ಕನ್ನಡಪ್ರಭ ವಾರ್ತೆ ಅರಕಲಗೂಡು
ತಾಲೂಕಿನ ರಾಮನಾಥಪುರ ಕಾವೇರಿ ನದಿ ತಟದಲ್ಲಿ ಪ್ರವಾಹ ಪರಿಸ್ಥಿತಿಗೆ ತುತ್ತಾಗಿರುವ ನಿವಾಸಿಗಳಿಗೆ ಶಾಶ್ವತ ಪರಿಹಾರ ಒದಗಿಸಬೇಕು ಎಂದು ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಆಗ್ರಹಿಸಿದರು.ರಾಮನಾಥಪುರದಲ್ಲಿ ಕಾವೇರಿ ನದಿ ಪ್ರವಾಹ ಭೀತಿ ಎದುರಿಸುತ್ತಿರುವ ಪ್ರದೇಶಕ್ಕೆ ಭೇಟಿ ನೀಡಿ ನಿವಾಸಿಗಳ ಸಮಸ್ಯೆ ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾವೇರಿ ನದಿ ದಂಡೆ ಮೇಲೆ ನೆಲೆಸಿರುವ ಇಲ್ಲಿನ ನಿವಾಸಿಗಳು ಪ್ರವಾಹ ಸಂದರ್ಭದಲ್ಲಿ ಪ್ರತಿವರ್ಷ ನೆರೆ ಭೀತಿ ಅನುಭವಿಸುತ್ತಿದ್ದಾರೆ. ಪ್ರವಾಹ ತಲೆದೋರಿದರೆ ತಾತ್ಕಾಲಿಕವಾಗಿ ಗಂಜಿ ಕೇಂದ್ರ ತೆರೆದು ಸಂತ್ರಸ್ಥರನ್ನು ಸಂತೈಸಲಾಗುತ್ತಿದೆ ಹೊರತು ಇವರಿಗೆ ಶಾಶ್ವತ ಪರಿಹಾರ ದೊರಕಿಸಲು ಸಾಧ್ಯವಾಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾವೇರಿ ನದಿ ಪ್ರವಾಹಕ್ಕೆ ಸಿಲುಕಿ ಇಲ್ಲಿನ ನಿವಾಸಿಗಳು ಹಗಲು ರಾತ್ರಿಯೆನ್ನದೆ ಜೀವ ಭಯದಲ್ಲೇ ದಿನದೂಡುವಂತಾಗಿದೆ. ವಾಸದ ಮನೆಗಳನ್ನು ನದಿ ಪ್ರವಾಹ ಆವರಿಸಿದೆ. ವಾಸದ ಮನೆಗಳು ಕುಸಿಯುವ ಭೀತಿ ಇದೆ. ಕಳೆದ ಹಲವಾರು ವರ್ಷಗಳಿಂದ ಇಲ್ಲಿನ ನಿವಾಸಿಗಳು ಅನುಭವಿಸುತ್ತಿರುವ ಸಂಕಷ್ಟ ಗೊತ್ತಿದ್ದರೂ ಶಾಸಕರು ಶಾಶ್ವತ ಪರಿಹಾರ ದೊರಕಿಸಿಕೊಡದೇ ನಿರ್ಲಕ್ಷ್ಯ ವಹಿಸಿರುವುದು ಖಂಡನೀಯ ಎಂದು ಆಕ್ಷೇಪ ವ್ಯಕ್ತಪಡಿಸಿದರು.ಪ್ರವಾಹ ಭೀತಿ ಅನುಭವಿಸುತ್ತಿರುವ ನಿವಾಸಿಗಳಿಗೆ ಮಾತ್ರ ಮನೆ ಹಕ್ಕು ಪತ್ರ ನೀಡಿಲ್ಲ ಎಂದು ಕೆಲ ಮಹಿಳೆಯರು ಅಳಲು ತೋಡಿಕೊಂಡರು. ಹಕ್ಕು ಪತ್ರ ನೀಡಿರುವ ಫಲಾನುಭವಿಗಳಿಗೆ ಇಂದಿಗೂ ನಿವೇಶನ ಖಾತೆ ಮಾಡಿಕೊಡುತ್ತಿಲ್ಲ ಎಂದು ಗ್ರಾಮಸ್ಥರು ದೂರಿದರು. ಗ್ರಾಪಂ ಪಿಡಿಒ ಕುಮಾರಸ್ವಾಮಿ ಅವರನ್ನು ಸ್ಥಳಕ್ಕೆ ಕರೆಸಿದ ಶ್ರೀಧರ್‌ಗೌಡ ಅವರು ಫಲಾನುಭವಿಗಳಿಗೆ ನಿವೇಶನ ಖಾತೆ ಮಾಡಿಕೊಡಲು ನಿಯಮಾನುಸಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.ಪ್ರವಾಹ ಪೀಡಿತ ಪ್ರದೇಶಕ್ಕೆ ಭೇಟಿ: ಇದಕ್ಕೂ ಮುನ್ನ ಕಾಂಗ್ರೆಸ್ ಮುಖಂಡ ಎಚ್.ಪಿ. ಶ್ರೀಧರ್ ಗೌಡ ಅವರು ಪ್ರವಾಹ ಪೀಡಿತ ಮಾದಾಪುರ, ಗೊಬ್ಬಳಿ, ಕಟ್ಟೇಪುರ, ಬಂಡಿಪಾಳ್ಯ, ಮಲ್ಲಿನಾಥಪುರ, ಮಲ್ಲರಾಜಪಟ್ಟಣ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿ ಗ್ರಾಮಸ್ಥರ ಅಹವಾಲು ಆಲಿಸಿದರು. ಕೊಣನೂರು ನಾಡ ಕಚೇರಿ ಉಪ ತಹಸೀಲ್ದಾರ್ ಕುಮಾರ್, ರಾಜಸ್ವ ನಿರೀಕ್ಷಕರಾದ ಬಲರಾಮ್, ಭಾಸ್ಕರ್, ಗ್ರಾಮ ಲೆಕ್ಕಾಧಿಕಾರಿ ಯಾದವ್, ಧರ್ಮೇಶ್, ಗ್ರಾಪಂ ಪಿಡಿಒ ಗಿರೀಶ್ ಇದ್ದರು.