ಕನ್ನಡಪ್ರಭ ವಾರ್ತೆ ರಾಯಚೂರು/ಸಿಂಧನೂರು
40ರಿಂದ 42 ಡಿಗ್ರಿ ಸೆಲ್ಸಿಯಸ್ ಬಿಸಿಲಿನ ತಾಪಮಾನ ಸರಾಸರಿ ಇದೆ ಎಂದು ಹವಾಮಾನ ಇಲಾಖೆ ಪ್ರಕಟಿಸಿದೆ. ಬ್ಯಾಂಕ್, ಸರ್ಕಾರಿ ಕಚೇರಿಗಳು, ಎಲ್ಐಸಿ, ಅಂಚೆ ಕಚೇರಿ, ಖಾಸಗಿ ಸಂಘ-ಸಂಸ್ಥೆಗಳಲ್ಲಿ ಫ್ಯಾನ್ ವಿದ್ಯುತ್ ನಿಲುಗಡೆಯಿಂದ ಬಂದ್ ಆದರೆ ಸಾಕು ಮೈಯೆಲ್ಲಾ ಬೆವರಿಳಿದು ಸಿಬ್ಬಂದಿ ಹೊರಗೆ ಬರುತ್ತಿರುವುದು ಸಾಮಾನ್ಯವಾಗಿದೆ. ಮನೆಗಳಲ್ಲೂ ಸಹ ಸಣ್ಣಮಕ್ಕಳು, ಗರ್ಭಿಣಿಯರು, ಬಾಣಂತಿಯರು, ವೃದ್ಧರು ಬೇಸಿಲಿನ ಧಗೆಗೆ ಒದ್ದಾಡುತ್ತಿದ್ದಾರೆ. ಅದರಲ್ಲೂ ರಾತ್ರಿಯ ವೇಳೆ ತಾಸುಗಟ್ಟಲ್ ವಿದ್ಯುತ್ ಹೋದಾಗ ಶೆಕೆ ತಾಳಲಾರದೆ ಸಂಕಟ ಪಡುತ್ತಾರೆ.
ಬೆವರಿಳಿಸಿಕೊಳ್ಳುತ್ತಿರುವ ಸಂಚಾರಿ ಪೊಲೀಸರು: ನಗರದ ಪ್ರಮುಖ ವೃತ್ತಗಳಲ್ಲಿ ಕರ್ತವ್ಯಪಾಲನೆ ಮಾಡುತ್ತಿರುವ ಸಂಚಾರಿ ಪೊಲೀಸರು ಉರಿ ಬಿಸಿಲಿನಿಂದಾಗಿ ನಿತ್ಯವೂ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಮಹಾತ್ಮಗಾಂಧಿ, ಬಸವ, ಕನಕದಾಸ, ಕಿತ್ತೂರುಚೆನ್ನಮ್ಮ, ಅಂಬೇಡ್ಕರ್ ವೃತ್ತಗಳಲ್ಲಿ ಕೆಲಸ ಮಾಡುವ ಪೊಲೀಸರು ಬಿಸಿಲಿನ ತಾಪ ತಾಳಲಾರದೆ ತಮ್ಮ ಕರವಸ್ತ್ರವನ್ನು ನೀರಿನಲ್ಲಿ ನೆನೆಸಿಕೊಂಡು ಮುಖ ಒರೆಸಿಕೊಳ್ಳುತ್ತಿರುವುದು ಕಂಡು ಬಂದಿದೆ.ಹಾಗೆಯೇ ವೃತ್ತಗಳಲ್ಲಿ ಅರವಟ್ಟಿಗೆಗಳಲ್ಲಿನ ನೀರನ್ನು ಸೇವಿಸುತ್ತಾ ಸಂಚಾರಿ ಕೆಲಸದಲ್ಲಿ ತೊಡಗಿದ್ದಾರೆ. ಸಿಗ್ನಲ್‌ಗಳು ಕೈಕೊಟ್ಟರಂತೂ ಪೊಲೀಸರು ಹರಸಾಹಸ ಪಡುತ್ತಾ ವೃತ್ತಗಳ ಮಧ್ಯೆ ಕೈ ಸನ್ನೆ ಮಾಡುತ್ತಾ ಕಾರ್ಯನಿರ್ವಹಿಸುವಾಗ ಅವರ ಸ್ಥಿತಿ ಹೇಳಲಾಗದು. ಇನ್ನು ಎರಡು ತಿಂಗಳು ಬಿಸಿಲಿನ ಧಗೆ ಹೀಗೆಯೇ ಮುಂದುವರೆಯಲಿದ್ದು, ಕನಿಷ್ಠ ಎಲ್ಲಾ ವೃತ್ತಗಳಲ್ಲಿ ಸಂಚಾರಿ ಪೊಲೀಸರಿಗೆ ಕನಿಷ್ಠ ನೆರಳಿನ ವ್ಯವಸ್ಥೆ ಕಲ್ಪಿಸಬೇಕಾಗಿದೆ. ಇಲ್ಲದಿದ್ದರೆ ವೃತ್ತಗಳ ಅಕ್ಕ-ಪಕ್ಕದ ಅಂಗಡಿ-ಮುಗ್ಗಟ್ಟುಗಳಲ್ಲಿ ಸ್ವಲ್ಪ ಹೊತ್ತು ದಣಿವಾರಿಸಿಕೊಂಡು ಮತ್ತೇ ಕರ್ತವ್ಯದಲ್ಲಿ ತೊಡಗುತ್ತಾರೆ.
ಸಿಂಧನೂರು ನಗರಸಭೆಯವರು ಸ್ವಯಂಪ್ರೇರಿತರಾಗಿ ಮಹಾತ್ಮಗಾಂಧಿ ವೃತ್ತದಲ್ಲಿ ಸಿಗ್ನಲ್ ಲೈಟ್‌ಗಳು ಬೀಳುತ್ತಿದ್ದಂತೆಯೇ ವಾಹನಗಳನ್ನು ಒಂದೂವರೆ ನಿಮಿಷ ನಿಲ್ಲಿಸುವಾಗ ಸಾರ್ವಜನಿಕರಿಗೆ ನೆರಳಿನ ವ್ಯವಸ್ಥೆ ಕಲ್ಪಿಸಲು ಮುಂದಾಗಿದ್ದರು. ಗಂಗಾವತಿ, ರಾಯಚೂರು, ಕುಷ್ಟಗಿ ರಸ್ತೆಗಳ ವಾಹನಗಳು ಸಿಗ್ನಲ್ ಲೈಟ್‌ಗಳಿಗೆ ಅನುಗುಣವಾಗಿ ನಿಂತಾಗ ಹಸಿರು ಬಣ್ಣದ ದೊಡ್ಡ ಗಾತ್ರದ ಬರಕಾಗಳನ್ನು ಹಾಕಿಸಿದ್ದರು. ಎರಡೇ ದಿನದಲ್ಲಿ ತಹಸೀಲ್ದಾರ್ ಕಚೇರಿ ಬಳಿ ಹಾಕಿಸಲಾಗಿದ್ದ ಬರಕಾ ಗಾಳಿಯಿಂದಾಗಿ ಕಿತ್ತುಕೊಂಡು ಹೋಯಿತು. ತದನಂತರ ಎರಡು ದಿನದಲ್ಲಿ ಗಂಗಾವತಿ ಹಾಗೂ ಕುಷ್ಟಗಿ ರಸ್ತೆಗಳಿಗೆ ಹೊಂದಿಕೊಂಡಂತೆ ಹಾಕಿದ್ದ ಬರಕಾಗಳು ಕಿತ್ತುಕೊಂಡು ಹೋದವು. ಈಗ ವಾಹನ ಸವಾರರು ಬಿಸಿಲಿನ ತಾಪದಿಂದಾಗಿ ವೃತ್ತಗಳಲ್ಲಿ ನಿಲ್ಲುವುದು ಯಾತನದಾಯಕವಾಗಿದೆ.
ಕಡಿಮೆಯಾಗಿರುವ ನೀರಿನ ಅರವಟ್ಟಿಗೆಗಳು:
ಜಿಲ್ಲೆಯಲ್ಲಿ ಬಿಸಿಲಿನ ತಾಪ ಹೆಚ್ಚಾಗಿದೆ. ಸಾರ್ವಜನಿಕರು ಆರೋಗ್ಯದ ದೃಷ್ಟಿಯಿಂದ ಮಧ್ಯಾಹ್ನ 1ರಿಂದ ಸಂಜೆ 4 ಗಂಟೆಯವರೆಗೆ ಹೊರಗಡೆ ಸಂಚಾರ ಕಡಿಮೆ ಮಾಡುವುದು ಸೂಕ್ತ ಸಾಮಾನ್ಯ ದಿನಗಳಲ್ಲಿ ಆರೋಗ್ಯಯುತ ವ್ಯಕ್ತಿ 5 ಲೀಟರ್ ನೀರು ಕುಡಿಯಬೇಕು. ಬಿಸಿಲು ಕಾಲದಲ್ಲಿ 10 ಲೀಟರ್‌ಗಿಂತ ಹೆಚ್ಚು ನೀರು ಕುಡಿಯಬೇಕು. ನಿಂಬೆ ಹಣ್ಣಿನ ಶರಬತ್ ಸೇವಿಸಲು ಜನರು ಆದ್ಯತೆ ನೀಡಬೇಕು. ಇದರಿಂದ ಆರೋಗ್ಯಕ್ಕೂ ಉತ್ತಮ.