ಮುಂಬರುವ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಖಚಿತವಾಗಿದೆ. ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿದರೆ ಕ್ಷೇತ್ರದ ಜನತೆ ಭರವಸೆ ಪೂರೈಸಿ ಮಾದರಿ ತಾಲೂಕನ್ನಾಗಿ ಮಾಡುವುದಾಗಿ ಮನವಿ ಮಾಡಿದರು.
ಕನ್ನಡಪ್ರಭ ವಾರ್ತೆ ಕಿಕ್ಕೇರಿ
ಪ್ರತಿ ಗ್ರಾಮಗಳಲ್ಲೂ ಸುಗಮ ವಾಹನಗಳ ಸಂಚಾರಕ್ಕೆ ಉತ್ತಮ ರಸ್ತೆಗಳು ಇದ್ದಾಗ ಮಾತ್ರ ಅದು ಅಭಿವೃದ್ಧಿಯ ಸಂಕೇತವಾಗಿರುತ್ತದೆ ಎಂದು ಶಾಸಕ ಎಚ್.ಟಿ.ಮಂಜು ತಿಳಿಸಿದರು.
ಹೋಬಳಿಯ ವಡಕಹಳ್ಳಿ, ಐನೋರಹಳ್ಳಿ, ದೇವರಹಳ್ಳಿ, ಕಡಹೆಮ್ಮಿಗೆ, ಯಲಾದಹಳ್ಳಿ ಗ್ರಾಮಗಳಲ್ಲಿ ಕೆ.ಆರ್.ಐ.ಡಿ.ಎಲ್ ವತಿಯಿಂದ ರಸ್ತೆ ಅಭಿವೃದ್ಧಿ ಕಾಮಗಾರಿ ಹಾಗೂ ಲೋಕೋಪಯೋಗಿ ಇಲಾಖೆಯಿಂದ ಐಕನಹಳ್ಳಿ ಕೊಪ್ಪಲು, ತೋಪೇಗೌಡ ವೃತ್ತದಿಂದ ಕಾಂತರಾಜಪುರ ಮಾರ್ಗದ ರಸ್ತೆ ಹಾಗೂ ಊಗಿನಹಳ್ಳಿ ಗೇಟ್ ನಿಂದ ಮಾದಾಪುರ ಮಾರ್ಗದ ಮುಖ್ಯರಸ್ತೆಯ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.
ಪ್ರತಿ ಗ್ರಾಮಗಳ ರಸ್ತೆ ಅಭಿವೃದ್ಧಿಗಾಗಿ ₹10 ಲಕ್ಷ ಹಾಗೂ ಊಗಿನಹಳ್ಳಿ ಗೇಟ್‌ನಿಂದ ಮಾದಾಪುರ ಮಾರ್ಗದ ರಸ್ತೆಗೆ ₹1 ಕೋಟಿ ಅಂದಾಜು ವೆಚ್ಚದಲ್ಲಿ ಕಾಮಗಾರಿ ಆರಂಭವಾಗುತ್ತಿದೆ. ಅಧಿಕಾರಿಗಳು ಗುಣಮಟ್ಟದ ಕಾಮಗಾರಿ ನಡೆಸಲು ಸೂಚಿಸಬೇಕು ಎಂದರು.
ಸರ್ಕಾರದಿಂದ ಕ್ಷೇತ್ರಕ್ಕೆ ಬರುತ್ತಿರುವ ಅನುದಾನ ಕಡಿಮೆಯಾಗಿದೆ. ಇರುವ ಅನುದಾನ ಬಳಸಿಕೊಂಡು ಅಗತ್ಯ ಇರುವ ಗ್ರಾಮಗಳ ರಸ್ತೆ ಅಭಿವೃದ್ಧಿಗೆ ವಿಶೇಷ ಒತ್ತು ನೀಡಲಾಗಿದೆ. ಮುಂದಿನ ದಿನಗಳಲ್ಲಿ ಶಾಸಕರ ಅನುದಾನದಲ್ಲಿ ಎಲ್ಲ ಗ್ರಾಮಗಳ ರಸ್ತೆ ಅಭಿವೃದ್ಧಿ, ಮೂಲ ಸೌಲಭ್ಯಕ್ಕೆ ಗಮನಹರಿಸಲಾಗುವುದು ಎಂದು ನುಡಿದರು.
ತಾಲೂಕಿನಾದ್ಯಂತ ಮನೆಮನೆಗೆ ಗಂಗೆಯ ಜಲಜೀವನ್ ಮಿಷನ್ ಕೆಲಸ ಅರೆಬರೆಯಾಗಿವೆ. ಎಲ್ಲವನ್ನೂ ತ್ವರಿತವಾಗಿ ಮುಗಿಸಲು ಅಧಿಕಾರಿಗಳು, ಗುತ್ತಿಗೆದಾರರಿಗೆ ತಿಳಿಸಲಾಗಿದೆ. ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿ ಮಾಡಿ ಜನರ ಪ್ರೀತಿ ಗಳಿಸಬೇಕು. ಗ್ರಾಮಸ್ಥರು ನಿಮ್ಮೂರ ರಸ್ತೆ ನಿಮ್ಮ ಮನೆಯ ಕೆಲಸ ಎಂದು ತಿಳಿಯಬೇಕಿದೆ ಎಂದರು.
ಮುಂಬರುವ ಚುನಾವಣೆಯಲ್ಲಿ ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಖಚಿತವಾಗಿದೆ. ಮತ್ತೊಮ್ಮೆ ನನ್ನನ್ನು ಆಶೀರ್ವದಿಸಿದರೆ ಕ್ಷೇತ್ರದ ಜನತೆ ಭರವಸೆ ಪೂರೈಸಿ ಮಾದರಿ ತಾಲೂಕನ್ನಾಗಿ ಮಾಡುವುದಾಗಿ ಮನವಿ ಮಾಡಿದರು.
ಈ ವೇಳೆ ಲೋಕೋಪಯೋಗಿ ಇಲಾಖೆ ಅಭಿಯಂತರ ಬಸವೇಗೌಡ, ಜೆಡಿಎಸ್ ಹೋಬಳಿ ಘಟಕ ಅಧ್ಯಕ್ಷ ಕಾಯಿ ಮಂಜೇಗೌಡ, ಎಪಿಎಂಸಿ ಮಾಜಿ ಅಧ್ಯಕ್ಷ ಐನೋರಹಳ್ಳಿ ಮಲ್ಲೇಶ್, ತಾಪಂ ಮಾಜಿ ಸದಸ್ಯ ಕೃಷ್ಣೇಗೌಡ, ಕಿಕ್ಕೇರಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶೇಖರ್, ವಡಕಹಳ್ಳಿ ಮಂಜೇಗೌಡ, ಲಕ್ಷ್ಮೀಪುರ ಗ್ರಾಪಂ ಮಾಜಿ ಅಧ್ಯಕ್ಷ ಊಗಿನಹಳ್ಳಿ ಮುರುಳೀಧರ್, ಬಾಲಚಂದ್ರ, ಎಲ್‌ಐಸಿ ಅಶೋಕ್, ದೇವೇಗೌಡ, ಅರಳುಕುಪ್ಪೆ ಪ್ರತಾಪ್ ಮತ್ತಿತರರಿದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.