತಿಗೆ

KannadaprabhaNewsNetwork |  
Published : Jul 09, 2025, 12:27 AM IST
ಪೊಟೋ: 08ಎಸ್‌ಎಂಜಿಕೆಪಿ06ಶಿವಮೊಗ್ಗದಲ್ಲಿ ಮಂಗಳವಾರ  ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಮಾತನಾಡಿದರು. | Kannada Prabha

ಸಾರಾಂಶ

ಭದ್ರಾ ಬಲದಂಡೆ ನಾಲೆ ಸೀಳಿ ಕುಡಿಯುವ ನೀರು ಪೂರೈಸುವ ಯೋಜನೆಗೆ ದಾವಣಗೆರೆ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜು.9ರಂದು ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಶಿವಮೊಗ್ಗ: ಭದ್ರಾ ಬಲದಂಡೆ ನಾಲೆ ಸೀಳಿ ಕುಡಿಯುವ ನೀರು ಪೂರೈಸುವ ಯೋಜನೆಗೆ ದಾವಣಗೆರೆ ಭಾಗದ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಜು.9ರಂದು ಶಿವಮೊಗ್ಗದ ಸಾಗರ ರಸ್ತೆಯಲ್ಲಿರುವ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ತಿಳಿಸಿದರು.

ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಭದ್ರಾ ಬಲದಂಡೆ ನಾಲೆಯನ್ನು ಸೀಳಿ, ರೈತರ ಮರಣ ಶಾಸನ ಬರೆಯಲು ಹೊರಟಿದ್ದಾರೆ. ಭದ್ರಾ ಬಲದಂಡೆ ಕುಡಿಯುವ ನೀರಿನ ಯೋಜನೆಗೆ ನೀರನ್ನು ಬಿಡುತ್ತಿರುವುದರಿಂದ ದಾವಣಗೆರೆ ಜಿಲ್ಲೆಯ ರೈತರಿಗೆ ಮರ್ಮಾಘಾತ ಉಂಟಾಗಿದೆ. ನಮ್ಮ ನೀರು ನಮ್ಮ ಹಕ್ಕು, ಕೂಡಲೇ ಭದ್ರಾ ಬಲದಂಡೆ ನಾಲೆ ಬಳಿ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕು ಎಂದು ಆಗ್ರಹಿಸಿ ಶಿವಮೊಗ್ಗದ ನೀರಾವರಿ ನಿಗಮದ ಮುಖ್ಯ ಎಂಜಿನಿಯರ್ ಕಚೇರಿಗೆ ಮುತ್ತಿಗೆ ಹಾಕಲು ನಿರ್ಧರಿಸಿದ್ದೇವೆ ಎಂದು ಮಾಹಿತಿ ನೀಡಿದರು.

ಕಾಮಗಾರಿ ವಿರೋಧಿಸಿ ಹಲವು ಹಂತಗಳಲ್ಲಿ ಹೋರಾಟ ನಡೆಸಿದ್ದೆವು. ಆದರೆ, ಸರ್ಕಾರ ನಮ್ಮ ಹೋರಾಟಕ್ಕೆ ಸ್ಪಂದಿಸಲಿಲ್ಲ. ಜೂನ್‌ 21 ರಂದು ಭದ್ರಾ ನಾಲೆ ವೀಕ್ಷಣೆ, ಜೂನ್ 23 ರಂದು ಬೃಹತ್ ಹೋರಾಟ ನಡೆಸಲಾಗಿತ್ತು. ಆದರೆ, ಆ ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸರ್ಕಾರದ ಏಜೆಂಟ್ ಆಗಿ ಕಾರ್ಯನಿರ್ವಹಿಸಿತು. ನಾವು ಭಯೋತ್ಪಾದಕರಲ್ಲದಿದ್ದರೂ, ಸೆಕ್ಷನ್ 144 ಜಾರಿಗೊಳಿಸಿ ತಮ್ಮನ್ನು ಬಂಧಿಸಲಾಯಿತು. ಜೂನ್ 25 ರಂದು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡುವಾಗ ತಮ್ಮ ಮುಖಂಡರ ಮೇಲೆ ಬಲವಂತವಾಗಿ ಹಲ್ಲೆ ನಡೆಸಲಾಯಿತು ಎಂದು ದೂರಿದರು.ನನ್ನನ್ನೂ ಒಳಗೊಂಡಂತೆ ಎಲ್ಲಾ ರೈತರನ್ನು ಪೊಲೀಸರು ಬಂಧಿಸಿದ್ದರು. ನಂತರ ಎಸ್ಪಿ ಮತ್ತು ಡಿಸಿ ಅವರೊಂದಿಗೆ ಮಾತುಕತೆ ನಡೆಸಲಾಗಿತ್ತು. ಈ ಹೋರಾಟ ಸ್ವಾರ್ಥಕ್ಕಾಗಿ ಅಲ್ಲ, ರೈತರ ಜೀವನಕ್ಕಾಗಿ ಜುಲೈ 4 ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿ ಮಾಡಿ ಸಮಸ್ಯೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿತ್ತು. ಅವರು ಭರವಸೆ ನೀಡಿದ್ದರೂ, ಅದು ಕೇವಲ ಭರವಸೆಯಾಗಿಯೇ ಉಳಿದಿದೆ. ನಂತರ ಕರಪತ್ರಗಳನ್ನು ಹಂಚುವ ಮೂಲಕ ಯೋಜನೆಯಿಂದ ರೈತರಿಗೆ ಆಗುವ ಸಮಸ್ಯೆಗಳ ಬಗ್ಗೆ ಅರಿವು ಮೂಡಿಸಲಾಗಿತ್ತು. ಈ ವಿಚಾರವಾಗಿ ನಮ್ಮ ಹೋರಾಟ ನಿಲ್ಲುವುದಿಲ್ಲ, ನಾವು ಯಾವುದೇ ತ್ಯಾಗಕ್ಕೂ ಸಿದ್ಧರಿದ್ದೇವೆ. ಮುಖ್ಯಮಂತ್ರಿಗಳು ತಕ್ಷಣ ಭದ್ರಾ ಕಾಮಗಾರಿಯನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಬೇರೆ ಬೇರೆ ಹಂತದ ಹೋರಾಟಕ್ಕೆ ನಾವು ಸಿದ್ಧರಿದ್ದೇವೆ ಎಂದು ಎಚ್ಚರಿಕೆ ನೀಡಿದರು. ಭದ್ರಾ ಬಲದಂಡೆಯಲ್ಲಿ ಒಟ್ಟು 65 ಸಾವಿರ ಹೆಕ್ಟೇರ್ ಭೂಪ್ರದೇಶಕ್ಕೆ ನೀರನ್ನು ಬಿಡಬೇಕು. ಆದರೆ ಭತ್ತ ನಾಟಿ ಮಾಡುವ ಸಂದರ್ಭ ಈಗ ರೈತರಿಗೆ ನೀರನ್ನು ಬಿಡುತ್ತಿಲ್ಲ. ಕಾಮಗಾರಿ ನಡೆಯುತ್ತಿರುವ ಸ್ಥಳವನ್ನು ಯಾರಿಗೂ ವೀಕ್ಷಿಸಲು ಬಿಡುತ್ತಿಲ್ಲ. ಪೊಲೀಸರ ಬಂದೋಬಸ್ತ್‌ನಲ್ಲಿ ಕಾಮಗಾರಿ ನಡೆಸುತ್ತಿದ್ದಾರೆ. ರಕ್ತ ಕ್ರಾಂತಿಯಾದರೂ ಪರವಾಗಿಲ್ಲ, ಹೋರಾಟ ಮಾಡಿಯೇ ಮಾಡುತ್ತೇವೆ ಎಂದರು.ಕುಡಿಯುವ ನೀರಿಗೆ ತಮ್ಮ ವಿರೋಧವಿಲ್ಲ. 7 ಟಿಎಂಸಿ ನೀರು ಕುಡಿಯುವುದಕ್ಕಾಗಿ ಮೀಸಲಿಟ್ಟಿದ್ದು, ಅದನ್ನು ಜಾಕ್ವೆಲ್ ಮೂಲಕ ಕುಡಿಯಲು ಬಿಡುಗಡೆ ಮಾಡಬಹುದು. ಆದರಿಂದ ತಕ್ಷಣ ಕಾಮಗಾರಿ ನಿಲ್ಲಿಸಿ ತಡೆಗೋಡೆ ಕಟ್ಟಬೇಕು. ಸರ್ಕಾರ ನಮ್ಮ ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕುತ್ತಿದೆ. ನಾವು ಪಾಕಿಸ್ತಾನದಲ್ಲಿ ಇಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡುತ್ತೇವೆ. ಇದು ಪಕ್ಷಾತೀತ ಹೋರಾಟ, ರೈತರ ಪರ ಹೋರಾಟ ಅಷ್ಟೇ ಎಂದರು.ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹರಕೆರೆ ನಾಗರಾಜ್, ಹೊನ್ನಾಳಿ ಕುಬೇಂದ್ರಪ್ಪ, ರಂಗಪ್ಪ ಮತ್ತಿತರರಿದ್ದರು.

PREV