ಪ್ಲಾಸ್ಟಿಕ್ ತ್ಯಾಜ್ಯದಿಂದ ರಸ್ತೆ ನಿರ್ಮಾಣ: ಮಂಗಳೂರಿನಲ್ಲಿ ಹೊಸ ಆವಿಷ್ಕಾರ

KannadaprabhaNewsNetwork |  
Published : Jun 13, 2025, 02:27 AM ISTUpdated : Jun 13, 2025, 02:28 AM IST
ಸುರತ್ಕಲ್‌ನಲ್ಲಿ ಪ್ಲಾಸ್ಟಿಕ್‌ ಬಳಸಿ ನಿರ್ಮಿಸಿದ ಸರ್ವಿಸ್‌ ರಸ್ತೆ  | Kannada Prabha

ಸಾರಾಂಶ

ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಪ್ಲಾಸ್ಟಿಕ್ ಅನ್ನು ನಾಲ್ಕು ಘಟಕಗಳಿಂದ ಸಂಗ್ರಹಿಸಿಸಲಾಗಿದೆ. ತಲಪಾಡಿ-ನಂತೂರು ಮತ್ತು ಸುರತ್ಕಲ್-ಸಾಸ್ತಾನ ನಡುವಿನ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಇದನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗೆ ನವೀನ ಹಾಗೂ ಪರಿಸರಸ್ನೇಹಿ ಪರಿಹಾರ ಒದಗಿಸುವ ಪ್ರಯತ್ನವಾಗಿ ೧೭೦ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಳಸಿದ ಬಳಿಕ ಬೇಡವಾಗುವ ಪ್ಲಾಸ್ಟಿಕ್‌ನಿಂದ ಈಗ ರಸ್ತೆ ನಿರ್ಮಾಣ ಸಾಧ್ಯ! ಇಂಥದ್ದೊಂದು ಅಚ್ಚರಿಯ ಆವಿಷ್ಕಾರ ಮಂಗಳೂರಿನಲ್ಲಿ ನಡೆದಿದೆ. ಸುಮಾರು ೧೭೦ ಟನ್ ಪ್ಲಾಸ್ಟಿಕ್ ತ್ಯಾಜ್ಯದಲ್ಲಿ ೫೦ ಕಿಲೋ ಮೀಟರ್ ಉದ್ದದ ಸರ್ವಿಸ್ ರಸ್ತೆ ನಿರ್ಮಿಸಲಾಗುತ್ತಿದೆ. ಕಡಿಮೆ ಸಾಂದ್ರತೆಯ ಪಾಲಿಥಿಲೀನ್ ಪ್ಲಾಸ್ಟಿಕ್ ಅನ್ನು ನಾಲ್ಕು ಘಟಕಗಳಿಂದ ಸಂಗ್ರಹಿಸಿಸಲಾಗಿದೆ. ತಲಪಾಡಿ-ನಂತೂರು ಮತ್ತು ಸುರತ್ಕಲ್-ಸಾಸ್ತಾನ ನಡುವಿನ ಸರ್ವಿಸ್ ರಸ್ತೆಗಳ ಅಭಿವೃದ್ಧಿಗೆ ಇದನ್ನು ಬಳಸಲಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯದ ನಿರ್ವಹಣೆಗೆ ನವೀನ ಹಾಗೂ ಪರಿಸರಸ್ನೇಹಿ ಪರಿಹಾರ ಒದಗಿಸುವ ಪ್ರಯತ್ನವಾಗಿ ೧೭೦ ಟನ್ ಪ್ಲಾಸ್ಟಿಕ್ ತ್ಯಾಜ್ಯವನ್ನು ರಸ್ತೆ ನಿರ್ಮಾಣದಲ್ಲಿ ಬಳಸಲಾಗುತ್ತಿದೆ. ಇದು ಕರ್ನಾಟಕದಲ್ಲೇ ಮೊದಲ ಪ್ರಯತ್ನ. ಈ ಮೂಲಕ ತ್ಯಾಜ್ಯ ಪ್ಲಾಸ್ಟಿಕ್‌ಗೆ ಮರುಬಳಕೆಯ ದಾರಿ ತೋರಿಸಲಾಗಿದೆ ಎಂದು ಈ ಯೋಜನೆಯನ್ನು ನಿರ್ವಹಿಸುತ್ತಿರುವ ಮಂಗಳಾ ರಿಸೋರ್ಸ್ ಮ್ಯಾನೇಜ್‌ಮೆಂಟ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ದಿಲ್‌ರಾಜ್ ಆಳ್ವ ತಿಳಿಸಿದ್ದಾರೆ.ಕಾರ್ಕಳ, ಎಡಪದವು, ಬಂಟ್ವಾಳ ಮತ್ತು ಕೆದಂಬಾಡಿ ಈ ಘಟಕಗಳಿಂದ ಪ್ರತಿದಿನ ೧೮-೨೦ ಟನ್ ಒಣ ತ್ಯಾಜ್ಯವನ್ನು ಸಂಸ್ಕರಿಸಲಾಗುತ್ತಿದ್ದು, ಇದರಲ್ಲಿ ತಿಂಗಳಿಗೆ ೪೦-೫೦ ಟನ್ ಪ್ಲಾಸ್ಟಿಕ್‌ನ್ನು ಪಡೆಯಲಾಗುತ್ತಿದೆ. ಈ ಪ್ಲಾಸ್ಟಿಕ್ ಹೊಂದಿಕೊಳ್ಳುವ ಮತ್ತು ಬಲಿಷ್ಠವಾಗಿರುವುದರಿಂದ, ರಸ್ತೆ ನಿರ್ಮಾಣಕ್ಕೆ ಇದು ಹೆಚ್ಚು ಸೂಕ್ತವಾಗಿದೆ ಎಂದು ಸಂಸ್ಥೆಯ ನಿರ್ದೇಶಕ ಸಚಿನ್ ಶೆಟ್ಟಿ ಹೇಳುತ್ತಾರೆ.

ಭಾರತೀಯ ರಸ್ತೆ ಕಾಂಗ್ರೆಸ್ ಮತ್ತು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಪ್ಲಾಸ್ಟಿಕ್ ಬಳಕೆಗೆ ನಿಗದಿತ ಮಾರ್ಗಸೂಚಿಗಳನ್ನು ನೀಡಿದೆ. ಆದರೆ ಕಪ್ಪು ಬಣ್ಣದ ಪ್ಲಾಸ್ಟಿಕ್ ನಿಷೇಧಿತವಾಗಿದ್ದು, ಅವು ವಿನಾಶಕಾರಿ ಅನಿಲಗಳನ್ನು ಉತ್ಪತ್ತಿ ಮಾಡುವ ಅಪಾಯವಿದೆ.ಪ್ಲಾಸ್ಟಿಕ್ ಅನ್ನು ಬಿಟುಮೆನ್ ಮಿಶ್ರಣದಲ್ಲಿ ಬಳಸುವ ಮುನ್ನ ಅದರ ಗಾತ್ರ, ದಪ್ಪ ಮತ್ತು ಪ್ರಮಾಣವನ್ನು ನಿಯಂತ್ರಿಸಲಾಗುತ್ತದೆ. ಈ ಉದ್ದೇಶಕ್ಕಾಗಿ ಮೂಲ್ಕಿಯಲ್ಲಿ ವಿಶೇಷ ಘಟಕ ಸ್ಥಾಪಿಸಲಾಗಿದೆ. ಈ ಘಟಕದಲ್ಲಿ ಸ್ವಚ್ಛಗೊಳಿಸಿದ ನಂತರ ಪ್ಲಾಸ್ಟಿಕ್ ತಯಾರಿಸಲಾಗುತ್ತದೆ ಮತ್ತು ಗುತ್ತಿಗೆದಾರರಿಗೆ ಹಸ್ತಾಂತರಿಸಲಾಗುತ್ತದೆ. ಇಂತಹ ಮಹತ್ತರ ಪ್ರಮಾಣದಲ್ಲಿ ಪ್ಲಾಸ್ಟಿಕ್ ಬಳಕೆ ಕರ್ನಾಟಕದಲ್ಲಿ ಇದೇ ಮೊದಲು.

ಆದರೆ ರಾಜ್ಯಾದ್ಯಂತ ಈ ವಿಧಾನವನ್ನು ಅಳವಡಿಸಿಕೊಳ್ಳಲು ತಾಂತ್ರಿಕ ಮಾನದಂಡಗಳು ಸವಾಲಾಗುತ್ತಿದೆ. ಈಗಾಗಲೇ ಪ್ರಾಯೋಗಿಕವಾಗಿ ೫೦ ಮೀಟರ್ ಉದ್ದ ಎರಡು ರಸ್ತೆಗಳನ್ನು ಈ ತಂತ್ರಜ್ಞಾನದಿಂದ ನಿರ್ಮಿಸಲಾಗಿದೆ. ಪ್ಲಾಸ್ಟಿಕ್ ತ್ಯಾಜ್ಯದ ಈ ರೀತಿ ಬಳಕೆಯಿಂದ ಪರಿಸರಕ್ಕೆ ಆಗುವ ಹಾನಿ ತಪ್ಪಿಸುವುದರ ಜತೆಗೆ ರಸ್ತೆಗೂ ಬಾಳ್ವಿಕೆ ಎಂಟತ್ತು ವರ್ಷಗಳ ಕಾಲ ಹೆಚ್ಚುವ ಸಾಧ್ಯತೆ ಇದೆ ಎಂದಿದ್ದಾರೆ ದಿಲ್‌ರಾಜ್‌ ಆಳ್ವ.

PREV

Recommended Stories

ಸರ್ಕಾರಿ ಶಾಲೆ ಕುಡಿವ ನೀರಿಗೆ ವಿಷ ಬೆರೆಸಿದ್ದಕ್ಕೆ ಸಿಎಂ ಗರಂ
ಡಾ.ರಾಜ್‌ಕುಮಾರ್‌ರ ನೆಚ್ಚಿನ ಸಹೋದರಿ ನಾಗಮ್ಮ ನಿಧನ