ಶಿರಸಿಯಲ್ಲಿ ರಸ್ತೆ ಗುಂಡಿ: ಸರಿಪಡಿಸಲು ಆಗ್ರಹಿಸಿ ಪ್ರತಿಭಟನೆ

KannadaprabhaNewsNetwork |  
Published : Aug 08, 2025, 01:07 AM IST
ಪೊಟೋ೭ಎಸ್.ಆರ್.ಎಸ್೩ (ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಗರದ ಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಚೇರಿ ಬೃಹತ್ ಪಾದಯಾತ್ರೆ ಮೂಲಕ ಸಾಗಿ ಪ್ರತಿಭಟನೆ ನಡೆಸಿದರು.) | Kannada Prabha

ಸಾರಾಂಶ

ಶಿರಸಿಯಲ್ಲಿ ಪ್ರತಿದಿನ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ.

ಶಿರಸಿ: ಶಿರಸಿಯಲ್ಲಿ ಪ್ರತಿದಿನ ಸಾರ್ವಜನಿಕರು ರಸ್ತೆಯಲ್ಲಿನ ಗುಂಡಿಯಲ್ಲಿ ಬಿದ್ದು ಗಂಭೀರವಾಗಿ ಗಾಯಗೊಳ್ಳುತ್ತಿದ್ದಾರೆ. ಅಮಾಯಕರು ಪ್ರಾಣಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಬಸ್‌ಗಳು ಎಲ್ಲೆಂದರಲ್ಲಿ ಕೆಟ್ಟು ನಿಲ್ಲುತ್ತಿವೆ. ಪದೇಪದೇ ಬಸ್ ಅಪಘಾತಗಳು ಸಂಭವಿಸುತ್ತಿದ್ದ ಹಿನ್ನೆಲೆಯಲ್ಲಿ ಗುರುವಾರ ಸುಮಾರು ೨೫೦ಕ್ಕೂ ಅಧಿಕ ಸಾರ್ವಜನಿಕರು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ನೇತೃತ್ವದಲ್ಲಿ ನಗರದ ಮಾರಿಕಾಂಬಾ ದೇವಾಲಯದಿಂದ ಸಹಾಯಕ ಆಯುಕ್ತರ ಕಚೇರಿ ಬೃಹತ್ ಪಾದಯಾತ್ರೆ ಮೂಲಕ ಸಾಗಿ ಪ್ರತಿಭಟನೆ ನಡೆಸಿ, ಮನವಿ ಸಲ್ಲಿಸಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅನಂತಮೂರ್ತಿ ಹೆಗಡೆ ಮಾತನಾಡಿ, ಶಿರಸಿಯಲ್ಲಿ ಶ್ರೀನಗರ ಶಾಲೆಯ ಶಿಕ್ಷಕಿಯೋರ್ವಳು ಹೊಂಡ ತಪ್ಪಿಸಲು ಹೋಗಿ ಗಾಯಗೊಂಡಿದ್ದಾಳೆ. ಇನ್ನೋರ್ವ ಶಿಕ್ಷಕಿ ಗಂಭೀರ ಸ್ಥಿತಿಯಲ್ಲಿದ್ದಾಳೆ. ದಿನ ದಿನವೂ ನಗರದಲ್ಲಿ ಈ ಬಗೆಯ ರಸ್ತೆ ಗುಂಡಿಗಳಿಂದ ಅಪಾಯವಾಗುವ ಪ್ರಕರಣಗಳು ದಾಖಲಾಗುತ್ತಲೇ ಇವೆ. ಇನ್ನು ಎಷ್ಟು ಜನ ಪ್ರಾಣ ಕಳೆದುಕೊಳ್ಳಬೇಕು? ಶಿರಸಿಯಲ್ಲಿ ಸುಮಾರು ೧,೫೦೦ ಕಿಮೀ ಗ್ರಾಮೀಣಾಭಿವೃದ್ಧಿ ರಸ್ತೆಗಳಿವೆ. ಎಲ್ಲಿಯೂ ಗುಂಡಿ ಮುಚ್ಚುವ ಕೆಲಸ ಆಗಿಲ್ಲ. ಪಿಡಬ್ಲ್ಯೂಡಿ ರಸ್ತೆಗಳದ್ದೂ ಇದೆ ಕತೆ. ಎಲ್ಲ ಕಡೆಯೂ ರಸ್ತೆ ಹಾಳಾಗಿದೆ. ಸಮಸ್ಯೆ ಬಗೆಹರಿಸುವಂತೆ ನಾವೆಲ್ಲರೂ ಶಾಸಕರನ್ನು ಆಗ್ರಹಿಸುತ್ತೇವೆ ಎಂದರು.

ಎಲ್ಲ ಊರುಗಳಿಗೆ ಬಸ್ಸುಗಳು ಸರಿಯಾಗಿ ಬರುತ್ತಿಲ್ಲ. ಬಸ್ಸುಗಳು ರಸ್ತೆ ಮಧ್ಯದಲ್ಲಿಯೇ ಕೆಟ್ಟು ನಿಲ್ಲುತ್ತವೆ. ಕೆಟ್ಟು ನಿಂತ ಬಸ್ಸುಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲ. ಸರಿಯಾದ ನಿರ್ವಹಣೆಯೇ ಇಲ್ಲ. ಇರುವ ೧೪೯ ಬಸ್‌ಗಳಲ್ಲಿ ೭೯ ಬಸ್ ೧೦ ಲಕ್ಷ ಕಿಮೀಗೂ ಅಧಿಕ ದೂರ ಓಡಿದೆ. ಅಂತಹ ಬಸ್‌ಗಳಲ್ಲಿ ನಮ್ಮ ಮಕ್ಕಳನ್ನು ಶಾಲೆಗಳಿಗೆ ಕಳುಹಿಸಲಾಗುತ್ತದೆ. ಮಕ್ಕಳ ಜೀವಗಳಿಗೆ ಹೆಚ್ಚು ಕಡಿಮೆ ಆದರೆ ಯಾರು ಹೊಣೆ? ರಸ್ತೆ ಗುಂಡಿಗಳಿಂದ ಅಪಘಾತ ಸಂಭವಿಸಿ ಆಗುವ ನಷ್ಟಕ್ಕೆ ನೀವು ಹೊಣೆ ಆಗುತ್ತೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ರಮೇಶ ನಾಯ್ಕ ಕುಪ್ಪಳ್ಳಿ, ಬಿಜೆಪಿ ನಗರ ಮಂಡಲ ಪ್ರದಾನ ಕಾರ್ಯದರ್ಶಿ ಮಹಾಂತೇಶ ಹಾದಿಮನಿ, ಸಾಮಾಜಿಕ ಮುಖಂಡ ರಾಮು ಕಿಣಿ, ಹುತ್ಗಾರ ಗ್ರಾಪಂ ಉಪಾಧ್ಯಕ್ಷೆ ಶೋಭಾ ನಾಯ್ಕ, ಹಿರಿಯ ಹೋರಾಟಗಾರ ಜಯಶೀಲ ಗೌಡರ್, ಯುವ ಮುಖಂಡ ಮಂಜುನಾಥ ಪಾಟೀಲ್ ದಾಸನಕೊಪ್ಪ, ಪ್ರಮುಖರಾದ ಅನಿಲ ಕರಿ, ಚಂದ್ರಕಾಂತ ಹೆಗಡೆ ಕೊಳಗಿಬೀಸ್, ರವಿ ಹೆಗಡೆ ಹಳದೋಟ, ಪವಿತ್ರ ಹೊಸೂರು, ಅನಸೂಯಾ ಕಡಬಾಳ, ಜಿ.ವಿ. ಹೆಗಡೆ ಓಣಿಕೇರಿ, ಪ್ರಭಾವತಿ ಗೌಡ, ದೀಪಾ ನಾಯ್ಕ, ರಾಮು ಕಿಣಿ, ವಿ.ಎಂ. ಹೆಗಡೆ ಕಬ್ಬೆ, ನಾಗೇಂದ್ರ ತೆಪ್ಪಾರ್, ವಿಶ್ವನಾಥ ಬನವಾಸಿ, ಸಂತೋಷ ಗೌಡರ್, ಆದರ್ಶ ಪೈ, ಗಿರೀಶ ಸೋವಿನಕೊಪ್ಪ, ನಿರ್ಮಲಾ ಶೆಟ್ಟಿ ರಾಜು ಹೆಗಡೆ ಸೇರಿದಂತೆ ೨೫೦ಕ್ಕೂ ಅಧಿಕ ಪ್ರಮುಖರು ಭಾಗಿಯಾಗಿದ್ದರು.

PREV

Recommended Stories

ರಾಜ್ಯದಲ್ಲಿ ದ್ವಿಭಾಷಾ ನೀತಿಗೆ ಶಿಕ್ಷಣ ಆಯೋಗ ಶಿಫಾರಸು
ರೈತರಿಗೆ ಸರ್ಕಾರದ ಗುಡ್ ನ್ಯೂಸ್