ನದಿಪಾತ್ರದ ರೈತರಿಗಿಲ್ಲ ಹಿಂಗಾರು ಬಿತ್ತನೆಗೆ ನೀರು

KannadaprabhaNewsNetwork | Updated : Dec 15 2023, 01:31 AM IST

ಸಾರಾಂಶ

ಬರದ ಹಿನ್ನೆಲೆ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಿಂಗಾರು ಬಿತ್ತನೆ ಹಾಗೂ ಭತ್ತ ನಾಟಿ ಮಾಡದಂತೆ ರೈತರಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ರೈತರು ಪಂಪ್‌ಸೆಟ್‌ ಮೂಲಕ ನೀರು ಎತ್ತಿ ಭತ್ತ ನಾಟಿ ಮಾಡಲು ಮುಂದಾದರೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ತಾಲೂಕಿನ ತುಂಗಭದ್ರಾ ನದಿ ತೀರದಲ್ಲಿ ಪಂಪ್‌ಸೆಟ್‌ ಮೂಲಕ ರೈತರು ಹಿಂಗಾರು ಬಿತ್ತನೆ ಹಾಗೂ ಭತ್ತ ನಾಟಿ ಮಾಡುವಂತಿಲ್ಲ. ಬರಗಾಲದ ಹಿನ್ನೆಲೆ ಕುಡಿಯುವ ನೀರಿನ ಸಮಸ್ಯೆ ಎದುರಾಗದಂತೆ ಈ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ.

ತಾಲೂಕಿನ ನದಿ ಪಾತ್ರದಲ್ಲಿರುವ ಎಲ್ಲ ಹಳ್ಳಿಗಳಲ್ಲಿ ಹೆಚ್ಚಾಗಿ ಭತ್ತ ನಾಟಿ ಮಾಡುತ್ತಾರೆ. ಇದಕ್ಕೆ ಸಾಕಷ್ಟು ನೀರು ಅಗತ್ಯ. ನದಿಯಲ್ಲಿರುವ ನೀರನ್ನು ಬಳಕೆ ಮಾಡಿಕೊಂಡರೆ ಕುಡಿಯುವ ನೀರಿಗೆ ಕುತ್ತು ಬರಲಿದೆ. ಈಗಾಗಲೇ ಜಿಲ್ಲಾಧಿಕಾರಿಗಳ ನಿರ್ದೇಶನದಂತೆ ತಹಸೀಲ್ದಾರ್‌ ತಾಪಂ ಕಚೇರಿಗೆ ಪತ್ರ ಬರೆದು, ನದಿ ಪಾತ್ರದಲ್ಲಿರುವ ಗ್ರಾಮಗಳಲ್ಲಿ ಹಿಂಗಾರು(ನದಿ ನೀರಿನ ಅವಲಂಬನೆಯಿಂದ) ಬಿತ್ತನೆ ಮಾಡದಂತೆ ಪಿಡಿಒ ಮೂಲಕ ರೈತರಲ್ಲಿ ಜಾಗೃತಿ ಮೂಡಿಸುವ ಜತೆಗೆ ಗ್ರಾಮದಲ್ಲಿ ಡಂಗೂರ ಸಾರಲಿದ್ದಾರೆ.

ಈಗಾಗಲೇ ಸರ್ಕಾರ ಬರ ಘೋಷಣೆ ಮಾಡಿದೆ. ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ. ಕುಡಿಯುವ ನೀರಿಗಾಗಿ ಜನ ಹಾಗೂ ಜಾನುವಾರುಗಳು ಪರದಾಡುವ ಪರಿಸ್ಥಿತಿ ಎದುರಾಗುವ ಸಂಭವವಿದೆ. ಆದ್ದರಿಂದ ಹಿಂಗಾರಿನಲ್ಲಿ ರೈತರು ನದಿ ನೀರು ಬಳಸಿ ಭತ್ತ ನಾಟಿ ಮಾಡದಂತೆ ಎಚ್ಚರ ವಹಿಸಬೇಕಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಭತ್ತಕ್ಕೆ ಭಾರಿ ಬೇಡಿಕೆ:

ಈ ಬಾರಿ ಭತ್ತಕ್ಕೆ ಉತ್ತಮ ಬೆಲೆ ಸಿಕ್ಕಿದೆ. ಇದರಿಂದ ರೈತರು ಭತ್ತ ನಾಟಿ ಮಾಡಲು ನಾ ಮುಂದು ತಾ ಮುಂದು ಎನ್ನುತ್ತಿದ್ದಾರೆ. ಈಗಾಗಲೇ ನದಿಪಾತ್ರದ ಬಹುತೇಕ ರೈತರು ಭತ್ತ ನಾಟಿ ಮಾಡಲು ಸಸಿ ಮಡಿಗಳನ್ನು ಹಾಕಿದ್ದಾರೆ. ಜಮೀನುಗಳನ್ನು ಉ‍ಳುಮೆ ಮಾಡಿಕೊಂಡು ನದಿಯಿಂದ ನೀರೆತ್ತುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇದರಿಂದ ತುಂಗಭದ್ರಾ ನದಿಗೆ ಒಳಹರಿವು ಕಡಿಮೆಯಾಗುತ್ತಿದೆ.

ಬ್ಯಾರೇಜ್‌ನ ನೀರು 2 ತಿಂಗಳು ಮಾತ್ರ:

ಇಲ್ಲಿನ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬ್ಯಾರೇಜಿನಲ್ಲಿ ಕೇವಲ 1.8 ಟಿಎಂಸಿ ಮಾತ್ರ ನೀರು ಸಂಗ್ರಹವಿದೆ. ನದಿಪಾತ್ರದ ಎರಡು ಕಡೆಗೂ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳಿವೆ. ಇದಕ್ಕೆ ನಿತ್ಯ ನದಿನೀರು ಪೂರೈಕೆಯಾಗುತ್ತಿದೆ. ಬ್ಯಾರೇಜಿನಲ್ಲಿರುವ ನೀರು ಎರಡು ತಿಂಗಳು ಮಾತ್ರ ಆಗಲಿದೆ. ಆದ್ದರಿಂದ ಕಾಲುವೆಗೆ ನೀರು ಹರಿಸುತ್ತಿಲ್ಲ. ಜತೆಗೆ ಹೊರಹರಿವು ಇಲ್ಲ ಎನ್ನುತ್ತಾರೆ ಯೋಜನೆಯ ಎಇಇ ರಾಘವೇಂದ್ರ.

ವಿದ್ಯುತ್‌ ಸಂಪರ್ಕ ಕಡಿತ:

ಬರದ ಹಿನ್ನೆಲೆ ಜನ- ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯಾಗದಂತೆ ಹಿಂಗಾರು ಬಿತ್ತನೆ ಹಾಗೂ ಭತ್ತ ನಾಟಿ ಮಾಡದಂತೆ ರೈತರಿಗೆ ಮಾಹಿತಿ ನೀಡಲಾಗಿದೆ. ಒಂದು ವೇಳೆ ರೈತರು ಪಂಪ್‌ಸೆಟ್‌ ಮೂಲಕ ನೀರು ಎತ್ತಿ ಭತ್ತ ನಾಟಿ ಮಾಡಲು ಮುಂದಾದರೆ ವಿದ್ಯುತ್‌ ಸಂಪರ್ಕ ಕಡಿತ ಮಾಡಲು ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ. ನದಿಯಲ್ಲಿನ ನೀರು ಜನ ಜಾನುವಾರುಗಳಿಗೆ ಮಾರ್ಚ್‌, ಏಪ್ರಿಲ್‌ವರೆಗೂ ಬೇಕಾಗುತ್ತದೆ. ಆದ್ದರಿಂದ ನೀರಿನ ಸಮಸ್ಯೆ ಆಗದಂತೆ ಮುನ್ನೆಚ್ಚರಿಕೆ ಕ್ರಮ ವಹಿಸಲಾಗಿದೆ ಎನ್ನುತ್ತಾರೆ ತಹಸೀಲ್ದಾರ್‌ ಕೆ. ಶರಣಮ್ಮ.

ಆದೇಶ ಬಂದಿಲ್ಲ:

ನದಿಪಾತ್ರದಲ್ಲಿರುವ ರೈತರ ಪಂಪ್‌ಸೆಟ್‌ಗಳಿಗೆ ವಿದ್ಯುತ್‌ ಸಂಪರ್ಕ ಕಡಿತ ಮಾಡಬೇಕೆಂದು ಮೇಲಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಿಂದ ನಮಗೆ ಈವರೆಗೂ ಯಾವುದೇ ಪತ್ರ ಬಂದಿಲ್ಲ. ಆದೇಶ ಬಂದ ಕೂಡಲೇ ವಿದ್ಯುತ್‌ ಸಂಪರ್ಕ ಕಡಿತಕ್ಕೆ ಕಾರ್ಯಪ್ರವೃತ್ತರಾಗುತ್ತೇವೆ ಎಂದರು ಜೆಸ್ಕಾಂ ಎಇಇ ಕೇದಾರನಾಥ ಗದುಗಿನ.

Share this article