ಕುಮಾರಪಟ್ಟಣ: ಮಲೆನಾಡು ಹಾಗೂ ಭದ್ರಾವತಿ ಭಾಗದಲ್ಲಿ ಕಳೆದ ೪ ದಿನಗಳಿಂದ ಉತ್ತಮ ಮಳೆಯಾಗುತ್ತಿದ್ದು, ತುಂಗಭದ್ರಾ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.
ಹಾವೇರಿ ಜಿಲ್ಲೆಯಲ್ಲಿ ಮಳೆ ಸುರಿದಿದ್ದರಿಂದಲೂ ಕುಮದ್ವತಿ ನದಿಯಲ್ಲಿ ಹೆಚ್ಚಿನ ನೀರು ಹರಿದು ತುಂಗಭದ್ರಾ ನದಿ ಸೇರುತ್ತಿದೆ. ದಾವಣಗೆರೆ ಜಿಲ್ಲೆಯಲ್ಲಿಯೂ ಉತ್ತಮ ಮಳೆಯಾದ ಕಾರಣ ಸೂಳೆಕೆರೆ ಹಳ್ಳದಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗಿದೆ. ಆ ನೀರು ಸಹ ತುಂಗಭದ್ರಾ ನದಿ ಸೇರುತ್ತಿದೆ.
ಜಿಲ್ಲೆಯ ಜೀವನಾಡಿಯಾಗಿರುವ ತುಂಗಭದ್ರಾ ನದಿ ಮೈದುಂಬಿ ಹರಿಯುತ್ತಿರುವುದರಿಂದ ಸ್ಥಳೀಯರಿಗೆ ಸಂತಸವಾಗಿದೆ. ನದಿ ನೀರು ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿದ್ದಾರೆ. ಜತೆಗೆ ಪ್ರವಾಸಿಗರೂ ಆಗಮಿಸುತ್ತಿದ್ದಾರೆ.ಒಂದು ವರ್ಷಕ್ಕೂ ಅಧಿಕ ಕಾಲ ನದಿಯ ಉಗಮ ಸ್ಥಾನದಿಂದ ಹಾವೇರಿ ಜಿಲ್ಲೆಯ ಗಡಿ ಅಂಚಿನವರೆಗಿನ ಕಂಚಾರಗಟ್ಟಿ ಹತ್ತಿರದ ಸೇತುವೆಯ ವರೆಗಿನ ಪ್ರದೇಶದಲ್ಲಿ ನದಿಯಲ್ಲಿ ಬೆಳೆದು ನಿಂತಿದ್ದ ಅಂತರಗಂಗೆ ಬಳ್ಳಿ ಹಾಗೂ ಇತರೆ ಕಸ-ಕಡ್ಡಿಗಳು ರಾಶಿ ರಾಶಿಯಾಗಿ ಹರಿಯುತ್ತಿರುವ ನೀರಿನ ರಭಸಕ್ಕೆ ವೇಗವಾಗಿ ತೇಲಿಹೋಗುತ್ತಿವೆ. ಕೆಲವು ದೊಡ್ಡ ಮರದ ಕೊಂಬೆಗಳು, ಮರಗಳು ನೀರಿನಲ್ಲಿ ತೇಲುತ್ತಾ ಸಾಗಿವೆ.
ತುಂಗಾ ನದಿ ಭರ್ತಿಯಾಗಿದ್ದರೂ, ಭದ್ರಾ ನದಿ ಇನ್ನೂ ಪೂರ್ಣ ಪ್ರಮಾಣದಲ್ಲಿ ತುಂಬಿಲ್ಲದ ಕಾರಣ ಆ ಭಾಗದ ರೈತರಿಗೆ ಆತಂಕವಾಗಿದೆ. ಜೂನ್ ಅಂತ್ಯದ ವೇಳೆಗೆ ಎರಡೂ ನದಿಗಳು ಭರ್ತಿಯಾಗಬೇಕಿತ್ತು. ಆದರೆ, ಜುಲೈ ಬಂದರೂ ಭದ್ರಾ ಅಣೆಕಟ್ಟಿನ ಮಟ್ಟ ಇನ್ನೂ ಏರಿಕೆಯಾಗಿಲ್ಲ. ಹೀಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರಲ್ಲಿ ಆತಂಕ ಮನೆಮಾಡಿದೆ. ಅತ್ತ ಮಲೆನಾಡಿನಲ್ಲಿ ಮಳೆ ಮುಂದುವರಿದಲ್ಲಿ ಭದ್ರಾ ಅಣೆಕಟ್ಟೆಯಲ್ಲಿಯೂ ನೀರಿನ ಪ್ರಮಾಣ ಹೆಚ್ಚಾಗುತ್ತದೆ.