ಉ.ಕ ಜಿಲ್ಲೆಯ 73,206 ಅರ್ಜಿ ತಿರಸ್ಕರಿಸಿ ಕೇಂದ್ರಕ್ಕೆ ವರದಿ: ರವೀಂದ್ರ ನಾಯ್ಕ

KannadaprabhaNewsNetwork |  
Published : Sep 20, 2025, 01:01 AM IST
ಕರಪತ್ರ ಬಿಡುಗಡೆಗೊಳಿಸಿದರು  | Kannada Prabha

ಸಾರಾಂಶ

ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವ ಅಭಿಯಾನಕ್ಕೆ ಶಿರಸಿಯಲ್ಲಿ ಅ.4ರಂದು ಚಾಲನೆ ನೀಡಲಾಗುವುದು

ಕಾರವಾರ: ಜಿಲ್ಲೆಯಲ್ಲಿ ಅರಣ್ಯವಾಸಿಗಳ ಅರ್ಜಿಯನ್ನು ಪುನರ್ ಪರಿಶೀಲಿಸದೇ ಕಾನೂನು ಬಾಹಿರವಾಗಿ ಅರ್ಜಿ ತಿರಸ್ಕರಿಸಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ರಾಜ್ಯ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸುವ ಅಭಿಯಾನಕ್ಕೆ ಶಿರಸಿಯಲ್ಲಿ ಅ.4ರಂದು ಚಾಲನೆ ನೀಡಲಾಗುವುದು ಎಂದು ರಾಜ್ಯ ಅರಣ್ಯ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ತಿಳಿಸಿದರು.ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ಮೇಲ್ಮನವಿಯ ಕರಪತ್ರ ಬಿಡುಗಡೆಗೊಳಿಸಿದರು.

ಅರಣ್ಯ ಹಕ್ಕು ಕಾಯ್ದೆಯಡಿ ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲಿಸಬೇಕೆಂಬ ಸುಪ್ರಿಂ ಕೋರ್ಟ್ ನಿರ್ದೆಶನವನ್ನು ಅನುಸರಿಸದೇ ಸುಪ್ರೀಂಕೋರ್ಟ್ ಮತ್ತು ಕೇಂದ್ರ ಸರ್ಕಾರದ ಮಾರ್ಗದರ್ಶನಕ್ಕೆ ವ್ಯತಿರಿಕ್ತವಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದ ವರದಿಯಲ್ಲಿ ರಾಜ್ಯದಲ್ಲಿ 2,53,269 ಅರಣ್ಯವಾಸಿಗಳ ಅರ್ಜಿ ಪುನರ್ ಪರಿಶೀಲಿಸದೇ ತಿರಸ್ಕರಿಸಿದೆ ಎಂದು ಉಲ್ಲೇಖಿಸಲ್ಪಟ್ಟಿದೆ ಎಂದು ಅವರು ಹೇಳಿದರು.

ವರದಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ 73 ಸಾವಿರದ 206 ಅರ್ಜಿ ತಿರಸ್ಕರಿಸಿದ ಅಂಶ ಪ್ರಸ್ತಾಪಿಸಲಾಗಿದೆ. ಪುನರ್ ಪರಿಶೀಲಿಸದೆ ಕಾನೂನು ಬಾಹಿರವಾಗಿ ಅರ್ಜಿ ತಿರಸ್ಕರಿಸಿರುವ ಹಿನ್ನಲೆಯಲ್ಲಿ ಆದೇಶಕ್ಕೆ ರಾಜ್ಯಾದ್ಯಂತ ಅರಣ್ಯವಾಸಿಗಳಿಂದ ರಾಜ್ಯ ಸರ್ಕಾರಕ್ಕೆ ಆಕ್ಷೇಪಣಾ ಪತ್ರ ಸಲ್ಲಿಸಲು ತೀರ್ಮಾನಿಸಲಾಗಿದೆ ಎಂದು ಅವರು ತಿಳಿಸಿದರು.

ಆಕ್ಷೇಪಣಾ ಪತ್ರದಲ್ಲಿ ರಾಜ್ಯದಲ್ಲಿ ಒಟ್ಟು ಅರ್ಜಿಗಳಲ್ಲಿ ಶೇ.87.77 ಅರಣ್ಯವಾಸಿಗಳ ಅರ್ಜಿಗಳು ತಿರಸ್ಕರಿಸಲ್ಪಟ್ಟಿದೆ. ರಾಜ್ಯದಲ್ಲಿ ಶೇ.3.2 ರಷ್ಟು ಅರ್ಜಿಗಳಿಗೆ ಸಾಗುವಳಿ ಹಕ್ಕು ದೊರಕಿದ್ದು, ವರದಿಯಲ್ಲಿ ಪ್ರಕಟವಾಗಿದೆ ಎಂದು ಅವರು ತಿಳಿಸಿದರು.

ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಂದರ್ಭದಲ್ಲಿ ರಾಜ್ಯ ಮುಖ್ಯ ಕಾರ್ಯದರ್ಶಿ, ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹಾಗೂ ಸಂಬಂಧಿಸಿದ ಸಚಿವರ ಗಮನಕ್ಕೆ ತರದೇ ವರದಿ ಸಲ್ಲಿಸಿರುವುದು ಗಮನಕ್ಕೆ ಬಂದಿದ್ದು ಮುಖ್ಯ ಕಾರ್ಯದರ್ಶಿಯವರ ಈ ಕಾರ್ಯವು ವಿಷಾದಕರ. ಅರಣ್ಯ ಭೂಮಿ ಹಕ್ಕಿಗಾಗಿ ಅರಣ್ಯವಾಸಿಗಳು ಸುಪ್ರಿಂ ಕೊರ್ಟನಲ್ಲಿ ಪುನರ್ ಪರಿಶೀಲಿಸದೇ, ತಿರಸ್ಕರಿಸಿರುವ ಕುರಿತು ನ್ಯಾಯಾಂಗ ನಿಂದನೆ ಅರ್ಜಿ ಮೂಲಕ ಕಾನೂನಾತ್ಮಕ ಹೋರಾಟ ಮುಂದುವರೆಸಲಾಗುವುದು ಎಂದರು.

ವೇದಿಕೆಯ ಕುಮಟಾ ಅದ್ಯಕ್ಷ ಮಂಜುನಾಥ ಮರಾಠಿ, ಯಲ್ಲಾಪುರ ಅಧ್ಯಕ್ಷ ಭೀಮಸೀ ವಾಲ್ಮಿಕಿ, ಅಮೋಜ್ ಮಲ್ಲಾಪುರ, ಸಂಚಾಲಕ ರಾಘವೇಂದ್ರ ನಾಯ್ಕ ಕವಂಚೂರು, ಸುಬ್ರಾಯ ನಾಯ್ಕ ಮಂಕಿ, ಶಿವಾನಂದ ಜೋಯಿಡಾ ಮತ್ತಿತರರು ಇದ್ದರು.

PREV

Recommended Stories

ಶಿವಯೋಗಿ ಸೊಸೈಟಿಗೆ 20.97 ಲಕ್ಷ ಲಾಭ
ಯುವಜನತೆಗೆ ರಕ್ತದಾನದ ಮಹತ್ವ ತಿಳಿಸಿಕೊಡಿ