ಕನ್ನಡಪ್ರಭ ವಾರ್ತೆ ಜಗಳೂರು
ಪಟ್ಟಣದಲ್ಲಿ ಹಾದು ಹೋಗಿರುವ ಮಲ್ಪೆ-ಮೊಳಕಾಲ್ಮೂರು ರಾಜ್ಯ ಹೆದ್ದಾರಿ ಒತ್ತುವರಿಯಾಗಿರುವ ಮುಖ್ಯರಸ್ತೆಯನ್ನು ತೆರವುಗೊಳಿಸುವ ಮುಖ್ಯರಸ್ತೆ ಅಗಲೀಕರಣ ಮಾಡುವ ಮೂಲಕ ಸಾರ್ವಜನಿಕರ ಕ್ಷೇಮವೇ ನನ್ನ ಆದ್ಯತೆಯಾಗಿದ್ದು, ಸಂಚಾರದ ಹಿತದೃಷ್ಟಿಯೇ ಹೊರತು ಬೇರೆ ಯಾವ ಉದ್ದೇಶವಿಲ್ಲ ಎಂದು ಶಾಸಕ ಬಿ.ದೇವೇಂದ್ರಪ್ಪ ಹೇಳಿದರು.ಪಟ್ಟಣದ ಮುಖ್ಯರಸ್ತೆ ಅಗಲೀಕರಣ ಕಾಮಗಾರಿಯನ್ನು ಗುರುವಾರ ವಿವಿಧ ಅಧಿಕಾರಿಗಳ ಜತೆ ವೀಕ್ಷಿಸಿದ ನಂತರ ಮಾತನಾಡಿದರು.
ಈ ಕಳೆದ ಒಂದು ವರ್ಷಗಳಿಂದ ರಸ್ತೆ ಅಗಲೀಕರಣ ಮಾಡುವ ಉದ್ದೇಶದಿಂದ ಹತ್ತಾರು ಬಾರಿ ಸಭೆಗಳನ್ನು ಕರೆದಿದ್ದೇವೆ. ಪಪಂ ನಿಂದ ಅಧಿಕಾರಿಗಳು ಸಾಕಷ್ಟು ಬಾರಿ ನೋಟಿಸ್ ನೀಡಿದ್ದಾರೆ. ಮೌಖಿಕವಾಗಿಯೂ ತೆರವುಗೊಳಿಸಿ ಎಂದು ಸೂಚನೆ ನೀಡಿದ್ದಾರೆ. ಆದರೂ ಕಾಮಗಾರಿ ವಿಳಂಭವಾಗುತ್ತಿರುವುದನ್ನು ಸಹಿಸಲು ಸಾಧ್ಯವಿಲ್ಲ. ಹೀಗಾಗಿ ಅಧಿಕಾರಿಗಳು ಅನಿವಾರ್ಯವಾಗಿ ಸರ್ಕಾರದ ಸೊತ್ತನ್ನು ತೆರವುಗೊಳಿಸುತ್ತಿದ್ದಾರೆ. ರಸ್ತೆಯ ಮಧ್ಯದಿಂದ ಎರಡೂ ಬದಿ ಏಳು ಮೀಟರ್ ರಸ್ತೆ ಉಳಿದ ಜಾಗದಲ್ಲಿ ಡ್ರೈನೇಜ್ ಮತ್ತು ಫುಟ್‌ಪಾತ್ ನಿರ್ಮಾಣವಾಗಲಿದೆ ಎಂದು ಹೇಳಿದರು.೬೯ ಅಡಿ ವಿಸ್ತರಣೆಗೆ ಪ್ರಸ್ತಾವನೆ: ಮುಖ್ಯರಸ್ತೆ ವಿಸ್ತರಣೆಗೆ ಅಂದಾಜು ೧೦೦ ಕೋಟಿ ರು. ಬೇಕಾಗುತ್ತದೆ. ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸಂಬಂದಪಟ್ಟ ಇಲಾಖೆ ಅಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದಾರೆ. ಈಗ ಒತ್ತುವರಿಯಾಗಿರುವ ಸರ್ಕಾರದ ಜಾಗವನ್ನಷ್ಟೇ ನಾವು ತೆರವುಗೊಳಿಸುತ್ತಿದ್ದೇವೆ. ಪ್ರಸ್ತಾವನೆಗೆ ಸಚಿವರು ಸ್ಪಂದಿಸಿದ ನಂತರ ಮಾಲೀಕರ ದಾಖಲಾತಿ ಅನುಸಾರ ಅವರಿಗೆ ಸರಕಾರದ ನಿಯಮಗಳ ಅನುಸಾರ ಬಿಡುಗಡೆ ಮಾಡಿ ನಂತರ ವಿಸ್ತರಣೆ ಮಾಡಲಾಗುವುದು ಎಂದರು.
ಕಾಂಗ್ರೆಸ್ ಮುಖಂಡರಾದ ಕೆ.ಪಿ.ಪಾಲಯ್ಯ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲೋಕ್ಯಾನಾಯ್ಕ, ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು, ಪೋಲೀಸ್ ಇಲಾಖೆಯ ಅಧಿಕಾರಿಗಳು, ಕಾಂಗ್ರೆಸ್ ಮುಖಂಡರು, ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಜರಿದ್ದರು.ರಸ್ತೆ ವಿಸ್ತರಣೆಗೆ ಸಹಕಾರ ನೀಡಿ
ಚಳ್ಳಕೆರೆ ವೃತ್ತದಿಂದ ಸರ್ಕಾರಿ ಆಸ್ಪತ್ರೆವರೆಗೆ ಜನ ವಸತಿ ಪ್ರದೇಶವಾಗಿರುವ ಕಾರಣ ಜಿಲ್ಲಾಧಿಕಾರಿ, ಎಸಿ, ತಹಸೀಲ್ದಾರ್ ಜತೆ ಸಭೆ ನಡೆಸಿ ಅಲ್ಲಿನ ನಿವಾಸಿಗಳಿಗೆ ಪುನರ್ವಸತಿ ಕಲ್ಪಿಸಿದ ನಂತರ ವಿಸ್ತರಣೆ ಮಾಡುತ್ತೇವೆ. ಈಗ ಅಗತ್ಯವಿರುವ ಕಡೆಗಳಲ್ಲಿ ವಿಸ್ತರಣೆ ಕಾರ್ಯ ಶೇ.೯೦ರಷ್ಟು ಮುಕ್ತಾಯವಾಗಿದೆ. ಅಭಿವೃದ್ಧಿಗೆ ಅನೇಕರು ಸಹಕಾರ ನೀಡಿದ್ದಾರೆ. ಕೆಲವರು ತಕರಾರು ಮಾಡುತ್ತಿದ್ದಾರೆ. ಒಂದು ವೇಳೆ ಸಹಕಾರ ನೀಡದಿದ್ದರೆ ಕಾನೂನು ಮೂಲಕವೇ ಅಧಿಕಾರಿಗಳು ಉತ್ತರಿಸುತ್ತಾರೆ ಎಂದು ಶಾಸಕ ದೇವೇಂದ್ರಪ್ಪ ಹೇಳಿದರು.