ನದಿ ತೀರ ಕಲುಷಿತ ಆತಂಕಕಾರಿ: ಶಾಂತ ಮಲ್ಲಿಕಾರ್ಜುನ ಶ್ರೀ

KannadaprabhaNewsNetwork |  
Published : Oct 27, 2026, 02:45 AM IST
ರಥಯಾತ್ರೆ | Kannada Prabha

ಸಾರಾಂಶ

ನಾಗರಿಕತೆ ಮತ್ತು ಸಂಸ್ಕೃತಿಯ ಉಗಮ ಸ್ಥಾನವಾದ ನದಿ ತೀರಗಳು ತ್ಯಾಜ್ಯ ಮೂಲಕ ಕಲುಷಿತಗೊಳ್ಳುವುದರೊಂದಿಗೆ ಬರಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯವ್ಯಕ್ತಪಡಿಸಿದರು.

ಕುಶಾಲನಗರ : ನಾಗರಿಕತೆ ಮತ್ತು ಸಂಸ್ಕೃತಿಯ ಉಗಮ ಸ್ಥಾನವಾದ ನದಿ ತೀರಗಳು ತ್ಯಾಜ್ಯ ಮೂಲಕ ಕಲುಷಿತಗೊಳ್ಳುವುದರೊಂದಿಗೆ ಬರಡಾಗುತ್ತಿರುವುದು ಆತಂಕಕಾರಿ ಬೆಳವಣಿಗೆ ಎಂದು ವಿರಾಜಪೇಟೆ ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯವ್ಯಕ್ತಪಡಿಸಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಮತ್ತು ಅಖಿಲ ಭಾರತೀಯ ಸನ್ಯಾಸಿ ಸಂಘ ಆಶ್ರಯದಲ್ಲಿ ಕಾವೇರಿ ರಿವರ್ ವಾಟರ್ ಪ್ರೊಟೆಕ್ಷನ್ ಟ್ರಸ್ಟ್, ಕಾವೇರಿ ರಿವರ್ ಸೇವಾ ಟ್ರಸ್ಟ್ ಹಾಗೂ ನಮಾಮಿ ಕಾವೇರಿ ಸಹಯೋಗದೊಂದಿಗೆ ಸ್ವಚ್ಛ ಕಾವೇರಿಗಾಗಿ 16ನೇ ವರ್ಷದ ತಲಕಾವೇರಿ ಪೂಂಪ್ ಹಾರ್ ಕಾವೇರಿ ಜಾಗೃತಿ ರಥಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಮುಂದಿನ ತಲೆಮಾರಿಗೆ ನಾವುಗಳು ಬರಡು ಭೂಮಿಯನ್ನು ಹಸ್ತಾಂತರಿಸುವ ಪರಿಸ್ಥಿತಿ ಕಂಡುಬರುತ್ತದೆ. ಬೊಗಸೆ ಕೈಯಲ್ಲಿ ಕುಡಿಯುತ್ತಿದ್ದ ಜಲಮೂಲಗಳನ್ನು ಕಲುಷಿತಗೊಳಿಸಿ ಬಾಟಲ್ ನೀರಿಗೆ ಮೊರೆ ಹೋಗುತ್ತಿರುವ ದಿನಗಳು ನಮ್ಮ ಮುಂದಿವೆ ಎಂದು ಸ್ವಾಮೀಜಿ ನಾಗರಿಕರು ಅನಾಗರಿಕರಾಗಿ ವರ್ತನೆ ಮಾಡುತ್ತಿರುವುದೇ ಇದಕ್ಕೆ ಕಾರಣವಾಗಿದೆ ಎಂದು ಹೇಳಿದರು. ಹರಿದ್ವಾರ ಅಖಂಡ ಪುರಂದಾಂ ಸ್ವಾಮೀಜಿ ಅನಂತಾನಂದ ಗಿರಿ ಮಹಾರಾಜ್ ಮಾತನಾಡಿ, ಆರಾಧನೆ ಮೂಲಕ ನದಿ ಜಲಮೂಲಗಳು ಪ್ರಕೃತಿಯ ಸಂರಕ್ಷಣೆ ಸಾಧ್ಯ ಎಂದರು. ಅಖಿಲ ಭಾರತೀಯ ಸನ್ಯಾಸಿ ಸಂಘದ ಸ್ಥಾಪಕ ರಮಾನಂದ ಮಹಾರಾಜ್ ನೇತೃತ್ವದಲ್ಲಿ ಆಗಮಿಸಿದ 30ಕ್ಕೂ ಅಧಿಕ ಸಾಧು ಸಂತರು ಕಾವೇರಿ ಮೂರ್ತಿಗೆ ಪೂಜೆ ಹಾಗೂ ಕುಂಡಿಕೆಯಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು. 2028 ರಲ್ಲಿ ಕುಂಭಕೋಣಂ ಕ್ಷೇತ್ರದಲ್ಲಿ ನಡೆಯುವ ಕುಂಭಮೇಳದ ಭಿತ್ತಿ ಪತ್ರಗಳಿಗೆ ಕ್ಷೇತ್ರದಲ್ಲಿ ಚಾಲನೆ ನೀಡಲಾಯಿತು.

ತಲಕಾವೇರಿ ಕ್ಷೇತ್ರದ ತಕ್ಕರಾದ ಕೋಡಿ ಮೋಟಯ್ಯ ಯಾತ್ರೆಗೆ ಶುಭ ಕೋರಿ ಸ್ವಚ್ಛ ಕಾವೇರಿಗಾಗಿ ಪ್ರತಿಯೊಬ್ಬರು ಕೈಜೋಡಿಸುವಂತೆ ಕರೆ ನೀಡಿದರು.

ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ರಾಜ್ಯ ಸಂಚಾಲಕ ಎಂ ಎನ್ ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ತಲಕಾವೇರಿ ಕ್ಷೇತ್ರದಿಂದ ಆರಂಭಗೊಳ್ಳುವ ಕಾವೇರಿ ಜಾಗೃತಿ ರಥಯಾತ್ರೆಯಲ್ಲಿ 50ಕ್ಕೂ ಅಧಿಕ ಸಾಧು ಸಂತರು ಕಾರ್ಯಕರ್ತರು ಪಾಲ್ಗೊಳ್ಳುತ್ತಿದ್ದು ಕೊಡಗು ಜಿಲ್ಲೆಯ ಭಾಗಮಂಡಲ ಕುಶಾಲನಗರ ಕಣಿವೆ ವ್ಯಾಪ್ತಿಯಲ್ಲಿ ಕಾವೇರಿ ನದಿಗೆ ಆರತಿ ಕಾರ್ಯಕ್ರಮ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ಮತ್ತು ಸ್ವಚ್ಛತಾ ಅಭಿಯಾನದ ಬಗ್ಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಕೊಡಗು ಜಿಲ್ಲೆ ಸೇರಿದಂತೆ ಹಾಸನ, ಮಂಡ್ಯ, ಮೈಸೂರು ಚಾಮರಾಜನಗರ ಬೆಂಗಳೂರು ವ್ಯಾಪ್ತಿಯಲ್ಲಿ ಜಾಗೃತಿ ಯಾತ್ರೆ ತೆರಳಲಿದ್ದು ಜನರಿಗೆ ಜಲಮೂಲಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ನ.17ರಂದು ತಮಿಳುನಾಡಿನ ಪೂಂಪ್ ಹಾರ್ ನಲ್ಲಿ ಕಾವೇರಿ ಮತ್ತು ಬಂಗಾಲ ಕೊಲ್ಲಿ ಸಮುದ್ರ ಸಂಗಮದಲ್ಲಿ ವಿಶೇಷ ಕಾರ್ಯಕ್ರಮ ಮೂಲಕ ಸಮಾರೋಪದಲ್ಲಿ ಕಾವೇರಿ ತೀರ್ಥ ವಿಸರ್ಜನಾ ಕಾರ್ಯ ನಡೆಯಲಿದೆ ಎಂದರು.ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆಗೊಂಡಿರುವ ಕುಶಾಲನಗರದ ಕೊಡಗನ ಹರ್ಷ ಅವರನ್ನು ಸ್ವಾಮೀಜಿಗಳು ಸನ್ಮಾನಿಸಿ ಗೌರವಿಸಿದರು.

ಅಖಿಲ ಭಾರತೀಯ ಸನ್ಯಾಸಿ ಸಂಘದ ಪ್ರಮುಖರಾದ ಸ್ವಾಮಿ ವೇದಾನಂದ ಸ್ವಾಮಿ ಆತ್ಮಾನಂದ ಸರಸ್ವತಿ ಸ್ವಾಮಿ ಶಿವರಾಮನಂದ ಮತ್ತು ಕಾರ್ಯಕ್ರಮ ಸಂಯೋಜಕರಾದ ಸ್ವಾಮಿ ಬಾಲ ರಘುನಾಥನಂದ, ಕಾವೇರಿ ನದಿ ಸ್ವಚ್ಛತಾ ಆಂದೋಲನದ ತಮಿಳುನಾಡು ಪ್ರಾಂತ್ಯದ ಸಂಚಾಲಕರಾದ ವಾಸು ರಾಮಚಂದ್ರನ್, ನಮಾಮಿ ಕಾವೇರಿ ಜಿಲ್ಲಾ ಪ್ರಮುಖರಾದ ವಿಠಲ ಸಾಲಿಯಾನ್, ವನಿತಾ ಚಂದ್ರಮೋಹನ್, ಸುಮನಾ ಮಳಲಗದ್ದೆ, ಧರಣಿ, ಚೈತನ್ಯ, ಮತ್ತು ಸನ್ಯಾಸಿ ಸಂಘದ ಸದಸ್ಯರು ಸ್ವಚ್ಛತಾ ಆಂದೋಲನ ಸಮಿತಿ ನಮಾಮಿ ಕಾವೇರಿ ಪ್ರಮುಖರು ಇದ್ದರು. ತಂಡ ಭಾಗಮಂಡಲ ಸಂಗಮ ಕ್ಷೇತ್ರದಲ್ಲಿ ಕಾವೇರಿ ಹಾಗೂ ಗಣಪತಿ ಮೂರ್ತಿಗೆ ಅಷ್ಟಾಭಿಷೇಕ ಮತ್ತು ವಿಶೇಷ ಪೂಜೆ ಸಲ್ಲಿಸಿ ಆರತಿ ಬೆಳಗಿದರು. ನಂತರ ಕಾವೇರಿ ಜಾಗೃತಿ ರಥಯಾತ್ರೆ ಕುಶಾಲನಗರದತ್ತ ತೆರಳಿ ಸಂಜೆ 191ನೆಯ ಮಹಾ ಆರತಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕಡಲತಡಿಯಿಂದ ಕಾಶ್ಮೀರಕ್ಕೆ ಆಟೋ ಜೈತ್ರ ಯಾತ್ರೆ!
ಜಗತ್ತಿಗೆ ರಾಮನ ಆದರ್ಶ ತಿಳಿಸಿದವರು ವಾಲ್ಮೀಕಿ: ಯಶ್‌ಪಾಲ್ ಸುವರ್ಣ