ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಗ್ರಾಮೀಣ ರಸ್ತೆ ಒತ್ತುವರಿ, ಗ್ರಾಮಸ್ಥರಿಗೆ ಕಿರುಕುಳದ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ತಾಲೂಕಿನ ಬಣ್ಣೇನಹಳ್ಳಿ ಬಳಿಯ ಕೈಗಾರಿಕಾ ಪ್ರದೇಶದ ಫೇವರಿಚ್ ಮೆಗಾ ಫುಡ್ ಪಾರ್ಕ್ ಕಂಪನಿ ಆವರಣಕ್ಕೆ ಶಾಸಕ ಎಚ್.ಟಿ.ಮಂಜು ಭೇಟಿ ನೀಡಿ ಪರಿಶೀಲನೆ ನಡೆಸಿ ಕೈಗಾರಿಕಾ ಪ್ರದೇಶದವರು ಮಾಡಿರುವ ಒತ್ತುವರಿ ತೆರವುಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.ಬಣ್ಣೇನಹಳ್ಳಿ ಬಳಿ ಕಳೆದ 12 ವರ್ಷಗಳ ಹಿಂದೆ ಆರಂಭಗೊಂಡ ಫೇವರಿಚ್ ಫುಡ್ ಕಂಪನಿ ಗ್ರಾಮಸ್ಥರು ಗ್ರಾಮದ ದೇವಾಲಯ ಮತ್ತು ಕೆರೆ ಕಟ್ಟೆಗಳನ್ನು ಸಂಪರ್ಕಿಸುವ ಗ್ರಾಮೀಣ ರಸ್ತೆ ಮುಚ್ಚಿ ಕಾಂಪೌಂಡ್ ನಿರ್ಮಾಣ, ಗ್ರಾಮೀಣರ ಸಂಚಾರಕ್ಕೆ ಅಡ್ಡಿಪಡಿಸಿದ್ದು ಕೈಗಾರಿಕಾ ಪ್ರದೇಶ ಸುತ್ತಲ ಗ್ರಾಮಗಳ ಜನರಿಗೆ ಕಿರುಕುಳ ನೀಡುತ್ತಿರುವ ಬಗ್ಗೆ ಸಾರ್ವಜನಿಕರ ದೂರಿನ ಹಿನ್ನೆಲೆಯಲ್ಲಿ ಕೆಐಡಿಬಿ ಅಧಿಕಾರಿಗಳು ಮತ್ತು ಸ್ಥಳೀಯ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸ್ಥಳ ಪರಿಶೀಲನೆ ನಡೆಸಿ ಕಂಪನಿ ವಿರುದ್ಧ ಕ್ರಮ ವಹಿಸುವಂತೆ ಸೂಚಿಸಿದರು.
ಕೈಗಾರಿಕಾ ಪ್ರದೇಶಕ್ಕೆ ಭೂ ಸ್ವಾಧೀನ ಮಾಡಿಕೊಂಡ ಕಂಪನಿಗೆ ಭೂಮಿ ನೀಡುವಾಗ ಕೈಗಾರಿಕಾ ಪ್ರದೇಶ ವ್ಯಾಪ್ತಿಯಲ್ಲಿ 15 ಮೀಟರ್ ಅಗತ್ಯ ರಸ್ತೆ ಬಿಟ್ಟು ಕಂಪನಿ ತನ್ನ ಕಾರ್ಯ ಚಟುವಟಿಕೆ ನಡೆಸಬೇಕು ಎನ್ನುವ ಸರ್ವೇ ದಾಖಲೆಗಳನ್ನು ಸ್ಥಳದಲ್ಲಿಯೇ ಪರಿಶೀಲಿಸಿ ಖಚಿತಪಡಿಸಿಕೊಂಡ ಶಾಸಕರು, ಸಾರ್ವಜನಿಕ ರಸ್ತೆ ಮುಚ್ಚಿರುವ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಕೂಡಲೇ ರಸ್ತೆ ಬಿಟ್ಟು ಕೊಡಬೇಕು. ಕೆರೆ-ಕಟ್ಟೆಗಳಿಗೆ ಹೋಗಲು ಅಗತ್ಯ ರಸ್ತೆ ನಿರ್ಮಾಣ ಮಾಡಬೇಕು. ರೈತರಿಗೆ ಯಾವುದೇ ಕಿರುಕುಳ ನೀಡಬಾರದು. ರೈತರೊಂದಿಗೆ ಸೌಜನ್ಯದಿಂದ ವರ್ತಿಸಿ ಹೊಸ ಹೊಸ ಕೈಗಾರಿಕೆ ನಿರ್ಮಾಣ ಮಾಡಿ ಸ್ಥಳೀಯರಿಗೆ ಉದ್ಯೋಗ ನೀಡಬೇಕು ಎಂದು ಸೂಚಿಸಿದರು.
ಕಂಪನಿ ವ್ಯವಸ್ಥಾಪಕ ಜಯದೇವ್ ಅತೀ ಕಡಿಮೆ ಬೆಲೆಗೆ ರೈತರ ಭೂಮಿ ಕೊಂಡು ರೈತ ಸಮುದಾಯಕ್ಕೆ ವಂಚಿಸಿದ್ದಾರೆ. ಈ ಬಗ್ಗೆ ಗ್ರಾಮಸ್ಥರು ಪ್ರಶ್ನಿಸಿದಾಗ ಬೆದರಿಕೆ ಹಾಕಿದ್ದಾನೆ. ಕಂಪನಿ ಸುತ್ತಾ ಇರುವ ರೈತರ ಜಮೀನನ್ನು ಕಡಿಮೆ ಬೆಲೆಗೆ ಕೊಂಡು ಆನಂತರ ಅತ್ಯಧಿಕ ಬೆಲೆಗೆ ಇತರೆ ಉದ್ದಿಮೆದಾರರಿಗೆ ಮಾರಾಟ ಮಾಡುವ ಮೂಲಕ ರಿಯಲ್ ಎಸ್ಟೇಟ್ ದಂಧೆ ನಡೆಸುತ್ತಿದ್ದಾರೆಂದು ಶಾಸಕರ ಎದುರು ರೈತರು ಅಳಲು ತೋಡಿಕೊಂಡರು.ನಂತರ ಜಯದೇವ್ ಅವರನ್ನು ದೂರವಾಣಿ ಮೂಲಕ ತೀವ್ರ ತರಾಟೆಗೆ ತೆಗೆದುಕೊಂಡ ಶಾಸಕರು, ರೈತ ವಿರೋಧಿ ಚಟುವಟಿಕೆ ನಿಲ್ಲಿಸದಿದ್ದರೆ ಸುತ್ತಮುತ್ತಲ ಗ್ರಾಮಸ್ಥರ ಜೊತೆಗೂಡಿ ಹೋರಾಟ ರೂಪಿಸುವುದಾಗಿ ಎಚ್ಚರಿಸಿದರು.
ಈ ವೇಳೆ ಕೆಐಡಿಬಿ ವಿಶೇಷ ಭೂ ಸ್ವಾಧೀನ ಅಧಿಕಾರಿ ವೆಂಕಟರಾಜು, ಕಾರ್ಯಪಾಲಕ ಎಂಜಿನಿಯರ್ ಮಾದೇಶ್, ಸರ್ವೇ ಅಧಿಕಾರಿಗಳಾದ ಎಸ್.ಲೋಕೇಶ್, ಕೆ.ಟಿ.ಆನಂದ, ಬೂಕನಕೆರೆ ಉಪ ತಹಸೀಲ್ದಾರ್ ಜಗದೀಶ್, ಕಂದಾಯ ನಿರೀಕ್ಷಕಿ ಚಂದ್ರಕಲಾ, ಗ್ರಾಮ ಆಡಳಿತ ಅಧಿಕಾರಿ ಬಾಲಾಜಿ, ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಧನಂಜಯ, ನಾಗರಾಜು, ನಟೇಶ್, ಮಿಲ್ ವೆಂಕಟೇಶ್, ಆನಂದ್ ಸೇರಿದಂತೆ ಬಣ್ಣೇನಹಳ್ಳಿ ವ್ಯಾಪ್ತಿಯ ಗ್ರಾಮಸ್ಥರು ಇದ್ದರು.