ಬಸವರಾಜ ಜಾಧವ
ಹುಬ್ಬಳ್ಳಿ: ಕಲ್ಲು ಗಣಿಗಾರಿಕೆಯಿಂದ ಹೊರಸೂಸುವ ಧೂಳು ಜೀವ ಹಿಂಡಿದರೆ, ಬೃಹತ್ ಗಾತ್ರದ ವಾಹನ ಸಂಚಾರದಿಂದ ರಸ್ತೆ ಅಧ್ವಾನಗೊಂಡಿವೆ. ವಾಹನ ಸವಾರರು ಪ್ರಾಣಭೀತಿಯಲ್ಲಿ ಸಂಚರಿಸುತ್ತಿದ್ದಾರೆ!ಇದು. ತಾಲೂಕಿನ ರಾಮಾಪುರ, ಚವರಗುಡ್ಡ, ಚಳಮಟ್ಟಿ ಸೇರಿದಂತೆ ವಿವಿಧ ಗ್ರಾಮಗಳ ಜನರು ನಿತ್ಯ ಅನುಭವಿಸುತ್ತಿರುವ ಯಾತನೆ.
ಚವರಗುಡ್ಡ ಗ್ರಾಮದ ಸುತ್ತಮುತ್ತ ಕಲ್ಲು ಗಣಿಗಾರಿಕೆ ಹೆಚ್ಚಾಗಿದ್ದು, ಬೃಹತ್ ವಾಹನಗಳ ಸಂಚಾರ ಹೆಚ್ಚಳವಾಗಿದೆ. ಕ್ವಾರಿಯಿಂದ ಜಲ್ಲಿ ಕಲ್ಲು, ಕಲ್ಲಿನ ಪುಡಿಯನ್ನು ಸಾಮರ್ಥ್ಯಕ್ಕಿಂತ ಹೆಚ್ಚಿಗೆ ಲಾರಿಯಲ್ಲಿ ತುಂಬಿಕೊಂಡು ಹೋಗುತ್ತಿರುವ ಪರಿಣಾಮ ರಾಮಾಪುರ ಕ್ರಾಸ್‌ನಿಂದ ಚವರಗುಡ್ಡದ ವರೆಗಿನ 1.5 ಕಿಲೋ ಮೀಟರ್ ರಸ್ತೆ ಸಂಪೂರ್ಣ ಹಾಳಾಗಿದೆ. ರಸ್ತೆಯಲ್ಲಿ ಬೃಹತ್ ಗಾತ್ರದ ಗುಂಡಿಗಳು ಬಿದ್ದಿವೆ. ಇದರಿಂದ ಬೈಕ್, ಕಾರು ಸವಾರರು ಜೀವ ಭಯದಲ್ಲಿ ವಾಹನ ಚಲಾಯಿಸುತ್ತಿದ್ದಾರೆ. ಇದೀಗ ಮಳೆ ಸುರಿಯುತ್ತಿದ್ದು ಗುಂಡಿಯಲ್ಲಿ ನೀರು ನಿಂತಿರುವುದರಿಂದ ಹಲವರು ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಇನ್ನು ಚವರಗುಡ್ಡದಿಂದ ಚಳಮಟ್ಟಿಗೆ ಸಂಪರ್ಕ ಕಲ್ಪಿಸುವ ಸುಮಾರು 1.5 ಕಿಮೀ ರಸ್ತೆಯ ಸ್ಥಿತಿಯು ಹೀಗೆ ಇದ್ದು, ಈಚೆಗೆ ಈ ರಸ್ತೆಗೆ ಮೊರಂ ಹಾಕಿ ತಾತ್ಕಾಲಿಕವಾಗಿ ಗುಂಡಿಗಳನ್ನು ಮುಚ್ಚಲಾಗಿದೆ. ಆದರೆ, ಒಂದು ಬಾರಿ ಮಳೆಯಾದರೆ ಸಾಕು ಈ ರಸ್ತೆಯ ಸ್ಥಿತಿಯೂ ಹೇಳತೀರದಂತಾಗುತ್ತದೆ.ಬೇಸಿಗೆಯಲ್ಲಿ ಧೂಳು
ನಿತ್ಯ ನೂರಾರು ವಾಹನಗಳು ಈ ರಸ್ತೆಯಲ್ಲಿ ಸಂಚರಿಸುತ್ತಿರುವುದರಿಂದ ರಸ್ತೆ ಮತ್ತಷ್ಟು ಹದಗೆಟ್ಟಿದೆ. ಬಿಸಿಲು ಬಿದ್ದರೆ ಧೂಳು, ಮಳೆಗಾಲದಲ್ಲಿ ನೀರು ನಿಂತುಕೊಂಡು ಜನರ ಜೀವ ಹಿಂಡುತ್ತಿದೆ. ಗಣಿಗಾರಿಕೆಯಿಂದ ಹೊರಸೂಸುವ ಹಾಗೂ ವಾಹನಗಳ ಸಂಚರಿಸಿದ ಬಳಿಕ ಏಳುವ ಧೂಳು ಇಡೀ ಗ್ರಾಮವನ್ನು ಆವರಿಸುತ್ತಿದೆ. ಇದರಿಂದ ಜನರು ಹಲವು ರೋಗಗಳಿಗೆ ತುತ್ತಾಗುತ್ತಿದ್ದಾರೆ. ಡಾಂಬರ್ ಕಂಡು 7-8 ವರ್ಷಚವರಗುಡ್ಡ ಗ್ರಾಮದಿಂದ ರಾಮಾಪುರ ಕ್ರಾಸ್ ವರೆಗಿನ 1.5 ಕಿಲೋ ಮೀಟರ್ ರಸ್ತೆಯನ್ನು ಡಾಂಬರೀಕರಣ ಮಾಡಿ 7-8 ವರ್ಷ ಕಳೆದಿದೆ. ಇದರಿಂದ ರಸ್ತೆ ಸಂಪೂರ್ಣ ಹಾಳಾಗಿದ್ದ ಗಣಿಗಾರಿಕೆ ವಾಹನಗಳು ಓಡಾಡಲು ತೀವ್ರ ತೊಂದರೆಯಾಗಿತ್ತು. ಹೀಗಾಗಿ, ಗಣಿಗಾರಿಕೆ ಮಾಡುವವರೇ ರಸ್ತೆಯಲ್ಲಿ ಬಿದ್ದಿರುವ ಗುಂಡಿಗೆ ಜಲ್ಲಿ ಕಲ್ಲು, ಖಡಿ ಹಾಕಿ ಮುಚ್ಚಿದ್ದರು. ನಿತ್ಯ ಇಲ್ಲಿ ಸಂಚರಿಸಲು ಜನತೆ ಪರದಾಡುತ್ತಿದ್ದು, ಡಾಂಬರೀಕರಣ ಮಾಡುವಂತೆ ಚವರಗುಡ್ಡ ಸೇರಿದಂತೆ ಈ ರಸ್ತೆ ಸಂಪರ್ಕಿಸುವ ಹಲವು ಗ್ರಾಮಗಳ ಜನರು ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ.
ವಿದ್ಯಾರ್ಥಿಗಳಿಗೆ ಸಂಕಷ್ಟಸಾರಿಗೆ ಬಸ್ 4 ವರ್ಷಗಳಿಂದ ಕಾರ್ಯಾಚರಣೆ ನಿಲ್ಲಿಸಿದ್ದು ಚವರಗುಡ್ಡದಿಂದ ಪಕ್ಕದ ಚಳಮಟ್ಟಿ ಗ್ರಾಮಕ್ಕೆ ನಿತ್ಯವೂ 60ಕ್ಕೂ ಅಧಿಕ ವಿದ್ಯಾರ್ಥಿಗಳು 1.5 ಕಿಲೋ ಮೀಟರ್ ತಗ್ಗು- ದಿಣ್ಣೆಗಳಿಂದ ಕೂಡಿದ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ. ಜಲ್ಲಿ ಕಲ್ಲು ರಸ್ತೆಯಲ್ಲಿ ಬಿದ್ದಿದ್ದು ನಡೆದುಕೊಂಡು ಹೋಗುವಾಗ ಕೆಲವರು ಪೆಟ್ಟು ತಿಂದಿದ್ದಾರೆ.
ಒಟ್ಟಿನಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಸಾಮರ್ಥ್ಯಕ್ಕಿಂತ ಹೆಚ್ಚಿನ ಭಾರದ ಗಣಿಗಾರಿಕೆ ವಾಹನಗಳ ಓಡಾಟದಿಂದ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಆರ್‌ಟಿಒ ಅಧಿಕಾರಿಗಳು ಒವರ್‌ಲೋಡ್ ಹಾಕಿಕೊಂಡು ಸಂಚರಿಸುವ ಬೃಹತ್ ಗಾತ್ರದ ಲಾರಿಗಳಿಗೆ ಕಡಿವಾಣ ಹಾಕಿಬೇಕಿದೆ ಎನ್ನುತ್ತಾರೆ ಪ್ರಜ್ಞಾವಂತರು.ರಸ್ತೆ ದುರಸ್ತಿ ಮಾಡುವಂತೆ ಶಾಸಕ ಎಂ.ಆರ್. ಪಾಟೀಲ ಅವರಿಗೆ ಮನವಿ ಸಲ್ಲಿಸಿದ್ದು ಇತ್ತೀಚೆಗೆ ಅಧಿಕಾರಿಗಳು ಭೇಟಿ ನೀಡಿ ರಸ್ತೆ ಪರಿಶೀಲಿಸಿದ್ದಾರೆ. ಆದರೆ, ಈ ವರೆಗೂ ದುರಸ್ತಿ ಕಾಮಗಾರಿ ಆರಂಭಿಸಿಲ್ಲ. ತಕ್ಷಣ ಕಾಮಗಾರಿ ಕೈಗೊಳ್ಳದಿದ್ದರೆ ರಸ್ತೆ ತಡೆದು ಪ್ರತಿಭಟನೆ ನಡೆಸಲಾಗುವುದು ಎಂದು ಗ್ರಾಮಸ್ಥ ಮಂಜುನಾಥ ತಳವಾರ ಎಚ್ಚರಿಸಿದ್ದಾರೆ.
ರಾಮಾಪುರ ಕ್ರಾಸ್‌ನಿಂದ ಚಳಮಟ್ಟಿ ವರೆಗಿನ ರಸ್ತೆ ದುರಸ್ತಿಗೆ ಶಾಸಕರು ಭರವಸೆ ನೀಡಿದ್ದು, ಶೀಘ್ರದಲ್ಲಿಯೇ ಕಾಮಗಾರಿ ಪ್ರಾರಂಭವಾಗಲಿದೆ ಎಂದು ಚನ್ನಾಪುರ ಗ್ರಾಪಂ ಸದಸ್ಯ ಗುರುಸಿದ್ದಪ್ಪ ಕಾಶಿಯವರ ತಿಳಿಸಿದ್ದಾರೆ.