ಕನ್ನಡಪ್ರಭ ವಾರ್ತೆ ಹೊನ್ನಾಳಿ
ಹೊನ್ನಾಳಿ ಮತ್ತು ನ್ಯಾಮತಿ ಅವಳಿ ತಾಲೂಕುಗಳಲ್ಲಿ ಎಲ್ಲ ರಸ್ತೆಗಳು ಸಂಪೂರ್ಣ ಗುಂಡಿಬಿದ್ದು ಹಾಳಾಗಿವೆ. ಆಗಾಗ ಅಪಘಾತಗಳು ಸಂಭವಿಸುತ್ತಿವೆ. ರಸಗೊಬ್ಬರ ಅಭಾವ ಸೃಷ್ಟಿಯಾಗಿದೆ. ರಾಜ್ಯ ಸರ್ಕಾರ ಅಭಿವೃದ್ಧಿ ಕಾಮಗಾರಿ ನಡೆಸುತ್ತಿಲ್ಲ. ಈ ಎಲ್ಲ ನಿರ್ಲಕ್ಷ್ಯ ಖಂಡಿಸಿ ಆ.2ರಂದು ಬೆಳಗ್ಗೆ 10 ಗಂಟೆಗೆ ರಾಜ್ಯ ಹೆದ್ದಾರಿಯ ಚೀಲೂರು ವೃತ್ತದಲ್ಲಿ ಬಿಜೆಪಿ ಮಂಡಲದ ವತಿಯಿಂದ ರಸ್ತೆ ತಡೆ ಪ್ರತಿಭಟಿಸಲಾಗುವುದು ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.ಶುಕ್ರವಾರ ತಮ್ಮ ನಿವಾಸದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹೊನ್ನಾಳಿ, ನ್ಯಾಮತಿ ತಾಲೂಕು ಮಾತ್ರವಲ್ಲ, ಇಡೀ ರಾಜ್ಯದಲ್ಲೇ ಬಹುತೇಕ ರಸ್ತೆಗಳು ಹಾಳಾಗಿವೆ. ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳ ಸೌಲಭ್ಯವೂ ಸರಿಯಾಗಿಲ್ಲ ಎಂದು ದೂರಿದರು.
ರಾಜ್ಯ ಸರ್ಕಾರ ಎಸ್ಸಿ-ಎಸ್ಟಿ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಬಿಟ್ಟಿ ಭಾಗ್ಯಗಳಿಗೆ ಉಪಯೋಗಿಸಿ ಆ ಜನಾಂಗಕ್ಕೆ ಅನ್ಯಾಯ ಮಾಡುತ್ತಿದೆ. ಎಸ್‌ಸಿಪಿಟಿಎಸ್‌ಪಿಗೆ ಮೀಸಿಲಿರಿಸಿದ್ದ ಈ ವರ್ಷದ ₹14 ಸಾವಿರ ಕೋಟಿ ಸೇರಿದಂತೆ ಒಟ್ಟು ₹30 ಸಾವಿರ ಕೋಟಿ 5 ಗ್ಯಾರಂಟಿಗಳಿಗೆ ಬಳಸಿ, ಸಮಾಜಕ್ಕೆ ಅನ್ಯಾಯ ಮಾಡಿದೆ. ರೈತರು ಯೂರಿಯಾ ಗೊಬ್ಬರಕ್ಕಾಗಿ ಪರದಾಡುವಂತಾಗಿದೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ನೇತೃದಲ್ಲಿ ಕೇಂದ್ರದ ಕೃಷಿ ಮಂತ್ರಿ ಜೆ.ಪಿ.ನಡ್ಡಾ ಅವರನ್ನು ಭೇಟಿ ಮಾಡಿ ಹೆಚ್ಚಿನ 1.36 ಸಾವಿರ ಮೆಟ್ರಿಕ್ ಟನ್ ಗೊಬ್ಬರಕ್ಕೆ ಮನವಿ ಮಾಡಲಾಗಿದ್ದು, ಕೃಷಿ ಸಚಿವರು ಒಪ್ಪಿದ್ದಾರೆ ಎಂದರು.ಈ ಸಂದರ್ಭ ಬಿಜೆಪಿ ಮಂಡಲದ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷ ಜೆ.ಕೆ.ಸುರೇಶ್, ಹಿಂದುಳಿದ ವರ್ಗಗಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ.ಕುಬೇಂದ್ರಪ್ಪ ಇತರರು ಇದ್ದರು.
- - --1ಎಚ್.ಎಲ್.ಐ3.ಜೆಪಿಜಿ: