ಶ್ರೀರಂಗಪಟ್ಟಣ: ಗ್ಯಾಸ್ ಸಿಲಿಂಡರ್ ಸ್ಪೋಟಗೊಂಡಿದ್ದ ತಾಲೂಕಿನ ಅರಕೆರೆ ಗ್ರಾಮದ ಪುಟ್ಟೇಗೌಡರ ಮನೆಗೆ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಭೇಟಿ ನೀಡಿ ವೈಯಕ್ತಿಕ ಧನ ಸಹಾಯ ಮಾಡಿ ಸಂತ್ರಸ್ತರಿಗೆ ಧೈರ್ಯ ಹೇಳಿದರು.
ಘಟನೆ ಬಳಿಕ ತಾಲೂಕು ಆಡಳಿತ ಸ್ಥಳಕ್ಕೆ ಆಗಮಿಸಿ ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆಯೇ, ಸರ್ಕಾರದಿಂದ ಪರಿಹಾರ ನೀಡುವ ಬಗ್ಗೆ ಭರವಸೆ ನೀಡಿದ್ದಾರೆಯೇ? ಎಂಬುದನ್ನು ಸಂತ್ರಸ್ತ ಕುಟುಂಬಸ್ಥರಿಂದ ಮಾಹಿತಿ ಪಡೆದುಕೊಂಡರು.
ಈ ವೇಳೆ ಘಟನೆ ಮಾಹಿತಿ ಪಡೆದ 25 ರಿಂದ 30 ನಿಮಿಷಗಳ ನಂತರ ಶ್ರೀರಂಗಪಟ್ಟಣದಿಂದ ಅಗ್ನಿಶಾಮಕ ದಳ ವಾಹನ ಬಂದು ಬೆಂಕಿ ನಂದಿಸುವ ಕೆಲಸ ಮಾಡಿದೆ. ಅಷ್ಟರಲ್ಲಾಗಲೇ ಮನೆ ಸಂಪೂರ್ಣ ಬೆಂಕಿಗಾಹುತಿಯಾಗಿದೆ. ಹೋಬಳಿ ಕೇಂದ್ರಗಳಲ್ಲಿ ಕನಿಷ್ಠ ಒಂದು ಅಗ್ನಿಶಾಮಕ ವಾಹನ ಇದ್ದಿದ್ದರೆ ಇಂತಹ ಘಟನೆಯಿಂದ ಹೆಚ್ಚಿನ ಅವಘಡ ತಪ್ಪಿಸಬಹುದು ಎಂದು ಗ್ರಾಮಸ್ಥರು ತಮ್ಮ ಸಮಸ್ಯೆ ತೋಡಿಕೊಂಡರು.