ರಸ್ತೆ ಅಪಘಾತ ಏಡ್ಸ್‌ಗಿಂತಲೂ ಮಹಾ ಕಾಯಿಲೆ: ನ್ಯಾ. ಯೋಗೇಶ್ ಆತಂಕ

KannadaprabhaNewsNetwork |  
Published : Dec 08, 2024, 01:18 AM IST
7ಕೆಎಂಎನ್ ಡಿ29 | Kannada Prabha

ಸಾರಾಂಶ

ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ವಿಶ್ವದಾದ್ಯಂತ ಬಹಳ ವೇಗವಾಗಿ ಹರಡಿದ ಕೊರೋನಾ ಎಂಬ ಮಹಾಮಾರಿಗೆ ಸಾಕಷ್ಟು ಸಾವು- ನೋವುಗಳು ಸಂಭವಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಏಡ್ಸ್ ಸೋಂಕು ಹರಡಿದ್ದರೆ ಪ್ರಪಂಚವೇ ಸರ್ವನಾಶವಾಗುತ್ತಿತ್ತು. ಅತ್ಯಮೂಲ್ಯ ಬದುಕನ್ನು ಪಡೆದು ಭೂಮಿಗೆ ಬಂದಿರುವ ಪ್ರತಿಯೊಬ್ಬರೂ ಸರಿಯಾದ ಮಾರ್ಗದಲ್ಲಿ ನಡೆಯಬೇಕಿದೆ.

ಕನ್ನಡಪ್ರಭ ವಾರ್ತೆ ನಾಗಮಂಗಲ

ಏಡ್ಸ್‌ಗಿಂತ ಮಹಾ ಕಾಯಿಲೆ ರಸ್ತೆ ಅಪಘಾತವಾಗಿದೆ. ಲಕ್ಷಾಂತರ ಮಂದಿ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ ಎಂದು ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಹಿರಿಯ ಸಿವಿಲ್ ನ್ಯಾಯಾಧೀಶ ಯೋಗೇಶ್ ಆತಂಕ ವ್ಯಕ್ತಪಡಿಸಿದರು.

ಪಟ್ಟಣದ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಅಭಿಯೋಜನಾ ಇಲಾಖೆ ಮತ್ತು ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯ ಸಹಭಾಗಿತ್ವದಲ್ಲಿ ಆಯೋಜಿಸಿದ್ದ ವಿಶ್ವ ಏಡ್ಸ್ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸರ್ಕಾರ ಪ್ರತಿವರ್ಷ ಜನರಲ್ಲಿ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವ ಕುರಿತು ಅರಿವು ಮೂಡಿಸುವ ಸಲುವಾಗಿ 40 ಸಾವಿರ ಕೋಟಿ ಹಣ ಖರ್ಚು ಮಾಡುತ್ತಿದ್ದರೂ ಸಹ ರಸ್ತೆ ಅಪಘಾತದಲ್ಲಿ 1.68 ಲಕ್ಷ ಜನರು ಮೃತಪಟ್ಟಿರುತ್ತಾರೆ. ಈ ಪೈಕಿ 30 ಸಾವಿರ ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಮೃತಪಟ್ಟಿರುವುದು ದುರಾದೃಷ್ಟ ಎಂದರು.

ಏಡ್ಸ್‌ಗಿಂತ ಮಹಾ ಕಾಯಿಲೆ ಯಾವುದೆಂದರೆ ಅದು ರಸ್ತೆ ಅಪಘಾತ. ಹಾಗಾಗಿ ಬೈಕ್ ಸವಾರರು ತಮ್ಮ ಅತ್ಯಮೂಲ್ಯವಾದ ಜೀವ ರಕ್ಷಣೆಗಾಗಿ ಕಡ್ಡಾಯವಾಗಿ ಹೆಲ್ಮೆಟ್ ಧರಿಸಿಯೇ ಬೈಕ್ ಚಾಲನೆ ಮಾಡಬೇಕು ಎಂದು ಸಲಹೆ ನೀಡಿದರು.

ಏಡ್ಸ್ ಎಂಬ ಮಾರಕ ರೋಗವು ಮನುಷ್ಯನ ದೇಹದ ರೋಗನಿರೋಧಕ ಶಕ್ತಿಯನ್ನು ಹಾಳು ಮಾಡುತ್ತದೆ. ಈ ರೋಗವನ್ನು ತಡೆಗಟ್ಟಲು ಪ್ರತಿಯೊಬ್ಬರೂ ಆರೋಗ್ಯ ಸುರಕ್ಷತಾ ಕ್ರಮವಹಿಸಬೇಕು ಎಂದು ಸಲಹೆ ನೀಡಿದರು.

ರಾಜ್ಯದಲ್ಲಿ ಏಡ್ಸ್ ಸೋಂಕಿತರ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಿರುವುದು ತಿಳಿದು ಬಂದಿದೆ. ಸರ್ಕಾರ ಮತ್ತು ಆರೋಗ್ಯ ಇಲಾಖೆ ಏಡ್ಸ್ ನಿಯಂತ್ರಿಸುವ ಕುರಿತು ಜನರಲ್ಲಿ ಅರಿವು ಮೂಡಿಸುವ ಮೂಲಕ ಒಳ್ಳೆಯ ಕೆಲಸ ಮಾಡಿದೆ ಎಂದರು.

ಎಚ್‌ಐವಿ ಎಂಬ ವೈರಾಣುವಿನಿಂದ ಬರುವ ಏಡ್ಸ್ ರೋಗಕ್ಕೆ ಆರಂಭದಲ್ಲಿ ಚಿಕಿತ್ಸೆ ಇರಲಿಲ್ಲ. ಈಗ ಅದರ ಪ್ರಮಾಣವನ್ನು ಕಡಿಮೆ ಮಾಡುವಂತಹ ಔಷಧಿಗಳು ಬಂದಿವೆ. ಆದರೂ ಸಹ ಉತ್ತಮ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ನಿರಂತರವಾಗಿ ನಡೆಯಬೇಕಿದೆ ಎಂದರು.

ಕಳೆದ ಮೂರ್‍ನಾಲ್ಕು ವರ್ಷಗಳ ಹಿಂದೆ ವಿಶ್ವದಾದ್ಯಂತ ಬಹಳ ವೇಗವಾಗಿ ಹರಡಿದ ಕೊರೋನಾ ಎಂಬ ಮಹಾಮಾರಿಗೆ ಸಾಕಷ್ಟು ಸಾವು- ನೋವುಗಳು ಸಂಭವಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ. ಅದೇ ರೀತಿ ಏಡ್ಸ್ ಸೋಂಕು ಹರಡಿದ್ದರೆ ಪ್ರಪಂಚವೇ ಸರ್ವನಾಶವಾಗುತ್ತಿತ್ತು. ಅತ್ಯಮೂಲ್ಯ ಬದುಕನ್ನು ಪಡೆದು ಭೂಮಿಗೆ ಬಂದಿರುವ ಪ್ರತಿಯೊಬ್ಬರೂ ಸರಿಯಾದ ಮಾರ್ಗದಲ್ಲಿ ನಡೆಯಬೇಕಿದೆ ಎಂದು ಹೇಳಿದರು.

ವಿಶ್ವ ಏಡ್ಸ್ ದಿನಾಚರಣೆ ವಿಷಯ ಕುರಿತು ಸಾರ್ವಜನಿಕ ಆಸ್ಪತ್ರೆಯ ಚರ್ಮರೋಗ ತಜ್ಞ ಡಾ.ವಿನೋದ್ ಉಪನ್ಯಾಸ ನೀಡಿದರು. ತಾಲೂಕು ವಕೀಲರ ಸಂಘದ ಅಧ್ಯಕ್ಷ ಮಹದೇವ, ವಕೀಲ ಹಡೇನಹಳ್ಳಿ ಉಮೇಶ್ ಮಾತನಾಡಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಬಿ.ಎಚ್.ರಮೇಶ್ ಅಧ್ಯಕ್ಷತೆ ವಹಿಸಿದ್ದರು.

ಇದಕ್ಕೂ ಮುನ್ನ ಪಟ್ಟಣದ ಟಿ.ಬಿ.ಬಡಾವಣೆಯ ಬಿಜಿಎಸ್ ವೃತ್ತದಲ್ಲಿ ಆಯೋಜಿಸಿದ್ದ ಏಡ್ಸ್ ನಿಯಂತ್ರಿಸುವ ಕುರಿತಾದ ಜನಜಾಗೃತಿ ಜಾಥಾಗೆ ನ್ಯಾಯಾಧೀಶ ಯೋಗೇಶ್ ಮತ್ತು ಗಣ್ಯರು ಚಾಲನೆ ನೀಡಿದರು. ಬಳಿಕ ಚಾಮರಾಜನಗರ - ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜಾಥಾ ನಡೆಸಿ ಜನರಲ್ಲಿ ಅರಿವು ಮೂಡಿಸಲಾಯಿತು.

ಅಪರ ಸರ್ಕಾರಿ ವಕೀಲ ಪಿ.ಸಿ.ಮಂಜುನಾಥ್, ಸಹಾಯಕ ಸರ್ಕಾರಿ ಅಭಿಯೋಜಕಿ ಅರುಣಾಬಾಯಿ, ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಎಸ್.ಸಿದ್ದಲಿಂಗಯ್ಯ, ಕಾನೂನು ಸೇವಾ ಸಮಿತಿಯ ಸಿಬ್ಬಂದಿ ಸೋನುಮೂರ್ತಿ ಸೇರಿ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಇದ್ದರು.

PREV

Recommended Stories

ವಿಕ್ಟೋರಿಯಾ ಆಸ್ಪತ್ರೆಗೆ ಸಿದ್ದರಾಮಯ್ಯ ದಿಢೀರ್ ಭೇಟಿ
ಇಂದು ಫಲಪುಷ್ಪ ಪ್ರದರ್ಶನಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ : ಇಲ್ಲೆಲ್ಲಾ ವಾಹನಗಳಿಗೆ ನಿಷೇಧ