ಹೂವಿನಹಡಗಲಿ: ತಾಲೂಕಿನ ಮಾಗಳ-ಶಿವಪುರ-ಹೂವಿನಹಡಗಲಿಗೆ ಸಂಪರ್ಕ ಕಲ್ಪಿಸುವ ಜಿಪಂ ಮುಖ್ಯ ರಸ್ತೆ ಒತ್ತುವರಿಯಾಗಿದೆ. ಈ ಬಗ್ಗೆ ಸಂಬಂಧಿಸಿ ಅಧಿಕಾರಿಗಳು ಗಮನಹರಿಸದಿರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಇದರಿಂದ ರಸ್ತೆ ಕಿರಿದಾಗಿ ಎರಡು ವಾಹನಗಳು ಸಂಚಾರಕ್ಕೂ ತೊಂದರೆ ಉಂಟಾಗಿದೆ. ರಸ್ತೆ ಇಕ್ಕೆಲಗಳಲ್ಲಿ ಅರಣ್ಯ ಇಲಾಖೆ ನೆಟ್ಟಿದ್ದ ಗಿಡ-ಮರಗಳನ್ನೆಲ್ಲ ಕಡಿದು ಹಾಕಿದ್ದರೂ ಈವರೆಗೂ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಗಮನ ಹರಿಸುತ್ತಿಲ್ಲ.ಮಾಗಳದಿಂದ ತಾಲೂಕು ಕೇಂದ್ರ ಹೂವಿನಹಡಗಲಿಗೆ ಸಂಪರ್ಕ ಕಲ್ಪಿಸುವ ಶಿವಪುರ ಮಾರ್ಗದ ನೇರ ರಸ್ತೆ 80 ಅಡಿ ಇದೆ. ರಸ್ತೆ ಅಭಿವೃದ್ಧಿಗೆ ಮೀಸಲಿರಿಸಿದ ಜಮೀನುಗಳನ್ನು ಸಹ ರೈತರು ಸಂಪೂರ್ಣ ಒತ್ತುವರಿ ಮಾಡಿದ್ದಾರೆ.
ತಾಲೂಕಿನ ಮಾಗಳದಲ್ಲಿ ಹರಿಯುತ್ತಿರುವ ತುಂಗಭದ್ರಗೆ ಅಡ್ಡಲಾಗಿ ಮಾಗಳ-ಕಲ್ಲಾಗನೂರು ಗ್ರಾಮಗಳ ನಡುವೆ ಸೇತುವೆ ನಿರ್ಮಾಣ ಮಾಡಬೇಕೆಂಬ ಉದ್ದೇಶದಿಂದ, ಈ ಹಿಂದೆಯೇ ಮಾಗಳ-ಶಿವಪುರ ರಸ್ತೆಯನ್ನು 80 ಅಡಿ ರಸ್ತೆ ನಿರ್ಮಾಣ ಮಾಡಲಾಗಿತ್ತು. ಅದರಂತೆ ಅರಣ್ಯ ಇಲಾಖೆ ಸಾವಿರಾರು ಮರಗಳನ್ನು ನೆಟ್ಟಿದ್ದರು. ಆದರೆ ದುರಾಸೆಗೆ ಬಿದ್ದ ರೈತರು, ದೊಡ್ಡ ಮರಗಳನ್ನೇ ಅರಣ್ಯ ಇಲಾಖೆಯ ನಿಯಮಗಳನ್ನು ಲೆಕ್ಕಿಸದೇ ಜೆಬಿಸಿ ಮೂಲಕ ಕಿತ್ತು ಹಾಕಿದ್ದಾರೆ ಎನ್ನುವ ಆರೋಪವಿದೆ.ಕಂದಾಯ ಇಲಾಖೆ ಈಗಾಗಲೇ ಸರ್ಕಾರಿ ಜಮೀನು, ರಸ್ತೆ, ಸ್ಮಶಾನ, ಹಳ್ಳ, ನದಿ ಸೇರಿದಂತೆ ಎಲ್ಲ ಸರ್ಕಾರದ ಆಸ್ತಿ ಒತ್ತುವರಿ ತೆರವಿಗೆ ಈಗಾಗಲೇ ಲ್ಯಾಂಡ್ ಬೀಟ್ ಆ್ಯಪ್ ಮಾಡಿದ್ದಾರೆ. ಇದರಿಂದ ಎಲ್ಲ ಕಡೆಗೂ ಸರ್ವೇ ನಡೆಯುತ್ತಿದೆ. ಈ ಮೂಲಕ ಮಾಗಳ-ಶಿವಪುರ ರಸ್ತೆಯನ್ನು ಸರ್ವೇ ಮಾಡಿದರೆ ರಸ್ತೆ ಒತ್ತುವರಿಯಾಗಿರುವುದು ದೃಢವಾಗಲಿದೆ. ಈ ನಿಟ್ಟಿನಲ್ಲಿ ಸಂಬಂಧಪಟ್ಟ ಅಧಿಕಾರಿಗಳು ದಿಟ್ಟ ನಿರ್ಧಾರ ಕೈಗೊಂಡು, ಒತ್ತುವರಿಯಾಗಿರುವ ರಸ್ತೆಯನ್ನು ತೆರವು ಮಾಡಿ ಸುಗಮ ಸಂಚಾರಕ್ಕೆ ಅವಕಾಶ ಮಾಡಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.
ಮಾಗಳ-ಶಿವಪುರ ರಸ್ತೆಯು ಮೊದಲು ಜಿಪಂ ವ್ಯಾಪ್ತಿಗೆ ಒಳಪಟ್ಟಿತ್ತು. ಈಚೆಗೆ ಆ ರಸ್ತೆ ಮೇಲ್ದರ್ಜೆಗೇರಿಸಿ ಈಗ ಲೋಕೋಪಯೋಗಿ ಇಲಾಖೆ ವ್ಯಾಪ್ತಿಗೆ ಸೇರ್ಪಡೆಯಾಗಿದೆ. ರಸ್ತೆ ಸರ್ವೇ ಮಾಡಿಸಿ, ಒತ್ತುವರಿ ತೆರವು ಮಾಡಿ ರಸ್ತೆಯ ಗಡಿ ಗುರುತು ಮಾಡಲು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ಹೊನ್ನಪ್ಪ.ಮರ ಕಡಿದರೆ ಶಿಸ್ತು ಕ್ರಮ: ರಸ್ತೆಯ ಇಕ್ಕೆಲದಲ್ಲಿ ಸಾಮಾಜಿಕ ಅರಣ್ಯ ಇಲಾಖೆ ಗಿಡ-ಮರ ಬೆಳೆಸಿದ್ದಾರೆ. ಅವುಗಳನ್ನು ರೈತರು ಒತ್ತುವರಿ ನೆಪದಲ್ಲಿ ಕಡಿದು ಹಾಕುವಂತಿಲ್ಲ. ರಸ್ತೆ ಬದಿಯಲ್ಲೇ ಮರಗಳು ಇದ್ದರೇ ಅಲ್ಲಿ ಜಮೀನು ಹೊಂದಿರುವ ರೈತರ ಹೆಸರಿನಲ್ಲಿ ಅರಣ್ಯ ಇಲಾಖೆ ಮೂಲಕ ಮರಗಳ ಪಟ್ಟ ನೀಡಲಾಗುತ್ತಿದೆ. ರಸ್ತೆ ಅಗಲೀಕರಣ ಬಂದಾಗ ಮರವನ್ನು ತೆರವು ಮಾಡಬೇಕಾದ ಸಂದರ್ಭ ಬಂದರೆ ಆ ಮರಗಳ ಮೌಲ್ಯ ಹೊಂದಿರುವಷ್ಟು ಹಣವನ್ನು ರೈತರೇ ಪಡೆದುಕೊಳ್ಳಬಹುದು. ಯಾವುದೇ ರೈತರು ಮರಗಳನ್ನು ಕಡಿದು ಹಾಕಿದರೆ, ಅಂತಹವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ವಲಯ ಅರಣ್ಯಾಧಿಕಾರಿ ರೇಣುಕಾ.
ರಸ್ತೆ ಅಕ್ಕಪಕ್ಕ ಸರ್ಕಾರಿ ಜಮೀನು ಇದ್ದಲ್ಲಿ ಲ್ಯಾಂಡ್ ಬೀಟ್ ಆ್ಯಪ್ ಮೂಲಕ ಸರ್ವೇ ಮಾಡಿಸುತ್ತೇವೆ. ಒಂದು ವೇಳೆ ಜಮೀನುಗಳನ್ನು ರೈತರು ಒತ್ತುವರಿ ಮಾಡಿದ್ದರೆ ಈ ಕುರಿತು ಕ್ರಮ ಕೈಗೊಳ್ಳುತ್ತೇವೆ ಎನ್ನುತ್ತಾರೆ ಹೂವಿನಹಡಗಲಿ ತಹಸೀಲ್ದಾರ್ ಜಗದೀಶ.