ಹೊಳಲು ಕಸ ವಿಲೇವಾರಿ ಘಟಕಕ್ಕೆ ರಸ್ತೆ ನಿರ್ಮಾಣ, ಮತ್ತೆ ರೈತರ ಧರಣಿ

KannadaprabhaNewsNetwork | Published : Apr 22, 2025 1:46 AM

ಸಾರಾಂಶ

ಸರ್ಕಾರಿ ಜಮೀನಿನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಕಸ ವಿಲೇವಾರಿ ಘಟಕ ಹಾಗೂ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ ಹೂವಿನಹಡಗಲಿ ತಾಲೂಕಿನ ಹೊಳಲು ರೈತರು ಮತ್ತೆ ಧರಣಿ ನಡೆಸಿದ್ದಾರೆ.

ಹೂವಿನಹಡಗಲಿ: ಸರ್ಕಾರಿ ಜಮೀನಿನಲ್ಲಿ ನರೇಗಾ ಯೋಜನೆಯಡಿ ನಿರ್ಮಾಣ ಮಾಡಿರುವ ಕಸ ವಿಲೇವಾರಿ ಘಟಕ ಹಾಗೂ ಸ್ಮಶಾನಕ್ಕೆ ರಸ್ತೆ ನಿರ್ಮಾಣ ಮಾಡಬೇಕು ಎಂದು ಆಗ್ರಹಿಸಿ, ತಾಲೂಕಿನ ಹೊಳಲು ರೈತರು ಮತ್ತೆ ಧರಣಿ ನಡೆಸಿದ್ದಾರೆ.

ರೈತ ಮುಖಂಡ ಕೋಡಬಾಳ ಚಂದ್ರಪ್ಪ ನೇತೃತ್ವದಲ್ಲಿ ಹತ್ತಾರು ರೈತರು ಹಾಗೂ ಗ್ರಾಮಸ್ಥರು ಗ್ರಾಮದ ಸಿಂಹಾಸನ ಕಟ್ಟೆಯ ಮೇಲೆ ಈ ಹಿಂದಿನಿಂದ ಈ ವರೆಗೂ 4ನೇ ಬಾರಿ ಧರಣಿ ನಡೆಸಿದರು. ಸಮಸ್ಯೆ ಬಗೆಹರಿಯುವ ವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಪಟ್ಟು ಹಿಡಿದರು.

ಗ್ರಾಮದ ಹೊರವಲಯದಲ್ಲಿ 8 ವರ್ಷಗಳ ಹಿಂದೆ ಗ್ರಾಪಂನಿಂದ ಕಸ ವಿಲೇವಾರಿ ಘಟಕ ನಿರ್ಮಿಸಿದ್ದರೂ, ಕಸ ಸಂಗ್ರಹ ವಾಹನಗಳು ತೆರಳಲು ದಾರಿ ಇಲ್ಲದೇ ಘಟಕ ಉಪಯೋಗಕ್ಕೆ ಬಾರದಂತಾಗಿದೆ. ಹೋಗಲು ದಾರಿ ಇಲ್ಲದ ಕಾರಣಕ್ಕೆ ಗ್ರಾಪಂ ಸಿಬ್ಬಂದಿ ಕಸವನ್ನು ಹಳ್ಳದಲ್ಲಿ ಸುರಿಯುತ್ತಿದ್ದಾರೆ. ಮಳೆ ಬಂದಾಗ ಕಸದ ರಾಶಿ ನದಿಗೆ ಸೇರಿ ಜಲಮೂಲ ಕಲುಷಿತವಾಗುತ್ತಿದೆ. ಮೃತದೇಹಗಳ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನಕ್ಕೆ ತೆರಳಲು ಜನರು ಪರದಾಡುವ ಸ್ಥಿತಿ ಇದೆ. ಈ ಸಮಸ್ಯೆಯನ್ನು ತಾಲೂಕು ಆಡಳಿತ ಗಂಭೀರವಾಗಿ ಪರಿಗಣಿಸುತ್ತಿಲ್ಲ ಎಂದು ಕೋಡಬಾಳ ಚಂದ್ರಪ್ಪ ಆರೋಪಿಸಿದ್ದಾರೆ.

ಸರ್ವೇ ಇಲಾಖೆಯ ನಕಾಶೆ ಪ್ರಕಾರ ದಾರಿ ಬಿಟ್ಟು ಕೊಡಲು ಅಕ್ಕಪಕ್ಕದ ಎಲ್ಲ ರೈತರು ಒಪ್ಪಿದ್ದಾರೆ. ಒಬ್ಬರು ಮಾತ್ರ ಅಡ್ಡಿಪಡಿಸುತ್ತಿದ್ದಾರೆ. ಇದರಿಂದ ದಾರಿ ಸಮಸ್ಯೆ ಜಟಿಲವಾಗಿದೆ. ಹೊಲ-ಗದ್ದೆಗಳಿಗೆ ಹೋಗಿ ಬರಲು ರೈತರಿಗೆ ತೀವ್ರ ತೊಂದರೆಯಾಗಿದೆ. ತಕ್ಷಣ ಜಿಲ್ಲಾಡಳಿತ ಮಧ್ಯೆ ಪ್ರವೇಶಿಸಿ ಸಮಸ್ಯೆ ಬಗೆಹರಿಸಬೇಕಿದೆ ಎಂದು ಆಗ್ರಹಿಸಿದ್ದಾರೆ.

ಪ್ರತಿಭಟನಾ ಸ್ಥಳಕ್ಕೆ ತಹಸೀಲ್ದಾರ್ ಜಿ. ಸಂತೋಷ್ ಕುಮಾರ್‌ ಭೇಟಿ ನೀಡಿ ನೀಡಿ, ಕಸ ವಿಲೇವಾರಿ ಘಟಕ ಮತ್ತು ಸ್ಮಶಾನಕ್ಕೆ ತೆರಳುವ ರಸ್ತೆ ಕುರಿತು ಮೂರು ದಿನಗಳಲ್ಲಿ ಸಮೀಕ್ಷೆ ನಡೆಸುತ್ತೇವೆ. ಮಾರ್ಗದಲ್ಲಿನ ರೈತರೊಬ್ಬರು ತಮ್ಮ ಹೊಲದ ವ್ಯಾಪ್ತಿಯಲ್ಲಿ ರಸ್ತೆ ನಿರ್ಮಾಣ ವಿರೋಧಿಸಿ ನ್ಯಾಯಾಲಯ ಮೆಟ್ಟಿಲೇರಿದ್ದಾರೆ. ಹೀಗಾಗಿ ಆ ವ್ಯಾಪ್ತಿ ಬಿಟ್ಟು ಜೆಸಿಬಿಯಿಂದ ತಾತ್ಕಾಲಿಕ ರಸ್ತೆ ನಿರ್ಮಿಸಿಕೊಡುತ್ತೇವೆ ಎಂದು ಭರವಸೆ ನೀಡಿದರು. ಇದರಿಂದ ರೈತರು ಧರಣಿ ಅಂತ್ಯಗೊಳಿಸಿದರು.

ಗ್ರಾಪಂ ಅಧ್ಯಕ್ಷ ಗುಡಗೂರು ಚನ್ನಬಸಪ್ಪ, ಪಿಡಿಒ ಆನಂದನಾಯ್ಕ ಇದ್ದರು. ಪ್ರತಿಭಟನೆಯಲ್ಲಿ ರೈತರಾದ ತೋಟರ ವಿರೂಪಾಕ್ಷಪ್ಪ, ಅಯ್ಯಾಳಿ ನಾಗಪ್ಪ, ತೋಟರ ಚಂದ್ರಪ್ಪ, ಹೊಟ್ಟಿಗೌಡ್ರ ಮಲ್ಲಪ್ಪ, ಕೋಡಬಾಳ ರಾಜಪ್ಪ, ಟಿ. ಪರಮೇಶ ಇತರರಿದ್ದರು.

Share this article