ರೈತರ ಬರಪರಿಹಾರವನ್ನು ಬಿಕ್ಷೆ ನೀಡುವಂತೆ ನೀಡುತ್ತಿದೆ. ಮತ್ತೊಂದಡೆ ಗೃಹಲಕ್ಷ್ಮಿ, ವೃದ್ಧಾಪಿ, ವಿಕಲಚೇತನರ ಪಿಂಚಣಿ ಹಣವನ್ನು ನೀಡುತ್ತಿಲ್ಲ. ಯಾವುದಾದರೂ ಚುನಾವಣೆ ಹತ್ತಿರ ಬಂದಾಗ ಮಾತ್ರ ಇವರು ಸಾಮಾಜಿಕ ಭದ್ರತೆ ಯೋಜನೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಾರೆ.
ಕನ್ನಡಪ್ರಭ ವಾರ್ತೆ ಪಾಂಡವಪುರ
ರಾಜ್ಯ ಸರ್ಕಾರದಿಂದ ಅಗತ್ಯ ವಸ್ತುಗಳ ಬೆಲೆ ಏರಿಕೆ ನೀತಿ ಖಂಡಿಸಿ ಪಟ್ಟಣದಲ್ಲಿ ಬಿಜೆಪಿ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.
ಪಟ್ಟಣದ ಐದು ದೀಪದ ವೃತ್ತದಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಪಟ್ಟಣದ ಮಿನಿ ವಿಧಾನಸೌಧದವರೆಗೂ ಮೆರವಣಿಗೆ ನಡೆಸಿ ಸರ್ಕಾರ ವಿರುದ್ಧ ಘೋಷಣೆ ಕೂಗಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಡಾ.ಎನ್.ಎಸ್.ಇಂದ್ರೇಶ್ ಮಾತನಾಡಿ, ರಾಜ್ಯ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಜನವಿರೋಧಿ ನೀತಿ ಅನುಸರಿಸುತ್ತಿದೆ. ಜನಸಾಮಾನ್ಯರು, ಸಾರ್ವಜನಿಕರು ಬಳಕೆ ಮಾಡುವ ದಿನ ಬಳಕೆ ವಸ್ತುಗಳು ದುಬಾರಿಯಾಗಿದ್ದು, ಸಾಮಾನ್ಯ ಜನರು ಬದುಕು ನಡೆಸುವುದೇ ಕಷ್ಟವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ಯಾರಂಟಿ ಹೆಸರಿನಲ್ಲಿ ಸರ್ಕಾರ ಒಂದು ಕೈಲಿ ಕೊಟ್ಟು ಮತ್ತೊಂದು ಕೈಲಿ ಜನರಿಂದ ಕಿತ್ತುಕೊಳ್ಳುವ ಆಡಳಿತ ನಡೆಸುತ್ತಿದೆ. ಎಮ್ಮೆ ಚರ್ಮದ ಸರ್ಕಾರಕ್ಕೆ ಕಣ್ಣು, ಕಿವಿ, ಬಾಯಿ ಏನು ಇಲ್ಲದಂತಾಗಿದೆ ಎಂದು ಕಿಡಿಕಾರಿದರು.
ಎಲ್ಲಾ ದಿನ ಬಳಕೆ ವಸ್ತುಗಳು ಗಗನಕ್ಕೇರುತ್ತಿವೆ. ಇತ್ತ ಆಶಾ ಕಾರ್ಯಕರ್ತೆಯರು 15 ಸಾವಿರ ಪ್ರೋತ್ಸಾಹ ಧನಕ್ಕಾಗಿ ಮಳೆ, ಚಳಿ ಎನ್ನದೆ ಕುಟುಂಬ ಮಕ್ಕಳನ್ನು ಬಿಟ್ಟು ಹೋರಾಟ ನಡೆಸುತ್ತಿದ್ದರೆ ಅತ್ತ ಮುಖ್ಯಮಂತ್ರಿಗಳು ಜಪಾನ್ನಲ್ಲಿ ಮೋಜು ಮಸ್ತಿಯಲ್ಲಿ ತೊಡಗಿದ್ದಾರೆ. ಚುನಾವಣೆಗೂ ಮುನ್ನ ಪ್ರಣಾಳಿಕೆಯಲ್ಲಿಯೇ ಘೋಷಣೆ ಮಾಡಿದ್ದಾರೆ. ಆದರೂ ಅವರ ಸಮಸ್ಯೆಗೆ ಸ್ಪಂದನೆ ನೀಡುತ್ತಿಲ್ಲ ಎಂದು ಹರಿಹಾಯ್ದರು.
ರೈತರ ಬರಪರಿಹಾರವನ್ನು ಬಿಕ್ಷೆ ನೀಡುವಂತೆ ನೀಡುತ್ತಿದೆ. ಮತ್ತೊಂದಡೆ ಗೃಹಲಕ್ಷ್ಮಿ, ವೃದ್ಧಾಪಿ, ವಿಕಲಚೇತನರ ಪಿಂಚಣಿ ಹಣವನ್ನು ನೀಡುತ್ತಿಲ್ಲ. ಯಾವುದಾದರೂ ಚುನಾವಣೆ ಹತ್ತಿರ ಬಂದಾಗ ಮಾತ್ರ ಇವರು ಸಾಮಾಜಿಕ ಭದ್ರತೆ ಯೋಜನೆ ಹಣವನ್ನು ಫಲಾನುಭವಿಗಳ ಖಾತೆಗೆ ಹಾಕುತ್ತಾರೆ ಎಂದು ಕಿಡಿಕಾರಿದರು.
ಹಾಸ್ಟೆಲ್ನಲ್ಲಿ ಇರುವ ಹೆಣ್ಣುಮಕ್ಕಳಿಗೆ ಸ್ಯಾನಿಟೈಸಿಂಗ್ ಪ್ಯಾಕ್ಗಳನ್ನು ಕೊಡಲು ಈ ಸರ್ಕಾರದಿಂದ ಸಾಧ್ಯವಾಗುತ್ತಿಲ್ಲ ಎಂದರೆ ಈ ಸರ್ಕಾರ ಎಷ್ಟರ ಮಟ್ಟಿಗೆ ದಿವಾಳಿಯಾಗಿದೆ ಎನ್ನುವುದನ್ನು ಅರ್ಥೈಸಿಕೊಳ್ಳಬೇಕು. ನಿಮ್ಮಿಂದ ಸರ್ಕಾರ ನಡೆಸಲು ಸಾಧ್ಯವಾಗದಿದ್ದರೆ ರಾಜೀನಾಮೆ ಕೊಟ್ಟು ಬನ್ನಿ. ನಾವು ಬಹುಮತ ಇದ್ದೇವೆ ಏನು ಮಾಡಿದರು ನಡೆಯುತ್ತದೆ ಎಂಬ ಭ್ರಮೆಯಲ್ಲಿ ಆಡಳಿತ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜನವಿರೋಧಿ ನೀತಿ ಅನುಸರಿಸುತ್ತಿರುವ ಕಾಂಗ್ರೆಸ್ ಸರ್ಕಾರಕ್ಕೆ ಜನರು ಮುಂದೆ ತಕ್ಕಪಾಠ ಕಲಿಸಲಿದ್ದಾರೆ. ಮುಂದಿನ ಚಳಿಗಾಲದ ಅಧಿವೇಶನದ ವೇಳೆಗೆ ಗೃಹಲಕ್ಷ್ಮಿ, ವೃದ್ಧಾಪಿ ವೇತನ ಸೇರಿದಂತೆ ಎಲ್ಲಾ ಪ್ರೋತ್ಸಾಹ ದನವನ್ನು ಖಾತೆಗೆ ಹಾಕದಿದ್ದರೆ ಅಧಿವೇಶನ ನಡೆಸಲು ಬಿಡೋದಿಲ್ಲ ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಬಿಜೆಪಿ ಮಹಿಳಾ ಮೋರ್ಚ್ ಜಿಲ್ಲಾಧ್ಯಕ್ಷೆ ಮಂಗಳ ನವೀನ್ಕುಮಾರ್, ತಾಲೂಕು ಅಧ್ಯಕ್ಷ ಧನಂಜಯ್, ಟೌನ್ ಅಧ್ಯಕ್ಷ ಬೀರಶೆಟ್ಟಹಳ್ಳಿ ಸೋಮಶೇಖರ್, ಮುಖಂಡರಾದ ಕೆ.ಎಲ್.ಆನಂದ್, ಕಣಿವೆಮಹೇಶ್, ಅಶೋಕ್, ಚಿಕ್ಕಣ್ಣ, ಎಂ.ರಾಜ್ಕುಮಾರ್, ಈರೇಗೌಡ, ಶ್ರೀನಿವಾಸ್ನಾಯ್ಕ, ದುರ್ಗೇಶ್, ಡೇರಿರಾಮು, ಚಿಕ್ಕಮರಳಿ ನವೀನ್, ಕಿರಣ್, ರಾಮಚಂದ್ರ, ಮಂಜಾಚಾರಿ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಹಾಜರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.