ಸ್ತನ್ಯಪಾನದಿಂದ ಅಸ್ತಮಾ, ಆಹಾರ ಅಲರ್ಜಿ ಅಪಾಯ ಕಡಿಮೆ: ಡಾ.ನಂಜುಂಡಯ್ಯ

KannadaprabhaNewsNetwork |  
Published : Aug 02, 2024, 12:52 AM IST
ಚಿತ್ರ : 1ಎಂಡಿಕೆ1 : ಜಿಲ್ಲಾ ಶಸ್ತ್ರಚಿಕಿತ್ಸಕರಾದ ಡಾ.ನಂಜುಂಡಯ್ಯ ಮಾತನಾಡಿದರು.  | Kannada Prabha

ಸಾರಾಂಶ

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಗುರುವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಸಮಾರಂಭ ಉದ್ಘಾಟಿಸಿದ ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಮಾತನಾಡಿ, ಸ್ತನ್ಯಪಾನವು ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ. ಅಸ್ತಮಾ, ಆಹಾರ ಅಲರ್ಜಿ, ಮಧುಮೇಹ ಮತ್ತು ಅನೀಮಿಯಾ ಆಗುವ ಅಪಾಯಗಳು ಕಡಿಮೆ ಎಂದರು.

ಕನ್ನಡಪ್ರಭ ವಾರ್ತೆ ಮಡಿಕೇರಿ

ಸ್ತನ್ಯಪಾನವು ಉಸಿರಾಟದ ತೊಂದರೆ ಕಡಿಮೆ ಮಾಡುತ್ತದೆ. ಅಸ್ತಮಾ, ಆಹಾರ ಅಲರ್ಜಿ, ಮಧುಮೇಹ ಮತ್ತು ಅನೀಮಿಯಾ ಆಗುವ ಅಪಾಯಗಳು ಕಡಿಮೆ ಎಂದು ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ನಂಜುಂಡಯ್ಯ ಹೇಳಿದ್ದಾರೆ.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಹಿಳಾ ಮತ್ತು ಮಕ್ಕಳ ವಿಭಾಗದಲ್ಲಿ ಗುರುವಾರ ನಡೆದ ವಿಶ್ವ ಸ್ತನ್ಯಪಾನ ಸಪ್ತಾಹ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಸ್ತನ್ಯಪಾನ ಮಾಡಿಸುವುದರಿಂದ ಪ್ರಸವದ ನಂತರ ಬರಬಹುದಾದ ಖಿನ್ನತೆ ಕಡಿಮೆಯಾಗುತ್ತದೆ. ಬಾಣಂತಿಯರು ಎದೆಹಾಲಿನ ಮಹತ್ವದ ಬಗ್ಗೆ ಅರಿತು ಮಗು ಜನಿಸಿದ ಒಂದು ಗಂಟೆಯೊಳಗೆ ಹಾಲುಣಿಸುವುದರಿಂದ ಮಗುವಿನ ಬೆಳವಣಿಗೆ ಮತ್ತು ಮೆದುಳಿನ ಬೆಳವಣಿಗೆಗೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ.ಮಧುಸೂಧನ್ ಎ.ಆರ್. ಪ್ರಾಸ್ತಾವಿಕವಾಗಿ ಮಾತನಾಡಿ, ಸಾರ್ವಜನಿಕರಿಗೆ ಸ್ತನ್ಯಪಾನದ ಪ್ರಯೋಜನಗಳನ್ನು ಉತ್ತೇಜಿಸಲು ಮತ್ತು ಮಕ್ಕಳ ಬೆಳವಣಿಗೆಗೆ ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಸುವುದು ಸಪ್ತಾಹ ಆಚರಣೆ ಉದ್ದೇಶ. ಜಿಲ್ಲೆಯಾದ್ಯಂತ ಎಲ್ಲಾ ಜಿಲ್ಲಾ ಆಸ್ಪತ್ರೆ/ ತಾಲೂಕು ಆಸ್ಪತ್ರೆ, ಸ.ಆ.ಕೇಂದ್ರ, ಪ್ರಾ.ಆ.ಕೇಂದ್ರಗಳಲ್ಲಿ ಆಚರಿಸಲಾಗುತ್ತಿದೆ ಎಂದು ತಿಳಿಸಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಮಕ್ಕಳ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥ ಡಾ.ಪುರುಷೋತ್ತಮ್ ಮಾತನಾಡಿ, ದೇಶದಲ್ಲಿ ಎನ್.ಎಫ್.ಹೆಚ್.ಎಸ್ 4ರ ಪ್ರಕಾರ ಮಗು ಜನಿಸಿದ ಒಂದು ಗಂಟೆಯೊಳಗೆ ಎದೆಹಾಲು ಉಣಿಸುತ್ತಿರುವವರ ಸಂಖ್ಯೆ ಕೇವಲ ಶೇ.48 ಇದ್ದು, ಶೇ.52 ರಷ್ಟು ಮಕ್ಕಳು ಒಂದು ಗಂಟೆಯ ಒಳಗಿನ ಎದೆಹಾಲು ಸೇವನೆಯಿಂದ ವಂಚಿತರಾಗುತ್ತಿದ್ದಾರೆ. ನಗರ ಪ್ರದೇಶಗಳಲ್ಲಿ ಎದೆಹಾಲು ಬಿಟ್ಟು ಇತರೆ ಬಾಟಲ್ ಹಾಲು ನೀಡುತ್ತಿರುವುದರಿಂದ ಮಕ್ಕಳಿಗೆ ಅಪೌಷ್ಠಿಕತೆ, ಸೋಂಕು ತಗಲುವ ಸಂಭವ ಹೆಚ್ಚು. ಎದೆಹಾಲನ್ನು ಮಗು ಜನಿಸಿದ ಒಂದು ಗಂಟೆಯೊಳಗೆ ಪ್ರಾರಂಭಿಸಿ ಕನಿಷ್ಠ 6 ತಿಂಗಳವರೆಗೆ ನೀಡಬೇಕು ಹಾಗೂ ಗರಿಷ್ಟ 2-3 ವರ್ಷಗಳವರೆಗೂ ನೀಡುವುದು ಉತ್ತಮ ಎಂದು ತಿಳಿಸಿದರು.

ಮೂಢನಂಬಿಕೆಗಳಿಂದ ಜೇನುತುಪ್ಪ, ಸಿಹಿನೀರು, ಇತರೆ ಆಹಾರವನ್ನು ಮಗುವಿಗೆ ನೀಡುವುದರಿಂದ ಶಿಶುಗಳಿಗೆ ಸೋಂಕು ತಗಲುವ ಸಂಭವ ಹೆಚ್ಚು ಎಂದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾಗೂ ಬೋಧಕ ಆಸ್ಪತ್ರೆಯ ಹಿರಿಯ ವೈದ್ಯಕೀಯ ತಜ್ಞ ಡಾ.ರವಿಚಂದ್ರ ಮಾತನಾಡಿ, ತಾಯಿಯ ಎದೆಹಾಲು ಅಮೃತ. ಇದರಲ್ಲಿ ಮಗುವಿಗೆ ಅವಶ್ಯಕವಾದ ಪೋಷಕಾಂಶಗಳು, ರೋಗ ನಿರೋಧಕ ಶಕ್ತಿ ಇದ್ದು, ಮಗುವಿನ ಮೆದುಳಿನ ಬೆಳವಣಿಗೆಗೆ ಅತ್ಯಾವಶ್ಯಕ ಎಂದು ತಿಳಿಸಿದರು.

ಮಕ್ಕಳ ವಿಭಾಗದ ಸಹ ಪ್ರಾಧ್ಯಾಪಕರಾದ ಡಾ.ದಿವ್ಯಾರಾಣಿ ಮಾತನಾಡಿ ಮಗುವಿಗೆ ಜನ್ಮ ನೀಡುವುದು ಒಂದು ಸಂಕೀರ್ಣ ಕ್ರಿಯೆ. ತಾಯಿಯ ಎದೆಹಾಲು ವಿಶ್ವದ ಶ್ರೇಷ್ಠ ಆಹಾರ. ಇದು ಅಮೃತಕ್ಕೆ ಸಮಾನ ಎಂದು ತಿಳಿಸಿದರು.

ಎದೆಹಾಲಿನ ಮಹತ್ವ, ಎದೆಹಾಲು ಉಣಿಸುವ ಭಂಗಿಗಳು, ಹಾಲುಣಿಸುವಿಕೆಯ ಅಂತರ, ಸ್ತನಗಳ ಆರೈಕೆ, ಹಾಲುಕೊಡುವ ಅವಧಿ, ತಾಯಿಗೆ ಎದೆಹಾಲು ಉಣಿಸುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ಉಪನ್ಯಾಸ ನೀಡಿದರು.

ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ಅವರು ಸ್ತನ್ಯಪಾನ ಸಪ್ತಾಹ ಕಾರ್ಯಕ್ರಮದ ಉದ್ದೇಶಗಳು, ಆಚರಣೆ, ಸೆಮಿನಾರ್ ಆಯೋಜಿಸಿ ಸಾಮಾನ್ಯ ಮಹಿಳೆಯರಿಗೆ ಸ್ತನ್ಯಪಾನದ ಉಪಯುಕ್ತತೆ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ಪ್ರಸ್ತುತಪಡಿಸಲು ಸ್ತ್ರೀರೋಗ ತಜ್ಞರಿಂದ ಉಪನ್ಯಾಸ ಮಾಡಿಸುವುದು. ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ ಎಂದು ತಿಳಿಸಿದರು. ಸ್ತನ್ಯಪಾನವನ್ನು ಬೆಂಬಲಿಸುವ ಪ್ರತಿಜ್ಞೆಯನ್ನು ಟಿ.ಎನ್ ಪಾಲಾಕ್ಷ ಬೋಧಿಸಿದರು.

ವೈದ್ಯಕೀಯ ಅಧೀಕ್ಷಕ ಡಾ.ಸೋಮಶೇಖರ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮೇಲ್ವಿಚಾರಕರು, ಸಿಬ್ಬಂದಿ ಮತ್ತಿತರರು ಭಾಗವಹಿಸಿದ್ದರು.

ಅಶ್ವಿನಿ ಪ್ರಾರ್ಥಿಸಿದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಟಿ.ಎನ್.ಪಾಲಾಕ್ಷ ನಿರೂಪಿಸಿದರು.

ಆ.7 ರವರೆಗೆ ‘ವಿಶ್ವ ಸ್ತನ್ಯಪಾನ ಸಪ್ತಾಹ’ ‘ಕೊರತೆಗಳನ್ನು ಕೊನೆಗೊಳಿಸಿ: ಸರ್ವರಿಗೂ ಸ್ತನ್ಯಪಾನದ ಬೆಂಬಲ ನೀಡಿ’ ಘೋಷವಾಕ್ಯದೊಂದಿಗೆ ನಡೆಯಲಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕುರ್ಚಿ ಕಿತ್ತಾಟ ರಾಜ್ಯದವರೇ ಬಗೆಹರಿಸಿಕೊಳ್ಳಬೇಕು: ಖರ್ಗೆ
ಸದೃಢ ಆರೋಗ್ಯಕ್ಕೆ ಹಲ್ಲು ಸದೃಢವಾಗಿರಲಿ