ರಾಣಿಬೆನ್ನರಿನಲ್ಲಿ ಜನರ ಜೀವ ಹಿಂಡುತ್ತಿವೆ ರಸ್ತೆ ಗುಂಡಿ!

KannadaprabhaNewsNetwork |  
Published : Sep 20, 2025, 01:01 AM IST
ಫೋಟೊ ಶೀರ್ಷಿಕೆ: 19ಆರ್‌ಎನ್‌ಆರ್2ರಾಣಿಬೆನ್ನೂರು ನಗರದ ಹಳೇ ಮಾಗೋಡ ರಸ್ತೆಯ ಮಧ್ಯದಲ್ಲಿ ಬಿದ್ದಿರುವ ಆಳವಾದ ಗುಂಡಿಗಳುಫೋಟೊ ಶೀರ್ಷಿಕೆ: 19ಆರ್‌ಎನ್‌ಆರ್2ಎ, ಬಿ ರಾಣಿಬೆನ್ನೂರು ನಗರದ ಶಂಕರ ಚಿತ್ರಮಂದಿರ ಬಳಿ ಹಳೇ ಪಿ.ಬಿ.ರಸ್ತೆ ಧೂಳುಮಯವಾಗಿರುವುದು  | Kannada Prabha

ಸಾರಾಂಶ

ನಗರದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗಳ ತುಂಬಾ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಗುಂಡಿಗಳ ನಡುವೆ ರಸ್ತೆಗಳಿವೆಯೋ ಎನ್ನುವಂತೆ ಭಾಸವಾಗುತ್ತದೆ. ಹೀಗಾಗಿ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ವಾಹನಗಳನ್ನು ಚಲಾಯಿಸುವಂತಾಗಿದೆ.

ಬಸವರಾಜ ಸರೂರ

ರಾಣಿಬೆನ್ನೂರು: ಜಿಲ್ಲೆಯಲ್ಲಿಯೇ ಅತಿ ದೊಡ್ಡ ನಗರವೆಂಬ ಹೆಗ್ಗಳಿಕೆ ಹೊಂದಿರುವ ರಾಣಿಬೆನ್ನೂರು ನಗರದಲ್ಲಿ ರಸ್ತೆಗಳ ಪರಿಸ್ಥಿತಿ ಮಾತ್ರ ಅಯೋಮಯವಾಗಿದ್ದು, ಪ್ರತಿದಿನ ನಗರದ ಜನರು ಬವಣೆ ಪಡುವಂತಾಗಿದೆ. ನಗರದ ಬಹುತೇಕ ಪ್ರದೇಶಗಳಲ್ಲಿ ರಸ್ತೆಗಳ ತುಂಬಾ ಗುಂಡಿಗಳು ನಿರ್ಮಾಣವಾಗಿವೆ. ಇದರಿಂದ ಗುಂಡಿಗಳ ನಡುವೆ ರಸ್ತೆಗಳಿವೆಯೋ ಎನ್ನುವಂತೆ ಭಾಸವಾಗುತ್ತದೆ. ಹೀಗಾಗಿ ವಾಹನ ಸವಾರರು ಅಂಗೈಯಲ್ಲಿ ಜೀವ ಹಿಡಿದು ವಾಹನಗಳನ್ನು ಚಲಾಯಿಸುವಂತಾಗಿದೆ.

ಧೂಳುಮಯವಾದ ರಸ್ತೆ: ಸುಮಾರು ಒಂದು ತಿಂಗಳ ಹಿಂದೆ ನಗರದ ಶಂಕರ ಚಿತ್ರಮಂದಿರದ ಬಳಿ ಕುಡಿಯುವ ನೀರಿನ ಪೈಪ್‌ಲೈನ್ ಸಲುವಾಗಿ ಹಳೇ ಪಿ.ಬಿ. ರಸ್ತೆಯನ್ನು ಎತ್ತರಿಸಲಾಗಿದೆ. ಆದರೆ ಅಲ್ಲಿ ಕಾಂಕ್ರೀಟ್ ಕಾಮಗಾರಿ ಮುಗಿದ ಮೇಲೆ ಡಾಂಬರೀಕರಣ ಮಾಡದ ಕಾರಣ ರಸ್ತೆಯ ಎರಡೂ ಬದಿಯಲ್ಲಿರುವ ಅಂಗಡಿಗಳು ಧೂಳುಮಯವಾಗಿವೆ. ರಸ್ತೆಯಲ್ಲಿ ಯಾವುದಾದರೂ ಒಂದು ವಾಹನ ಸಾಗಿದರೆ ಸಾಕು ಧೂಳು ಏಳುತ್ತದೆ. ಇದರಿಂದ ಅಲ್ಲಿನ ವರ್ತಕರು ಹೈರಾಣಾಗಿದ್ದಾರೆ. ಅದ್ವಾನವಾಗಿರುವ ರಸ್ತೆ: ಇಲ್ಲಿನ ರಾಜೇಶ್ವರಿ ನಗರಕ್ಕೆ ಹೊಂದಿಕೊಂಡಿರುವ ಹಳೇ ಮಾಗೋಡ ರಸ್ತೆ (ದ್ವಿಪಥ ರಸ್ತೆ) ಮೂರ‍್ನಾಲ್ಕು ನಗರಗಳಿಗೆ ಸಂಪರ್ಕ ಕಲ್ಪಿಸುತ್ತದೆ. ಇದು ಸಂಪೂರ್ಣ ಹದಗೆಟ್ಟಿದ್ದು, ವಾಹನಗಳ ಸಂಚಾರವಿರಲಿ, ಜನರು ನಡೆದುಕೊಂಡು ಹೋಗದಷ್ಟು ಅದ್ವಾನವಾಗಿದೆ. ರಸ್ತೆ ಹದಗೆಟ್ಟಿರುವುದರಿಂದ ಅನೇಕ ದ್ವಿಚಕ್ರ ವಾಹನ ಸವಾರರು ಅಪಘಾತಕ್ಕಿಡಾಗಿ ಆಸ್ಪತ್ರೆಗೆ ಸೇರುವಂತಾಗಿದೆ. ನಗರೋತ್ಥಾನ ಯೋಜನೆಯಡಿ ರಸ್ತೆ ನಿರ್ಮಾಣದ ಗುತ್ತಿಗೆ ಪಡೆದ ಗುತ್ತಿಗೆದಾರನ ನಿರ್ಲಕ್ಷ್ಯತನದಿಂದ ಕಾಮಗಾರಿ ನನೆಗುದಿಗೆ ಬಿದ್ದಿತ್ತು. ಒಟ್ಟಾರೆ ರಸ್ತೆಗಳು ಹಾಳಾಗಿರುವುದರಿಂದ ನಗರದ ಜನತೆ ಸ್ಥಳೀಯ ನಗರಸಭೆಗೆ ಹಿಡಿಶಾಪ ಹಾಕುವಂತಾಗಿದೆ.

ದುರಸ್ತಿ ಮಾಡಿ: ನಗರದ ಜನರು ಕಾಲ ಕಾಲಕ್ಕೆ ನಗರಸಭೆ ತೆರಿಗೆ ಪಾವತಿಸುತ್ತಾರೆ. ಜನತೆಗೆ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸುವುದು ನಗರಸಭೆ ಕರ್ತವ್ಯವಾಗಿದೆ. ಇನ್ನು ಮೇಲಾದರೂ ನಗರಸಭೆ ಅಧಿಕಾರಿಗಳು ಹದಗೆಟ್ಟ ರಸ್ತೆಗಳನ್ನು ದುರಸ್ತಿಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಜಗದೀಶ ಅಂಕಲಕೋಟಿ ಆಗ್ರಹಿಸಿದರು.ಶೀಘ್ರ ಕಾಮಗಾರಿ: ನಗರದ ಶಂಕರ ಚಿತ್ರಮಂದಿರದ ಬಳಿ ಹಳೇ ಪಿ.ಬಿ. ರಸ್ತೆಗೆ ಒಂದೆರಡು ದಿನಗಳಲ್ಲಿ ಡಾಂಬರೀಕರಣ ಮಾಡುವ ಕೆಲಸ ಪ್ರಾರಂಭಿಸಲಾಗುವುದು. ಹಳೇ ಮಾಗೋಡ ರಸ್ತೆ ದುರಸ್ತಿ ಕಾರ್ಯ ಗುತ್ತಿಗೆದಾರನ ನಿರ್ಲಕ್ಷ್ಯತನದಿಂದ ವಿಳಂಬವಾಗಿತ್ತು. ಇದಕ್ಕಾಗಿ ಆತನಿಗೆ ಎಚ್ಚರಿಕೆ ನೀಡಲಾಗಿದ್ದು, ಆದಷ್ಟು ಶೀಘ್ರ ಕೆಲಸ ಪ್ರಾರಂಭವಾಗಲಿದೆ ಎಂದು ನಗರಸಭೆ ಆಯುಕ್ತ ಎಫ್.ಐ. ಇಂಗಳಗಿ ತಿಳಿಸಿದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ