ಕಲಬುರಗಿಯಲ್ಲಿ ಪಿಓಪಿ, ಮೃತ್ತಿಕೆ ಗಣಪನ ಮಧ್ಯೆ ಪೈಪೋಟಿ

KannadaprabhaNewsNetwork |  
Published : Sep 07, 2024, 01:41 AM IST
ಫೋಟೋ- ಗಣಪತಿ 2 ಮತ್ತು ಗಣಪತಿ 3ಕಲಬುರಗಿ ಮುಖ್ಯ ರಸ್ತೆಯಲ್ಲಿ ಮಳಿಗೆಯೊಂದರಲ್ಲಿ ಪಿಓಪಿ ಗಣಪನ ಬಣ್ಣದ ಮೂರ್ತಿಗಳನ್ನು ಖರೀದಿಸುವಲ್ಲಿ ಜನ ತಲ್ಲೀನರಾಗಿರುವ ನೋಟ | Kannada Prabha

ಸಾರಾಂಶ

ಕಲಬುರಗಿಯಲ್ಲಿ ಗಣಪತಿ ಹಬ್ಬದ ಸಂಭ್ರಮ ಸಡಗರ ಈ ಬಾರಿ ಜೋರಾಗಿದೆ. ಎಲ್ಲೆಡೆ ಪರಿಸರ ಸ್ನೇಹಿ, ಬಣ್ಣ, ರಹಿತ ಮಣ್ಣಿನಿಂದ ಮಾಡಿದ ಗಣಪನ ಪೂಜಿಸುವ ಸಂಭ್ರಮ ಹಿಂದಿನ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ ಆಸಕ್ತಿಯ ನಡುವೆಯೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಮಾಡಿದ ಗಣಪನ ಖರೀದಿಯೂ ಜೋರಾಗಿದೆ.

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲಬುರಗಿಯಲ್ಲಿ ಗಣಪತಿ ಹಬ್ಬದ ಸಂಭ್ರಮ ಸಡಗರ ಈ ಬಾರಿ ಜೋರಾಗಿದೆ. ಎಲ್ಲೆಡೆ ಪರಿಸರ ಸ್ನೇಹಿ, ಬಣ್ಣ, ರಹಿತ ಮಣ್ಣಿನಿಂದ ಮಾಡಿದ ಗಣಪನ ಪೂಜಿಸುವ ಸಂಭ್ರಮ ಹಿಂದಿನ ವರ್ಷಕ್ಕಿಂತಲೂ ಹೆಚ್ಚಿದೆ. ಆದರೆ ಆಸಕ್ತಿಯ ನಡುವೆಯೂ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಮಾಡಿದ ಗಣಪನ ಖರೀದಿಯೂ ಜೋರಾಗಿದೆ.

ಹೀಗಾಗಿ ಕಲಬುರಗಿ ನಗರ ಹಾಗೂ ಜಿಲ್ಲಾದ್ಯಂತ ಮಾರುಕಟ್ಟೆಯಲ್ಲಿ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನಿಂದ ಮಾಡಿದ ಗಣಪ ಹಾಗೂ ಮೃತ್ತಿಕೆಯ ಗಣಪನ ನಡುವೆ ಭಾರಿ ಪೈಪೋಟಿ ಕಂಡಿದೆ.

ಸೂಪರ್‌ ಮಾರ್ಕೆಟ್‌, ಬಸ್‌ ನಿಲ್ದಾಣ, ರಾಮ ಮಂದಿರ ವೃತ್ತ, ಗಂಜ್‌, ಜೇವರ್ಗಿ ಕಾಲೋನಿ ಸೇರಿದಂತೆ ಹಲವೆಡೆ ಮೃತ್ತಿಕೆ ಹಾಗೂ ಪಿಓಪಿ ಗಣಪನ ಮೂರ್ತಿಗಳ ಮಾರಾಟ ಭರಟೆಯಿಂದ ಸಾಗಿದೆ. ಇಲ್ಲೆಲ್ಲಾ ವರ್ತಕರು ಗಣಪನ ಪೂಜಾ ಸಾಮಗ್ರಿ, ಗರಿಕೆ, ಉತ್ತರಾಣಿ ಸೇರಿದಂತೆ ಆಧುನಿಕ ಸಾಮಗ್ರಿಗಳು, ಅಲಂಕಾರದ ಸಾಮಗ್ರಿಗಳೆಲ್ಲವನ್ನೂ ಮಾರಾಟಕ್ಕಿಟ್ಟಿದ್ದಾರೆ.

ನೂತನ ವಿದ್ಯಾಲಯದಲ್ಲಿ ಅಲ್ಲಿನ ಕಲಾ ವಿಭಾಗದಿಂದ ಮಣ್ಣಿನ ಗಣಪನನ್ನು ಸಿದ್ಧಪಡಿಸಲಾಗಿದ್ದು ಮಾರಾಟಕ್ಕಿಡಲಾಗಿದೆ. ಇಲ್ಲಿಯೂ ಜನ ಮೃತ್ತಿಕೆ ಗಣಪನ ಖರೀದಿಗೆ ಮುಂದಾಗಿದ್ದಾರೆ. ಇಲ್ಲಿನ ಉಪನ್ಯಾಸಕರಾದ ನಾಗರಾಜ್‌ ಕುಲಕರ್ಣಿ, ಜಿತೇಂದ್ರ ಕೋಥಳೀಕರ್‌ ಮುಂದಾಳತ್ವದಲ್ಲಿ ಮಣ್ಣಿನ ಗಣಪನ ನಿರ್ಮಾಣವಾಗಿದ್ದು ಇದಕ್ಕಾಗಿ ಕಲಾ ವಿಭಾಗದ ವಿದ್ಯಾರ್ಥಿಗಳನ್ನೂ ಬಲಸಲಾಗಿದೆ.

ನಗರದಲ್ಲಿ ಈ ಬಾರಿ ಸಾರ್ವಜನಿಕವಾಗಿ 600 ಕಡೆ ಗಣಪನ ಪ್ರತಿಷ್ಠಾಪನೆ ನಡೆಯಲಿದೆ. ಗಣೇಶ ಹಬ್ಬದ ಅಂಗವಾಗಿ ಜಿಲ್ಲೆಯ ಸಾರ್ವಜನಿಕರು ಜೇಡಿ ಮಣ್ಣನಿಂದ ತಯಾರಿಸಿದ ಮತ್ತು ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಿ ಪರಿಸರ ಸ್ನೇಹಿ ಗಣೇಶ ಹಬ್ಬವನ್ನು ಆಚರಿಸಬೇಕೆಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮನವಿ ಮಾಡಿದೆ.

ರಾಜ್ಯಾದ್ಯಂತ ಪಿ.ಓ.ಪಿ. ಮತ್ತು ರಾಸಾಯನಿಕ ಬಣ್ಣ ಲೇಪಿತ ಗಣೇಶ ಮೂರ್ತಿಗಳನ್ನು ತಯಾರಿಸುವುದಾಗಲಿ/ ಮಾರಾಟ ಮಾಡುವುದಾಗಲಿ/ ಸಂಗ್ರಹ ಮಾಡುವುದಾಗಲಿ/ ಸಾಗಾಣಿಕೆ ಮಾಡುವುದಾಗಲಿ ಇತ್ಯಾದಿಗಳನ್ನು ಪರಿಸರಕ್ಕೆ ಮಾರಕವೆಂದು ರಾಜ್ಯ ಸರ್ಕಾರವು ಈಗಾಗಲೇ ನಿಷೇಧಿಸಿದೆ.

ಈ ಕುರಿತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕಲಬುರಗಿ ಪ್ರಾದೇಶಿಕ ಕಚೇರಿ ವತಿಯಿಂದ ಸಾಕಷ್ಟು ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸಾರ್ವಜನಿಕರು ನಿಷೇಧಿತ ವಿಗ್ರಹಗಳನ್ನು ಪ್ರತಿಷ್ಠಾಪಿಸಬಾರದು.

ಜೇಡಿ ಮಣ್ಣಿನಿಂದ ತಯಾರಿಸಿದ ನೈಸರ್ಗಿಕ ಬಣ್ಣ ಲೇಪಿತ ಮೂರ್ತಿಗಳು ಕಲಬುರಗಿಯ ಅನೇಕ ಸ್ವದೇಶಿ ಮಳಿಗೆಗಳಲ್ಲಿಯೂ ಲಭ್ಯವಿದ್ದು ಜನ ಇಲ್ಲಿಯೂ ಖರೀದಿಗೆ ಮುಂದಾಗಿದ್ದಾರೆ.

PREV

Recommended Stories

ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ