ಬೇಕಾಬಿಟ್ಟಿ ಯುಜಿಡಿ ಕಾಮಗಾರಿಯಿಂದ ಹದಗೆಟ್ಟ ರಸ್ತೆ

KannadaprabhaNewsNetwork |  
Published : Jun 19, 2025, 11:48 PM ISTUpdated : Jun 19, 2025, 11:49 PM IST
19ಎಚ್ಎಸ್ಎನ್3 :  | Kannada Prabha

ಸಾರಾಂಶ

ಕಳೆದ ಒಂದು ತಿಂಗಳಿಂದ ಬಿಟ್ಟೂ ಬಿಡದೆ ಸುರಿದ ಮಳೆಯಿಂದ ನಗರದ ಎಸ್‌ಬಿಎಂ ಬಡಾವಣೆಯಿಂದ ನಂದಿನಿ ಲೇಔಟ್‌ವರೆಗೂ ರಸ್ತೆಗಳು ಯುಜಿಡಿಗೆ ಮಾಡಿರುವ ಕಾಮಗಾರಿಗಳಿಂದ ಗುಂಡಿಗಳು ಬಿದ್ದಿದ್ದು ಬಹುತೇಕ ರಸ್ತೆಗಳು ನೀರು ತುಂಬಿ ಗುಂಡಿಗಳು ಕಾಣಿಸದಂತಾಗಿದೆ. ಪ್ರತಿನಿತ್ಯ ಅವಘಡಗಳು ಸಂಭವಿಸುತ್ತಿದೆ. ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡು ಎದ್ದು ಬಿದ್ದು ಓಡಾಡುತ್ತಿದ್ದು, ನಿವಾಸಿಗಳು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಈ ಬಗ್ಗೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದರೂ ತಾಲೂಕು ಆಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ ಸಮಸ್ಯೆ ಸರಿಪಡಿಸದೆ, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ.

ಕನ್ನಡಪ್ರಭ ವಾರ್ತೆ ಹಾಸನ ಒಳ ಚರಂಡಿ ಕಾಮಗಾರಿ (ಯುಜಿಡಿ)ಗೆ ರಸ್ತೆ ಅಗೆದು ಯುಜಿಡಿ ಕೆಲಸವನ್ನೂ ಸಮರ್ಪಕವಾಗಿ ಮಾಡದೆ ರಸ್ತೆಯನ್ನು ದುರಸ್ತಿ ಮಾಡದ ಕಾರಣ ನಗರದ ಎಸ್‌ಬಿಎಂ ಕಾಲೋನಿಗೆ ಹೊಂದಿಕೊಂಡಿರುವ ಆದಾಯ ತೆರಿಗೆ ಕಾಲೋನಿಯ ನಿವಾಸಿಗರು ಕೆಸರು ಗದ್ದೆಯಂತಾದ ರಸ್ತೆಯಲ್ಲಿ ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಳೆದ ಒಂದು ತಿಂಗಳಿಂದ ಬಿಟ್ಟೂ ಬಿಡದೆ ಸುರಿದ ಮಳೆಯಿಂದ ನಗರದ ಎಸ್‌ಬಿಎಂ ಬಡಾವಣೆಯಿಂದ ನಂದಿನಿ ಲೇಔಟ್‌ವರೆಗೂ ರಸ್ತೆಗಳು ಯುಜಿಡಿಗೆ ಮಾಡಿರುವ ಕಾಮಗಾರಿಗಳಿಂದ ಗುಂಡಿಗಳು ಬಿದ್ದಿದ್ದು ಬಹುತೇಕ ರಸ್ತೆಗಳು ನೀರು ತುಂಬಿ ಗುಂಡಿಗಳು ಕಾಣಿಸದಂತಾಗಿದೆ. ಪ್ರತಿನಿತ್ಯ ಅವಘಡಗಳು ಸಂಭವಿಸುತ್ತಿದೆ. ವಾಹನ ಸವಾರರಂತೂ ಸರ್ಕಸ್ ಮಾಡಿಕೊಂಡು ಎದ್ದು ಬಿದ್ದು ಓಡಾಡುತ್ತಿದ್ದು, ನಿವಾಸಿಗಳು ಮನೆಯಿಂದ ಹೊರಬರಲು ಹೆದರುವಂತಾಗಿದೆ. ಶಾಲಾ- ಕಾಲೇಜು ವಿದ್ಯಾರ್ಥಿಗಳಂತೂ ಕೆಸರಿನ ನಡುವೆಯೇ ಹೋಗುವಂತಾಗಿದೆ. ರಸ್ತೆ ದುರಸ್ತಿಗೆ ಉದಾಸೀನ ಮಾಡುತ್ತಿದ್ದು ಈ ಬಗ್ಗೆ ಸ್ಥಳೀಯ ನಿವಾಸಿಗಳು ಮನವಿ ಮಾಡಿದ್ದರೂ ತಾಲೂಕು ಆಡಳಿತವಾಗಲಿ, ಮಹಾನಗರ ಪಾಲಿಕೆಯಾಗಲಿ ಸಮಸ್ಯೆ ಸರಿಪಡಿಸದೆ, ಜಾಣ ಕುರುಡರಂತೆ ವರ್ತಿಸುತ್ತಿದ್ದಾರೆ ಎಂಬುದು ಸ್ಥಳೀಯರ ಆರೋಪ. ೩ ವರ್ಷಗಳ ಹಿಂದೆ ಆದಾಯ ತೆರಿಗೆ ಕಾಲೋನಿಯಲ್ಲಿ ನೂತನವಾಗಿ ಮಾಡಿದ್ದ ಡಾಂಬರ್‌ ರಸ್ತೆಯನ್ನು ರಸ್ತೆ ಮಧ್ಯದಲ್ಲಿ ಪೈಪ್ ಹೂಳಲು ಮತ್ತು ಮ್ಯಾನ್ ಹೋಲ್ ಮಾಡಲು ರಸ್ತೆ ಅಗೆದು ಹಾಳು ಮಾಡಲಾಗಿದೆ. ರಸ್ತೆ ಸಮತಟ್ಟು ಇಲ್ಲದಿರುವ ಕಾರಣ ಮಳೆ ನೀರು ನಿಂತು ರಸ್ತೆ ಯಾವುದು, ಗುಂಡಿ ಯಾವುದು ಎಂದು ಹುಡುಕುವಂತಾಗಿದೆ. ೩ ವರ್ಷ ಕಳೆದರೂ ಇದುವರೆಗೂ ಯುಜಿಡಿ ಪೈಪ್‌ಲೈನ್ ಸಂಪರ್ಕವನ್ನು ಮನೆಗಳಿಗೆ ನೀಡಿಲ್ಲ. ಕೇವಲ ಯುಜಿಡಿ ಪೈಪ್‌ಗಳನ್ನು ಅಳವಡಿಸಿ ಗುಂಡಿ ಮುಚ್ಚುವ ಮೂಲಕ ಸಂಬಂಧಪಟ್ಟ ಅಧಿಕಾರಿಗಳು ಕೈ ತೊಳೆದುಕೊಂಡಿದ್ದಾರೆ ಎಂದು ಸ್ಥಳೀಯರ ಆರೋಪಿಸಿದ್ದಾರೆ.ನಾನಾ ವಾಹನಗಳು ನಿತ್ಯವೂ ಒಂದಲ್ಲ ಒಂದು ಕಡೆ ಸಿಕ್ಕಿ ಬಿದ್ದು, ಸಂಚಾರಕ್ಕೆ ಅಡೆ ತಡೆಯುಂಟಾಗುತ್ತಿದೆ. ಕೆಲವೆಡೆಯ ತಗ್ಗುಗಳನ್ನು ಅರ್ಧ ಮುಚ್ಚಿರುವ ಪರಿಣಾಮ ಜನತೆ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.ಒಟ್ಟಾರೆಯಾಗಿ ಯುಜಿಡಿ ಕಾಮಗಾರಿಯಿಂದ ಹಾಳಾಗಿರುವ ರಸ್ತೆಯನ್ನು ಮಹಾನಗರ ಪಾಲಿಕೆ, ತಾಲೂಕು ಆಡಳಿತ ದುರಸ್ತಿಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುತ್ತಾರೋ ಎಂಬುದು ಕಾದು ನೋಡಬೇಕಿದೆ.ಈಡೇರದ ಶಾಸಕರ ಭರವಸೆ?ಯುಜಿಡಿ ಕಾಮಗಾರಿಯಿಂದ ಹಾಳಾಗಿದ್ದ ರಸ್ತೆಯನ್ನು ದುರಸ್ತಿ ಪಡಿಸುವಂತೆ ಸ್ಥಳೀಯರು ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಶಾಸಕ ಸ್ವರೂಪ್ ಪ್ರಕಾಶ್ ಹಾಗೂ ನಗರಸಭೆ ಅಧ್ಯಕ್ಷರಾಗಿದ್ದ ಚಂದ್ರೇಗೌಡ, ಆಯುಕ್ತರ ತಂಡ ಕಳೆದ ೫ ತಿಂಗಳ ಹಿಂದೆ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಒಂದು ತಿಂಗಳೊಳಗೆ ರಸ್ತೆ ದುರಸ್ತಿ ಮಾಡುವ ಭರವಸೆ ನೀಡಿದ್ದರು. ಆದರೆ ಇದುವರೆಗೂ ದುರಸ್ತಿ ಕಾರ್ಯ ಮಾಡದಿರುವುದಕ್ಕೆ ಸ್ಥಳೀಯರು ಬೇಸರ ವ್ಯಕ್ತಪಡಿಸಿದ್ದಾರೆ. ಕೂಡಲೇ ಶಾಸಕರು ಗಮನಹರಿಸಿ ಮುಂದಾಗುವ ಅನಾಹುತಗಳನ್ನು ತಪ್ಪಿಸುವಂತೆ ಮನವಿ ಮಾಡಿದ್ದಾರೆ.ಮಹಾನಗರ ಪಾಲಿಕೆಯವರನ್ನು ಕೇಳಿ?ಕೆಸರುಮಯ ರಸ್ತೆಯನ್ನು ದುರಸ್ತಿ ಪಡಿಸುವ ವಿಚಾರವಾಗಿ ಯುಜಿಡಿ ಕಾಮಗಾರಿ ನಿರ್ವಹಿಸುತ್ತಿರುವ ಎಂಜಿನಿಯರ್ ಕೃಪಾರವರನ್ನು ಪ್ರಶ್ನಿಸಿದಾಗ, ನಗರಪಾಲಿಕೆಯವರನ್ನು ಕೇಳಿಕೊಳ್ಳಿ ಎಂದು ಉದಾಸೀನದ ಉತ್ತರ ನೀಡುತ್ತಾರೆ ಎಂದು ಹೇಸರೇಳಲು ಇಚ್ಚಿಸದ ಸ್ಥಳೀಯರೊಬ್ಬರು ಆರೋಪಿಸಿದರು. ಹಾಸನ ನಗರಸಭೆಯಿಂದ ಮಹಾನಗರ ಪಾಲಿಕೆಗೆ ಮೇಲ್ದರ್ಜೆಗೇರಿದೆ, ಇನ್ನಾದರೂ ನಗರಪಾಲಿಕೆ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ಥಿ ಪಡಿಸುವಂತೆ ಮನವಿ ಮಾಡಿದರು.ಹಾಸ್ಟೆಲ್ ವಿದ್ಯಾರ್ಥಿಗಳಿಗೂ ತೊಂದರೆ: ಇದೇ ರಸ್ತೆಯಲ್ಲಿ ಒಕ್ಕಲಿಗರ ಮಹಿಳಾ ಹಾಸ್ಟೆಲ್ ಸಹ ಇದ್ದು ಹಾಸ್ಟೆಲ್ ಮಕ್ಕಳು ಶಾಲೆಗೆ ತೆರಳಲು ಪರಿತಪಿಸುವಂತಾಗಿದೆ. ಶಾಲಾ ಮಕ್ಕಳು ನಡೆದುಕೊಂಡು ಹೋಗುವ ವೇಳೆ ಯೂನಿಫಾರಂಗೆ ಕೆಸರು ಹಾರಿ ತೊಂದರೆಯುಂಟಾಗುತ್ತಿದೆ. ವಯಸ್ಸಾದವರು, ಮಕ್ಕಳು ಹಾಗೂ ಮಹಿಳೆಯರು ಮನೆಯಿಂದ ಹೊರಬರುವುದು ಕಷ್ಟವಾಗಿದ್ದು, ನಿವಾಸಿಗಳ ಗೋಳು ಕೇಳುವವರಿಲ್ಲದಂತಾಗಿದೆ.--------------------------------------------------------------------ಹೇಳಿಕೆ1ನಂದಿನಿ ಲೇಔಟ್‌ನಿಂದ ಆದಾಯ ತೆರಿಗೆ ಕಾಲೋನಿವರೆಗೂ ರಸ್ತೆ ಕೆಸರುಮಯವಾಗಿದ್ದು ಕೆಸರು ರಸ್ತೆಯಲ್ಲೇ ಗದ್ದೆ ನಾಟಿ ಮಾಡಬಹುದು. ವಾಹನ ಸಂಚಾರ ಅಷ್ಟೇ ಅಲ್ಲದೆ ಸಾರ್ವಜನಿಕರು ನಡೆದುಕೊಂಡು ಓಡಾಡಲು ತುಂಬಾ ತೊಂದರೆಯುಂಟಾಗುತ್ತಿದೆ. ಮುಕ್ಕಾಲು ಕಿ. ಮೀ.ನಷ್ಟು ಯುಜಿಡಿಗೆ ಗುಂಡಿ ತೆಗೆದಿದ್ದರಿಂದ ಮಳೆ ನೀರಿನಿಂದ ಕೆಸರು ತುಂಬಿ ಸಂಕಷ್ಟ ಅನುಭವಿಸುವಂತಾಗಿದೆ. - ತೇಜಸ್, ಸ್ಥಳೀಯ ವಾಸಿ ಹೇಳಿಕೆ2

ಎಸ್‌ಬಿಎಂ ಕಾಲೋನಿಗೆ ಹೊಂದಿಕೊಂಡಂತಿರುವ ಶರಾವತಿ, ನಂದಿನಿ, ಟೀಚರ್ಸ್‌ ಸೆಕೆಂಡ್ ಸ್ಟೇಜ್ ಕಾಲೋನಿಯಲ್ಲಿ ಸುಮಾರು ೨೦೦ಕ್ಕೂ ಹೆಚ್ಚು ಮನೆಗಳಿವೆ. ಅಸಮರ್ಪಕ ಯುಜಿಡಿ ಕಾಮಗಾರಿಯಿಂದ ರಸ್ತೆ ತುಂಬೆಲ್ಲಾ ಗುಂಡಿ ನಿರ್ಮಾಣವಾಗಿ ಚಿಕ್ಕ ಮಕ್ಕಳು, ವಯಸ್ಕರು ಸೇರಿದಂತೆ ಸಾರ್ವಜನಿಕರು ಒಡಾಡಲು ತೊಂದರೆಯಾಗಿದೆ. ಅಲ್ಲದೆ ದಿನನಿತ್ಯ ೧೫ರಿಂದ ೨೦ಕ್ಕೂ ಹೆಚ್ಚು ಶಾಲಾ ವಾಹನ ಗುಂಡಿ ಬಿದ್ದ ರಸ್ತೆಯಲ್ಲಿಯೇ ತೆರಳುತ್ತವೆ. ಹಲವು ಬಾರಿ ಯುಜಿಡಿಯ ಗುಂಡಿಯಲ್ಲಿ ಚಕ್ರ ಸಿಲುಕಿ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲಿಸಿ ರಸ್ತೆ ದುರಸ್ತಿಪಡಿಸಿ. - ಹೇಮಂತ್, ಸ್ಥಳೀಯ ನಿವಾಸಿ

PREV

Recommended Stories

ಸಾಂಬ್ರಾ ವಿಮಾನ ನಿಲ್ದಾಣದವರೆಗೆ ಚತುಷ್ಪಥ ರಸ್ತೆ
ಮುಷ್ಕರಕ್ಕೆ ನೌಕರರಿಂದ ಮಿಶ್ರ ಪ್ರತಿಕ್ರಿಯೆ