ಅನುದಾನ ದುರುಪಯೋಗ ಕುರಿತು ತನಿಖೆಯಾಗಲಿ

KannadaprabhaNewsNetwork |  
Published : Dec 15, 2023, 01:30 AM ISTUpdated : Dec 15, 2023, 01:31 AM IST
ಮಮ | Kannada Prabha

ಸಾರಾಂಶ

ಮುಜರಾಯಿ ಇಲಾಖೆಯಿಂದ ಪಟ್ಟಣದ ಮುಪ್ಪಿನೇಶ್ವರ ವಿರಕ್ತಮಠಕ್ಕೆ ಬಿಡುಗಡೆಯಾದ ಹಣವನ್ನು ಆಡಳಿತ ಮಂಡಳಿ ದುರುಪಯೋಗಪಡಿಸಿಕೊಂಡಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಕೀಲ ಸುರೇಶ ಛಲವಾದಿ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರದೀಪ ಜಾಧವ ಮಾತನಾಡಿ, ಮಠದ ಚಾರಿತ್ರ್ಯಕ್ಕೆ ಧಕ್ಕೆ ತಂದಿರುವ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಇಲ್ಲದಿದ್ದಲ್ಲಿ ಶ್ರೀಮಠದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು.

ಬ್ಯಾಡಗಿ: ಮುಜರಾಯಿ ಇಲಾಖೆಯಿಂದ ಪಟ್ಟಣದ ಮುಪ್ಪಿನೇಶ್ವರ ವಿರಕ್ತಮಠಕ್ಕೆ ಬಿಡುಗಡೆಯಾದ ಹಣವನ್ನು ಆಡಳಿತ ಮಂಡಳಿ ದುರುಪಯೋಗಪಡಿಸಿಕೊಂಡಿದ್ದು, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ವಕೀಲ ಸುರೇಶ ಛಲವಾದಿ ನೇತೃತ್ವದಲ್ಲಿ ಪಟ್ಟಣದ ಸಾರ್ವಜನಿಕರು ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸುರೇಶ, ಮುಪ್ಪಿನಸ್ವಾಮಿ ವಿರಕ್ತಮಠಕ್ಕೆ 2022-23ನೇ ಸಾಲಿನಲ್ಲಿ ಮುಜರಾಯಿ ಇಲಾಖೆಯಿಂದ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಹಿಂದಿನ ಸರ್ಕಾರ ₹50 ಲಕ್ಷ ಮಂಜೂರು ಮಾಡಿತ್ತಲ್ಲದೇ, ಈ ಪೈಕಿ ಮೊದಲ ಕಂತಿನ ಬಾಬತ್ತು ₹25 ಲಕ್ಷ ಹಣ ಬಿಡುಗಡೆಗೊಳಿಸಿತ್ತು. ಆದರೆ ಆಡಳಿತ ಮಂಡಳಿ ಪದಾಧಿಕಾರಿಗಳು ಹೆಚ್ಚೆಂದರೆ ನಾಲ್ಕೈದು ಲಕ್ಷ ರು. ಮಾತ್ರ ಖರ್ಚು ಮಾಡಿದ್ದಾಗಿ ಮಾಹಿತಿ ಲಭ್ಯವಾಗಿದೆ. ಇನ್ನುಳಿದ ಮೊತ್ತವನ್ನು ಸ್ವಂತಕ್ಕೆ ಬಳಸಿಕೊಂಡು ಅವ್ಯವಹಾರ ನಡೆಸಿದ್ದು, ಕೂಡಲೇ ಸೂಕ್ತ ತನಿಖೆ ನಡೆಸುವಂತೆ ಆಗ್ರಹಿಸಿದರು.

ಸಮಗ್ರ ತನಿಖೆ ನಡೆಸಲಿ: ಪಾಂಡುರಂಗ ಸುತಾರ ಮಾತನಾಡಿ, ಮುಪ್ಪಿನಸ್ವಾಮಿ ವಿರಕ್ತಮಠಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಚಿತ್ರದುರ್ಗದ ಜಯದೇವ ಜಗದ್ಗುರು ಬೃಹನ್ಮಠದ ಶಾಖಾಮಠವಾಗಿದ್ದು, ಇಲ್ಲಿದ್ದ ವಸತಿ ನಿಲಯದಲ್ಲಿ ನಾಡೋಜ ಪಾಟೀಲ ಪುಟ್ಟಪ್ಪ ಸೇರಿದಂತೆ ಮಹಾನ್ ವ್ಯಕ್ತಿಗಳು ಅನ್ನ ಮತ್ತು ಶಿಕ್ಷಣ ದಾಸೋಹ ಪಡೆದಿದ್ದಾರೆ. ಆದರೆ ಇಂತಹ ಉತ್ತಮ ಹೆಸರನ್ನು ಪಡೆದಿರುವ ಶ್ರೀಮಠಕ್ಕೆ ಕಳಂಕ ತರುವ ನಿಟ್ಟಿನಲ್ಲಿ ಆಡಳಿತ ಮಂಡಳಿ ಹಣವನ್ನು ದುರುಪಯೋಗಪಡಿಸಿಕೊಂಡು ಸುಳ್ಳು ದಾಖಲೆ ತೋರಿಸಿ ಸರ್ಕಾರ ಸೇರಿದಂತೆ ಸಾರ್ವಜನಿಕರಿಗೆ ಮೋಸವೆಸಗಿದ್ದಾಗಿ ಆರೋಪಿಸಿದರು.ತನಿಖೆ ನಡೆಸದೇ ಬಿಡುಗಡೆಗೊಳಿಸಬೇಡಿ: ವಿನಾಯಕ ಕಂಬಳಿ ಮಾತನಾಡಿ, ಈಗಾಗಲೇ ಬಿಡುಗಡೆ ಮಾಡಿರುವ ಹಣವನ್ನು ಮಠದಲ್ಲಿ ಯಾವುದೇ ಅಭಿವೃದ್ಧಿ ಮಾಡದೇ ಅವ್ಯವಹಾರ ಮಾಡಿರುವ ಆಡಳಿತ ಮಂಡಳಿ ಪದಾಧಿಕಾರಿಗಳು ಇದೀಗ ಉಳಿದ ₹25 ಲಕ್ಷ ಹಣ ಬಿಡುಗಡೆ ಮಾಡುವಂತೆ ತಹಸೀಲ್ದಾರಗೆ ಮನವಿ ಸಲ್ಲಿಸಿದ್ದಾರೆ. ಕೂಡಲೇ ಜಿಲ್ಲಾಧಿಕಾರಿ ಮಧ್ಯಪ್ರವೇಶಿಸಿ ಮೊದಲು ಬಿಡುಗಡೆ ಮಾಡಿದ ₹25 ಲಕ್ಷದ ಸೂಕ್ತ ತನಿಖೆ ನಡೆಸಬೇಕು ಮತ್ತು ಯಾವುದೇ ಕಾರಣಕ್ಕೂ ಇನ್ನುಳಿದ ₹25 ಲಕ್ಷ ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿದರು.

ಅನಿರ್ದಿಷ್ಟಾವಧಿ ಪ್ರತಿಭಟನೆ: ಪ್ರದೀಪ ಜಾಧವ ಮಾತನಾಡಿ, ಮಠದ ಚಾರಿತ್ರ್ಯಕ್ಕೆ ಧಕ್ಕೆ ತಂದಿರುವ ಆಡಳಿತ ಮಂಡಳಿ ವಿರುದ್ಧ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಇಲ್ಲದಿದ್ದಲ್ಲಿ ಶ್ರೀಮಠದ ಎದುರು ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಈ ವೇಳೆ ಚಂದ್ರಶೇಖರ ಆಯೋಜಿ, ಗಣೇಶ, ಎನ್.ಜಿ. ಮೋಟೆಬೆನ್ನೂರ, ಎಂ.ಜೆ. ಪಾಟೀಲ ಭಾಗವಹಿಸಿದ್ದರು.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ