ಪಾಂಡವಪುರ ತಾಲೂಕು ಆಡಳಿತ, ತಾಪಂ ಕಚೇರಿಗಳಲ್ಲಿ ಭ್ರಷ್ಟಾಚಾರ ಹೆಚ್ಚಳ: ಸಿ.ಎಸ್.ಪುಟ್ಟರಾಜು

KannadaprabhaNewsNetwork |  
Published : Oct 01, 2026, 01:45 AM IST
30ಕೆಎಂಎನ್ ಡಿ11 | Kannada Prabha

ಸಾರಾಂಶ

ತಾಪಂ ಇಒ ವೀಣಾ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದಾಗಿ ಅಧಿಕಾರಿಗಳದ್ದೇ ಸರ್ವಾಧಿಕಾರವಾಗಿದೆ. ತಾಪಂ ಇಒ ಅವರು ಪ್ರತಿ ಖಾತೆ, ಇ-ಸ್ವತ್ತು ಮಾಡಿಕೊಡುವುದಕ್ಕೂ ಇಂತಿಷ್ಟು ಹಣ ಪಡೆಯುತ್ತಿದ್ದಾರೆ.

ಕನ್ನಡಪ್ರಭ ವಾರ್ತೆ ಪಾಂಡವಪುರ

ತಾಲೂಕು ಆಡಳಿತ ಹಾಗೂ ತಾಪಂನಲ್ಲಿ ನಡೆಯುತ್ತಿರುವ ಭ್ರಷ್ಟಾಚಾರ, ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ವಿರುದ್ಧ ಅ.5ರಂದು ಜೆಡಿಎಸ್‌ನಿಂದ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಸಚಿವ ಸಿ.ಎಸ್.ಪುಟ್ಟರಾಜು ತಿಳಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಆಡಳಿತ ವ್ಯವಸ್ಥೆ ಸಂಪೂರ್ಣ ಕುಸಿದಿದೆ. ತಾಲೂಕು ಕಚೇರಿ ಹಾಗೂ ತಾಪಂ ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ, ಭ್ರಷ್ಟಾಚಾರ ಹೆಚ್ಚಾಗಿದೆ. ತಾಲೂಕು ಕಚೇರಿಯಲ್ಲಿ ಎಸಿ, ತಹಸೀಲ್ದಾರ್, ಆರ್‌ಐ, ವಿಎಗಳು ಸೇರಿದಂತೆ ಸಿಬ್ಬಂದಿ ಭ್ರಷ್ಟಾಚಾರದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ದೂರಿದರು.

ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು, ಕಾನೂನಿನ ಪ್ರಕಾರ ಪೌತಿಖಾತೆ ಮಾಡಿಕೊಡುವುದಕ್ಕೂ ಇಂತಿಷ್ಟು ಹಣವನ್ನು ಸಾರ್ವಜನಿಕರು, ರೈತರಿಂದ ವಸೂಲಾತಿ ಮಾಡುತ್ತಿದ್ದಾರೆ. ಜಾತಿ-ಆದಾಯ ಪ್ರಮಾಣ ಪತ್ರ ಮಾಡಿಸುವುದಕ್ಕೂ ಜನತೆ ಪರದಾಡುವ ಸ್ಥಿತಿ ಎದುರಾಗಿದೆ ಎಂದು ಕಿಡಿಕಾರಿದರು.

ಇನ್ನೂ ತಾಪಂ ಇಒ ವೀಣಾ ಅವರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ. ಅಧಿಕಾರ ವಿಕೇಂದ್ರೀಕರಣ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಜನಪ್ರತಿನಿಧಿಗಳು ಇಲ್ಲದೇ ಇರುವುದರಿಂದಾಗಿ ಅಧಿಕಾರಿಗಳದ್ದೇ ಸರ್ವಾಧಿಕಾರವಾಗಿದೆ. ತಾಪಂ ಇಒ ಅವರು ಪ್ರತಿ ಖಾತೆ, ಇ-ಸ್ವತ್ತು ಮಾಡಿಕೊಡುವುದಕ್ಕೂ ಇಂತಿಷ್ಟು ಹಣ ಪಡೆಯುತ್ತಿದ್ದಾರೆ. ಇಒ ಅವರು ಕಚೇರಿಯಲ್ಲಿ ಕೂರುವುದಕ್ಕಿಂತ ಹೆಚ್ಚಾಗಿ ಕಚೇರಿಯ ಹಿಂಭಾಗ ಇರುವ ಸಭಾಂಗಣದಲ್ಲಿಯೇ ಹೆಚ್ಚು ಕಾಲಹರಣ ಮಾಡುತ್ತಿದ್ದಾರೆ. ಅಲ್ಲಿ ಹಣ ವಸೂಲಾತಿ ಮಾಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.

ನಾನು ಸಚಿವನಾಗಿ ಕೆಲಸ ಮಾಡುತ್ತಿದ್ದಾಗ ಮೇಲುಕೋಟೆ ಕ್ಷೇತ್ರದ ದುದ್ದ, ಬಳಘಟ್ಟ, ಶ್ಯಾದನಹಳ್ಳಿ, ಬಳೇಅತ್ತಿಗುಪ್ಪೆ, ಸುಂಕಾತೊಣ್ಣೂರು ಏತನೀರಾವರಿ ಯೋಜನೆ ಸೇರಿದಂತೆ ಮಲ್ಲಿಗೆರೆ ಏತನೀರಾವರಿ ಯೋಜನೆಯನ್ನು ಮೇಲ್ದರ್ಜೆಗೇರಿಸುವ ಮೂಲಕ ಆ ಭಾಗದ ಕೆರೆಕಟ್ಟೆಗಳನ್ನು ತುಂಬಿಸುವ ಯೋಜನೆಗೆ ಕ್ರಮವಹಿಸಲಾಗಿತ್ತು. ಆದರೆ, ಅಧಿಕಾರಿಗಳು ಈ ಯೋಜನೆಗಳ ಮೂಲಕ ಕೆರೆಕಟ್ಟೆ ತುಂಬಿಸಲು ಮುಂದಾಗಿಲ್ಲ ಎಂದು ಕಿಡಿಕಾರಿದರು.

ಮಲ್ಲಿಗೆರೆ ಏತನೀರಾವರಿ ಯೋಜನೆಯಿಂದ ಡ್ಯಾಂನ ಹಿನ್ನೀರಿನಲ್ಲಿ 90ಅಡಿ ನೀರಿದ್ದರೂ ಸಹ ಯೋಜನೆಯ ಮೂಲಕ ಕೆರೆಕಟ್ಟೆಗಳಿಗೆ ನೀರು ತುಂಬಿಸಬಹುದು. ಆದರೂ ಕ್ರಮವಹಿಸಿಲ್ಲ. ಹೇಮಾವತಿ ನಾಲೆಯಲ್ಲಿ ನೀರು ಹರಿದರು ಸಹ ಆ ಭಾಗದ ಕೆರೆಗಳನ್ನು ತುಂಬಿಸುವ ಕೆಲಸ ಮಾಡಿಲ್ಲ ಎಂದು ಆಕ್ರೋಶ ಹೊರ ಹಾಕಿದರು.

ಬರಗಾರ ಎದುರಾಗಿದ್ದು ಸರ್ಕಾರ ತಾಲೂಕನ್ನು ಬರಪೀಡಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಸಹ ಅಧಿಕಾರಿಗಳು ಸರಕಾರದ ನಿಯಮಾನುಸಾರ ಕೆಲಸ ಮಾಡುತ್ತಿಲ್ಲ. ಸರ್ಕಾರ ಬರಗಾಲದ ಹಿನ್ನೆಲೆಯಲ್ಲಿ ಎಕರೆಗೆ 2500 ಬರ ಪರಿಹಾರ ಘೋಷಣೆ ಮಾಡಿರುವುದು ನಾಚಿಕೆಗೇಡಿನ ವಿಚಾರವಾಗಿದೆ ಎಂದು ಕಿಡಿಕಾರಿದರು.

ಈ ಎಲ್ಲಾ ವಿಚಾರಗಳ ವಿರುದ್ಧವಾಗಿ ಇದೇ ಅ.5ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ, ಮೊದಲು ತಾಪಂ ಇಒ ಕಚೇರಿ ಎದುರು ಪ್ರತಿಭಟನೆ ನಡೆಸಿ ಬಳಿಕ ತಾಲೂಕು ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್.ಎ.ಮಲ್ಲೇಶ್ ಮಾತನಾಡಿ, ರಾಜ್ಯ ಸರ್ಕಾರ ಪಡಿತರ ಫಲಾನುಭವಿಗಳಿಗೆ ಇ-ಕೆವೈಸಿ ಮಾಡಿಸುವುದು ಕಡ್ಡಾಯ ಮಾಡಿರುವುದರಿಂದ ನೆಟ್ ವರ್ಕ್, ಸರ್ವರ್ ಸಮಸ್ಯೆಗಳಿಂದಾಗಿ ಸರಿಯಾಗಿ ಇ-ಕೆವೈಸಿ ಮಾಡಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಸರ್ಕಾರ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.

ಗ್ರಾಪಂ ಮಾಜಿ ಅಧ್ಯಕ್ಷ ಅರಳಕುಪ್ಪೆಮಹದೇವು ಮಾತನಾಡಿ, ಸಕ್ಕರೆ, ಬೆಲ್ಲದ ಬೆಲೆ ಹೆಚ್ಚಾಗಿದ್ದರೂ ಸಹ ರೈತರ ಕಬ್ಬಿನ ಬೆಲೆಮಾತ್ರ ಹೆಚ್ಚಳ ಮಾಡುತ್ತಿಲ್ಲ. ಸಕ್ಕರೆ ಕಾರ್ಖಾನೆಯಲ್ಲಿ ಸರಿಯಾಗಿ ಪೇಮೆಂಟ್ ಮಾಡುತ್ತಿಲ್ಲ. 50 ರು. ಹೆಚ್ಚುವರಿ ಹಣ ನೀಡಿಲ್ಲ. ಭತ್ತದಕ್ಕೆ ಸೂಕ್ತ ಬೆಲೆ ನಿಗಧಿಪಡಿಸಿಲ್ಲ. ತಾಲೂಕು ಆಡಳಿತ ಭತ್ತ ಖರೀದಿ ಕೇಂದ್ರವನ್ನು ನಿಗಧಿಪಡಿಸಿಲ್ಲ ಎಂದು ಕಿಡಿಕಾರಿದರು.

ಸುದ್ದಿಗೋಷ್ಠಿಯಲ್ಲಿ ಟಿಎಪಿಸಿಎಂಎಸ್ ಅಧ್ಯಕ್ಷ ಚಿಕ್ಕಾಡೆ ಗಿರೀಶ್, ನಿರ್ದೇಶಕರಾದ ವಡ್ಡರಹಳ್ಳಿ ನಿಂಗೇಗೌಡ, ಆದರ್ಶ, ಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಶ್ಯಾದನಹಳ್ಳಿ ಚಲುವರಾಜು, ಪುರಸಭೆ ಮಾಜಿ ಅಧ್ಯಕ್ಷರಾದ ಆರ್.ಸೋಮಶೇಖರ್, ಎಂ.ಗಿರೀಶ್, ಪಿ.ಎಸ್.ಲಿಂಗರಾಜು(ಗುಣಣ್ಣ), ಗಡ್ಡ ಚಂದ್ರಶೇಖರ್ ಹಾಜರಿದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಶಿಕ್ಷಕರು ರಾಜಕೀಯದಿಂದ ದೂರ ಉಳಿಯಬೇಕು: ಪಿ.ಎಂ.ನರೇಂದ್ರಸ್ವಾಮಿ
ಅಂಕಗಳು ಕಲಿಕೆಯ ಒಂದು ಭಾಗವೇ ಹೊರತು ಅದೇ ಶಿಕ್ಷಣದ ಮೂಲ ಗುರಿಯಲ್ಲ