ನದಿ ಜೋಡಣೆ: ವಿಜ್ಞಾನಿಗಳೊಂದಿಗೆ ಸಭೆ- ಸಿಎಂ ಸಿದ್ದರಾಮಯ್ಯ ಭರವಸೆ

KannadaprabhaNewsNetwork |  
Published : Nov 01, 2025, 02:45 AM IST
ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ನೀಡಿರುವ ಅನುಮತಿಯನ್ನು ಹಿಂಪಡೆಯಬೇಕು ಎಂದು ಸಂಸದರನ್ನೊಳಗೊಂಡ ತಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿತು | Kannada Prabha

ಸಾರಾಂಶ

ಬೇಡ್ತಿ ಮತ್ತು ಅಘನಾಶಿನಿ ಕಣಿವೆಗಳ ನದಿ ತಿರುವು ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯಬೇಕು.

ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪರಿಸರ ಸಂಘಟನೆಗಳ ಪ್ರಮುಖರು ಮುಖ್ಯಮಂತ್ರಿ ಜೊತೆ ವಿಶೇಷ ಸಮಾಲೋಚನೆ

ಕನ್ನಡಪ್ರಭ ವಾರ್ತೆ ಶಿರಸಿ

ಬೇಡ್ತಿ ಮತ್ತು ಅಘನಾಶಿನಿ ಕಣಿವೆಗಳ ನದಿ ತಿರುವು ಯೋಜನೆಗಳನ್ನು ರಾಜ್ಯ ಸರ್ಕಾರ ಕೈಬಿಡಬೇಕು. ಶರಾವತಿ ಪಂಪ್ಡ್‌ ಸ್ಟೋರೇಜ್‌ ಯೋಜನೆಗೆ ನೀಡಿರುವ ಅನುಮತಿ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬೇಡ್ತಿ-ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಬೆಂಗಳೂರಿನ ವಿಧಾನಸೌಧದ ಮುಖ್ಯಮಂತ್ರಿ ಕಚೇರಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಪರಿಸರ ಸಂಘಟನೆಗಳ ಪ್ರಮುಖರು ಮುಖ್ಯಮಂತ್ರಿ ಜೊತೆ ವಿಶೇಷ ಸಮಾಲೋಚನೆ ನಡೆಸಿ ಪಶ್ಚಿಮಘಟ್ಟದ ಸಂರಕ್ಷಣೆಗೆ ಒತ್ತಾಯ ಮಾಡಿದರು.

ಈ ಸಂದರ್ಭ ಮಾತನಾಡಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಉತ್ತರ ಕನ್ನಡ ಜಿಲ್ಲೆ ಈಗಾಗಲೇ ಹತ್ತಾರು ಬೃಹತ್‌ ಯೋಜನೆಗಳ ಭಯದಿಂದ ನಲುಗಿ ಹೋಗಿದೆ. ಪರಿಸರ ಧಾರಣ ಸಾಮರ್ಥ್ಯ ಮುಗಿದಿದೆ. ಬೇಡ್ತಿ-ಅಘನಾಶಿನಿ-ಶರಾವತಿ ಯೋಜನೆಗಳು ಜಾರಿಯಾದರೆ ಭಾರೀ ಅವಘಡಗಳು ನಡೆಯುವ ಗಂಭೀರ ಪರಿಸ್ಥಿತಿ ಉಂಟಾಗಲಿದೆ ಎಂದು ಹೇಳಿದರು.

ನದಿ ತಿರುವು ಯೋಜನೆ ನಿಲ್ಲಿಸಲು ಶಾಸಕ ಶಿವರಾಮ್‌ ಹೆಬ್ಬಾರ ಮನವಿ ಮಾಡಿದರು.

ಶಾಸಕ ಭೀಮಣ್ಣ ನಾಯ್ಕ, ಈ ಯೋಜನೆಯಿಂದ ಬೇಡ್ತಿ-ಅಘನಾಶಿನಿ-ಶರಾವತಿ ನದಿಗಳಲ್ಲಿ ನೀರೇ ಇಲ್ಲದ ಪರಿಸ್ಥಿತಿ ಬರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ವನವಾಸಿಗಳ ಪರಿಸ್ಥಿತಿ ವನಗಳ ನಾಶದಿಂದ ಸಂಕಷ್ಟಕ್ಕೆ ಈಡಾಗಲಿದೆ. ನದಿ ಕಣಿವೆಗಳ ಎಲ್ಲ ಜನ ಸಮುದಾಯಗಳು, ಜೀವ ವೈವಿಧ್ಯಕ್ಕೆ ಕುತ್ತು ಬರಲಿದೆ ಎಂದು ವಿಧಾನಪರಿಷತ್‌ ಸದಸ್ಯ ಶಾಂತಾರಾಮ ಸಿದ್ದಿ ಹೇಳಿದರು.

ಬೇಡ್ತಿ-ಅಘನಾಶಿನಿ ಸಮಿತಿಯ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಪಶ್ಚಿಮಘಟ್ಟದಲ್ಲಿ ಬೇಡ್ತಿ - ಅಘನಾಶಿನಿ - ಶರಾವತಿ ನದಿ ಯೋಜನೆಗಳನ್ನು ಸ್ಥಗಿತಗೊಳಿಸಿ, ವಿಜ್ಞಾನಿಗಳು, ಜನಪ್ರತಿನಿಧಿಗಳು ಸಂಘಟನೆಗಳ ಜೊತೆ ವಿಶೇಷ ಪುನಃ ವಿಮರ್ಶೆ ಮಾಡಬೇಕೆಂದು ಮನವಿ ಮಾಡಿದರು.

ಸ್ವರ್ಣವಲ್ಲೀ ಸ್ವಾಮೀಜಿಯವರ ನೇತೃತ್ವದಲ್ಲಿ ಜನಾಂದೋಲನ ನಡೆಯುತ್ತಿದೆ ಎಂಬ ಸಂಗತಿಯನ್ನು ವಿ.ಎನ್‌. ಹೆಗಡೆ ಬೊಮ್ಮನಳ್ಳಿ ಮುಖ್ಯಮಂತ್ರಿ ಗಮನಕ್ಕೆ ತಂದರು.

ಮನವಿ ಸ್ವೀಕರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಬೇಡ್ತಿ-ಅಘನಾಶಿನಿ-ಶರಾವತಿ ಯೋಜನೆಗಳ ಕುರಿತು ಸಂಬಂಧಿಸಿದ ಇಲಾಖೆಗಳ ಜೊತೆ ಚರ್ಚಿಸಿ ತಮ್ಮೆಲ್ಲರ ಜೊತೆಗೆ, ವಿಜ್ಞಾನಿಗಳೊಂದಿಗೆ ಸಭೆ ಏರ್ಪಡಿಸುವುದಾಗಿ ಭರವಸೆ ನೀಡಿದರು.

ನಿಯೋಗದಲ್ಲಿ ವೆಂಕಟೇಶ ನಾಯ್ಕ, ಬಾಲಚಂದ್ರ ಸಾಯಿಮನೆ, ಬೆಂಗಳೂರಿನ ರಮೇಶ ಭಟ್, ನರಹರಿ ಇದ್ದರು.

PREV

Recommended Stories

ಇಂದಿರಾರ ಆದರ್ಶವನ್ನು ಎಲ್ಲರೂ ಪಾಲಿಸಬೇಕು : ಸಿದ್ದರಾಮಯ್ಯ
ಕುಡಚಿ ಶಾಸಕ ಪುತ್ರಗೆ ಡಿಕೆಶಿಯಿಂದ ‘ಶಿವಕುಮಾರ್‌’ ಎಂದು ನಾಮಕರಣ!